ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್. ಪ್ರತಾಪ್ ರೆಡ್ಡಿ ಸಂದರ್ಶನ: ವರ್ಷಕ್ಕೆ ಸಾವಿರ ಜನರಿಗೆ ಉದ್ಯೋಗ

ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್. ಪ್ರತಾಪ್ ರೆಡ್ಡಿ ಭರವಸೆ
Published 1 ಜೂನ್ 2024, 7:17 IST
Last Updated 1 ಜೂನ್ 2024, 7:17 IST
ಅಕ್ಷರ ಗಾತ್ರ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಬಳ್ಳಾರಿಯ ಎನ್. ಪ್ರತಾಪ್ ರೆಡ್ಡಿ ಸ್ಪರ್ಧಿಸಿದ್ದಾರೆ. ಇವರು ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಗೆಲುವು ಸಾಧಿಸಲೇಬೇಕು ಎಂಬ ಹಂಬಲದಿಂದ ಆಮ್ ಆದ್ಮಿ ಪಕ್ಷದ ಬಾಹ್ಯ ಬೆಂಬಲದೊಂದಿಗೆ ತಿಂಗಳುಗಳ ಹಿಂದೆಯೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಡುವಿಲ್ಲದ ಓಡಾಟದ ನಡುವೆಯೂ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ಕ ಭಾಗ ಇಲ್ಲಿದೆ.

* ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳಲ್ಲಿ ಓಡಾಡಿ ಪ್ರಚಾರ ಮಾಡುತ್ತಿದ್ದೇನೆ. 2018ರಲ್ಲಿ ಸೋತರೂ ಜನರಿಂದ ದೂರವಾಗದೇ ಅವರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದೆ. ಅದೇ ಇವತ್ತು ಪ್ರಚಾರದ ವಿಶ್ವಾಸ ಹೆಚ್ಚಿಸಿದೆ.

* ಎರಡನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದೀರಿ. ಮತದಾರರ ಪ್ರತಿಕ್ರಿಯೆ ಹೇಗಿದೆ?

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಮ್ಮ ಅವಧಿಯಲ್ಲಿ ಏನೆಲ್ಲ ಮಾಡಿದ್ದರು ಎಂಬುದನ್ನು ಮತದಾರರು ನೋಡಿದ್ದಾರೆ. ಪದವೀಧರರು ಪ್ರಬಲವಾದ ಪರ್ಯಾಯ ನಾಯಕನಿಗಾಗಿ ಎದುರು ನೋಡುತ್ತಿದ್ದಾರೆ. ತಮ್ಮ ಪರವಾಗಿ ಕೆಲಸ ಮಾಡುತ್ತಾರೆ ಎಂದು ಮುಂದೆ ನಿಂತು ವಿಶ್ವಾಸ ಮೂಡಿಸಿದರೆ ಪಕ್ಷ, ಜಾತಿ ನೋಡದೆ ಮತ ಹಾಕುತ್ತಾರೆ.

* ಉದ್ಯಮಿಯಾದ ನೀವು, ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಣಕ್ಕಿಳಿದಿರುವುದ ಉದ್ದೇಶವೇನು?

ರಿಯಲ್ ಎಸ್ಟೇಟ್ ಉದ್ಯಮಿಯಾದರೂ 1995ರಿಂದ 2000ರ ವರೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದೆ. ಜೆಡಿಎಸ್‌ ಪಕ್ಷದಲ್ಲಿಯೂ ಇದ್ದೆ. ಬಳ್ಳಾರಿಯಲ್ಲಿ ಇಸ್ಕಾನ್‌ನ ಅಕ್ಷಯ ಪಾತ್ರೆ ಫೌಂಡೇಷನ್‌ಗೆ 4 ಎಕರೆ, ವೀರಶೈವ ಪಂಚಮಸಾಲಿ ಪೀಠಕ್ಕೆ 2 ಎಕರೆ ಜಮೀನು ಸೇರಿ ಹಲವು ದಾನ– ಧರ್ಮ ಮಾಡಿದ್ದೇನೆ. ರಾಜಕೀಯದಲ್ಲಿ ಗುರುತಿಸಿಕೊಂಡರೆ ಸಮಾಜ ಸೇವೆಗೆ ಇನ್ನಷ್ಟು ಒತ್ತುಕೊಡಬಹುದು ಎಂದು ಸ್ಪರ್ಧಿಸುತ್ತಿದ್ದೇನೆ.

* ಪದವೀಧರರು ನಿಮಗೇ ಏಕೆ ಮತ ಹಾಕಬೇಕು?

ಲಾಭದ ನಿರೀಕ್ಷೆಯನ್ನು ಇರಿಸಿಕೊಂಡು ರಾಜಕೀಯಕ್ಕೆ ಬಂದಿಲ್ಲ. ವ್ಯಾಪಾರ, ದುಡಿಮೆಯಿಂದ ಬಂದ ಹಣವನ್ನು ರಾಜಕೀಯಕ್ಕೆ ಹಾಕಿದ್ದೇನೆ ಹೊರತು ರಾಜಕೀಯದಿಂದ ವ್ಯಾಪಾರ ಮಾಡಿಲ್ಲ. ರಾಜಕೀಯದಲ್ಲಿ ನಾನು ನಯಾ ಪೈಸೆಯೂ ಮುಟ್ಟಿಲ್ಲ. ಇದೇ ಮಾತನ್ನು ಪ್ರತಿ ಸ್ಪರ್ಧಿಗಳು ಎದೆ ಮುಟ್ಟಿಕೊಂಡು ಹೇಳಲಿ. ಪದವೀಧರರಿಗಾಗಿ ಕೇವಲ ಆಶ್ವಾಸನೆಗಳನ್ನು ಇಟ್ಟುಕೊಂಡು ಬಂದಿಲ್ಲ, ಉದ್ಯೋಗದ ಹಾದಿ ತೋರಿಸುವ ಮಾರ್ಗಗಳೂ ನನ್ನ ಬಳಿ ಇವೆ.

* ಪದವೀಧರರು ಎದುರಿಸುತ್ತಿರುವ ಸಮಸ್ಯೆಗಳೇನು? ನಿಮ್ಮ ಬಳಿ ಇರುವ ಪರಿಹಾರಗಳೇನು?

ನಮ್ಮ ಭಾಗದ ಯುವಕರಿಗೆ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ಕಾರ್ಪೊರೇಟ್‌ ಸಂಸ್ಥೆಗಳ ನೇಮಕಾತಿಯ ಸಂದರ್ಶನಗಳಿಗೆ ಮಾರ್ಗದರ್ಶನದ ಅಗತ್ಯವಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಪಾಲಿಟೆಕ್ನಿಕ್, ಐಟಿಐ, ಪದವಿ ಕಾಲೇಜುಗಳಲ್ಲಿ ಒಂದು ಪ್ರತ್ಯೇಕ ಸೆಲ್‌ ತೆರೆಯಬೇಕು. ಕೋರ್ಸ್‌ನ ಅಂತಿಮ ವರ್ಷದಲ್ಲಿ ಇರುವಾಗಲೇ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಮತ್ತು ಮಾರ್ಗದರ್ಶನ ನೀಡಿದರೆ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ.

* ಪದವೀಧರರಿಗೆ ಆಗಬೇಕಾಗಿರುವ ಅಗತ್ಯ ಕೆಲಸಗಳೇನು?

ದೊಡ್ಡ ಶಾಮಿಯಾನ ಹಾಕಿ, ಹತ್ತಾರು ಸಾವಿರ ಜನರನ್ನು ಸೇರಿಸಿ, ನೂರಾರು ಕಂಪನಿಗಳನ್ನು ಕರೆಯಿಸಿ ಜಾತ್ರೆ ತರಹ ಉದ್ಯೋಗ ಮೇಳ ಮಾಡಿದರೆ ಪದವೀಧರರಿಗೆ ನಿರೀಕ್ಷಿತ ಕೆಲಸ ಸಿಗುವುದಿಲ್ಲ. ಅದರ ಬದಲು ಕಾರ್ಪೊರೇಟ್ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ಉದ್ಯೋಗ ಮೇಳಗಳು ನಡೆಸಬೇಕು. ಕಾಲಕಾಲಕ್ಕೆ ಸರ್ಕಾರಿ ಹುದ್ದೆಗಳ ನೇಮಕಾತಿಗಳು ಆಗಬೇಕು.

* ಒಂದು ವೇಳೆ ಪರಿಷತ್‌ಗೆ ಆಯ್ಕೆಯಾದರೆ, ಸಂಖ್ಯಾಬಲ ಇಲ್ಲದೆ ಒಬ್ಬರೇ ಹೇಗೆ ಧ್ವನಿ ಎತ್ತುತ್ತೀರಿ?‌

ಮತದಾರರೇ ನನಗೆ ಹೈಕಮಾಂಡ್ ಆಗಿದ್ದರಿಂದ ಪರಿಷತ್‌ನಲ್ಲಿ ಮುಕ್ತವಾಗಿ ನಮ್ಮ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದು. ನನ್ನ ಮೇಲೆ ಯಾರ ಹಿಡಿತವೂ ಇರುವುದಿಲ್ಲ. ಪದವೀಧರರಿಗೆ ಅಗತ್ಯವಾದ ವಿಚಾರಗಳನ್ನು ಮಂಡಿಸುವ ಸ್ವಾತಂತ್ರ್ಯ ಇರುತ್ತದೆ.

ಗೆದ್ದರೆ ಏನೆಲ್ಲ ಕೆಲಸಗಳನ್ನು ಮಾಡುತ್ತೀರಿ?

ನಮ್ಮದೇ ಕುಟುಂಬದ ಶ್ರೀ ಸಾಯಿ ಸರ್ವೀಸ್ ಟ್ರಸ್ಟ್ ಇದೆ. ಅದರಡಿ ಉದ್ಯೋಗ ಮೇಳ ಮಾಡಲು ಖಾಸಗಿ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಪಾಲಿಟೆಕ್ನಿಕ್ ಐಟಿಐ ಮತ್ತು ಪದವಿಯ ಕೊನೆಯ ವರ್ಷದಲ್ಲಿ ಇದ್ದವರ ದತ್ತಾಂಶ ಕಲೆಹಾಕಿ ಅವರಲ್ಲಿನ ವಿಷಯವಾರು ಪರಿಣಿತಿ ಆಸಕ್ತಿ ಪಠ್ಯ ಹೊರತಾದ ಚಟುವಟಿಕಗಳ ಕೌಶಲಗಳನ್ನು ತಿಳಿದುಕೊಂಡು ಪ್ರತಿ ವಿದ್ಯಾರ್ಥಿಯ ಪ್ರತ್ಯೇಕ ಫೈಲ್ ಮಾಡುತ್ತೇವೆ. ಒಪ್ಪಂದ ಮಾಡಿಕೊಂಡ ಕಂಪನಿಗಳಿಗೆ ಅದನ್ನು ಕಳುಹಿಸಿ ಸಂದರ್ಶಗಳನ್ನು ಎದುರಿಸಲು ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ಕೊಡುತ್ತೇವೆ. ಪ್ರತಿ 6–7 ತಿಂಗಳಿಗೆ ಒಮ್ಮೆ ಕಾರ್ಪೊರೇಟ್ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥಿತವಾಗಿ ಉದ್ಯೋಗ ಮೇಳ ಮಾಡಿ ವರ್ಷಕ್ಕೆ ಕನಿಷ್ಠ 1000 ಜನರಿಗೆ ಕೆಲಸ ಕೋಡಿಸುವ ಗುರಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT