ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ವಿವಸ್ತ್ರಗೊಳಿಸಿ ಚಿತ್ರಹಿಂಸೆ: ತೀವ್ರ ಖಂಡನೆ

ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಘನೆಗಳಿಂದ ಪ್ರತಿಭಟನೆ
Published 15 ಮೇ 2024, 5:01 IST
Last Updated 15 ಮೇ 2024, 5:01 IST
ಅಕ್ಷರ ಗಾತ್ರ

ಕಲಬುರಗಿ: ಕಾರು ವ್ಯಾಪಾರಿ ಸೇರಿ ಮೂವರನ್ನು ಕೋಣೆಯಲ್ಲಿ ಕೂಡಿಹಾಕಿ, ವಿವಸ್ತ್ರಗೊಳಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬಿಜೆಪಿ, ನವ ಕಲ್ಯಾಣ ಕರ್ನಾಟಕ ಮಡಿವಾಳ ಸಂಘ, ಹಿಂದೂ ಜಾಗೃತಿ ಸೇನೆ ಸೇರಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸರ್ದಾರ್ ವಲ್ಲಭಭಾಯ್‌ ಪಟೇಲ್ (ಎಸ್‌ವಿಪಿ) ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನೂರಾರು ಪ್ರತಿಭಟನಾಕಾರರು ಎಸ್‌ವಿಪಿ ವೃತ್ತದಲ್ಲಿ ಜಮಾಯಿಸಿದರು. ಮಾನವ ಸರಪಳಿಸಿ ನಿರ್ಮಿಸಿ, ವಾಹನಗಳ ಸಂಚಾರ ತಡೆದರು. ಆರೋಪಿಗಳ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿದರು.

‘ಸೆಕೆಂಡ್ ಹ್ಯಾಂಡ್ ಕಾರ್ ವ್ಯಾಪಾರಿ ಹಾಗೂ ಇತರೆ ಇಬ್ಬರನ್ನು ಕೂಡಿಹಾಕಿದ ದುಷ್ಕರ್ಮಿಗಳು ನಾನಾ ರೀತಿಯ ಚಿತ್ರಹಿಂಸೆ ಕೊಟ್ಟಿದ್ದಾರೆ. ವಿವಸ್ತ್ರಗೊಳಿಸಿ ಗುಪ್ತಾಂಗಗಳಿಗೆ ಶಾಕ್ ಕೊಟ್ಟಿದ್ದಾರೆ. ಮನ ಬಂದಂತೆ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಸಂತ್ರಸ್ತರು ನರಕಯಾತನೆ ಅನುಭವಿಸಿ ನಾಲ್ಕೈದು ದಿನಗಳು ಕಳೆದರೂ ಜಿಲ್ಲಾಡಳಿತವು ನೊಂದವರ ನೆರವಿಗೆ ಬಂದಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಇಂತಹ ಅಮಾನವೀಯ ಕೃತ್ಯ ನಡೆದ ಬಳಿಕ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡಿದೆ. ಆರೋಪಿಗಳು ಮೂವರನ್ನು ಕೋಣೆಯಲ್ಲಿ ಕೂಡಿ ಹಾಕಿ, ಅವರನ್ನು ಬೆತ್ತಲೆ ಮಾಡಿ ಅಮಾನವೀಯವಾಗಿ ದೌರ್ಜನ್ಯ ನಡೆಸುವ ಹಂತಕ್ಕೆ ಹೋಗಿದ್ದಾರೆ ಎಂದರೇ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹಾಳಾಗಿದೆ ಎಂಬುದನ್ನು ತೋರಿಸುತ್ತದೆ’ ಎಂದು ಆಪಾದಿಸಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಎಲ್ಲೆಂದರಲ್ಲಿ ಕೊಲೆ, ಹಲ್ಲೆ, ಸೂಲಿಗೆ, ಗಾಂಜಾ ಮಾರಾಟ, ಜೂಜಾಟ, ಮೀಟರ್ ಬಡ್ಡಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಓಡಾಡಲು ಭಯ: ‘ಸ್ನೇಹಿತನೆಂದು ನಂಬಿದ ರಮೇಶ, ಕಾರು ಖರೀದಿಯ ಹಣ ಕೊಡುವುದಾಗಿ ಕರೆಯಿಸಿ 28 ಗಂಟೆ ಕೂಡಿ ಹಾಕಿದ. 12 ರಿಂದ 16 ಜನರು ಸೇರಿ 18 ಗಂಟೆಗಳು ಚಿತ್ರಹಿಂಸೆ ಕೊಟ್ಟಿದ್ದಾರೆ. ವಿವಸ್ತ್ರಗೊಳಿಸಿ ಮೈಮೇಲೆ ಉಗಿದು, ಬಿಯರ್ ಸುರಿದಿದ್ದಾರೆ. ಈ ಘಟನೆಯ ಬಳಿಕ ಹೊರಗೆ ಓಡಾಡಲು ಭಯವಾಗುತ್ತಿದೆ’ ಎಂದು ಸಂತ್ರಸ್ತ ಅರ್ಜುನಪ್ಪ ಮಡಿವಾಳ ಹೇಳಿದರು.

‘ಆಸ್ಪತ್ರೆಗೆ ದಾಖಲಾಗಿದ್ದಾಗ ಒಪ್ಪಂದ ಮಾಡಿಕೊಳ್ಳಲು ಅಲ್ಲಿಂದ ಕರೆದೊಯ್ಯುವ ಯೋಜನೆ ಹಾಕಿಕೊಂಡಿದ್ದರು. ಪೊಲೀಸರ ರಕ್ಷಣೆ ಇದ್ದಿದ್ದರಿಂದ ಅದು ಸಾಧ್ಯವಾಗಲಿಲ್ಲ’ ಎಂದರು.

ಪ್ರತಿಭಟನೆಯಲ್ಲಿ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ರುಕ್ಕಣ್ಣ ಮಡಿವಾಳ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಡಿವಾಳ, ಅಂಬಣ್ಣ ಮಡಿವಾಳ, ಕಾಶಿನಾಥ್ ಮಡಿವಾಳ, ಹಣಮೇಶ, ನಾಗೇಶ್ ತರನಳ್ಳಿ, ಬಸವರಾಜ ಮಡಿವಾಳ, ಹಿಂದೂ ಸಂಘಟನೆಗಳ ಮುಖಂಡರಾದ ನಾಗೇಂದ್ರ ಕಬಾಡೆ, ಅಶ್ವಿನಿ ಕುಮಾರ್, ಸತೀಶ್ ಮಾವೂರ್, ಲಕ್ಷ್ಮಿಕಾಂತ್ ಸ್ವಾದಿ, ಸುನೀಲ್ ಶಿರಕೆ, ದಶರಥ್ ಇಂಗೋಳೆ ಸೇರಿ ಹಲವರು ಉಪಸ್ಥಿತರಿದ್ದರು.

‘ಹಿಂದೂಗಳನ್ನು ಗುರಿಯಾಗಿಸಿ ಹಲ್ಲೆ’

‘ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಅನ್ಯಕೋಮಿನವರು ಹಲ್ಲೆ ಮಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಆರೋಪಿಸಿದರು. ‘ಕಳೆದ ಹತ್ತು ದಿನಗಳಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಪದೇ ಪದೇ ಸಂವಿಧಾನದ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಒಂದು ಸಮುದಾಯದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಚಿತ್ರ ಹಿಂಸೆ ನೀಡಿ ಹಲ್ಲೆ ಮಾಡಿದ ಗೂಂಡಾಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದರು.

‘ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲಿ’

ಯುವಕರನ್ನು ಕೂಡಿಹಾಕಿ ಗುಪ್ತಾಂಗಕ್ಕೆ ಶಾಕ್ ಕೊಟ್ಟಿದ್ದು ತಾಲಿಬಾನ್ ಕೃತ್ಯವಾಗಿದ್ದು ಇದು ಖಂಡನೀಯ. ಇಂತಹ ಕೃತ್ಯ ತಡೆಯಲು ವಿಫಲರಾದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದ್ದಾರೆ. ವಿವಸ್ತ್ರಗೊಳಿಸಿ ಹಲ್ಲೆ ಮಾಡುವುದು ಅಮಾನವೀಯ. ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಆರೋಪಿಗಳು ಪ್ರಿಯಾಂಕ್ ಖರ್ಗೆ ಅವರ ಒಡನಾಟದಲ್ಲಿ ಇರುವವರು. ಆದರಿಂದ ಆರೋಪಿಗಳು ಯಾವುದೇ ಭಯವಿಲ್ಲದೆ ಇಂತಹ ನೀಚ ಕೃತ್ಯ ಎಸಗಿದ್ದಾರೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT