ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಭಾಗದಲ್ಲಿ ನಂದಿನಿ ಮಜ್ಜಿಗೆ ಬೇಡಿಕೆ ಮೂರೂವರೆಪಟ್ಟು ಹೆಚ್ಚಳ

Published 23 ಮಾರ್ಚ್ 2024, 5:26 IST
Last Updated 23 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ತಮ್ಮ ದಾಹ ನೀಗಿಸಿಕೊಳ್ಳಲು ಎಳನೀರು, ಮಜ್ಜಿಗೆಯಂಥ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ನಂದಿನಿ ಮಜ್ಜಿಗೆಗೆ ಮೂರೂವರೆಪಟ್ಟು ಬೇಡಿಕೆ ಹೆಚ್ಚಿದೆ.

ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟದ ನೀಡಿರುವ ಅಂಕಿ–ಅಂಶಗಳ ಪ್ರಕಾರ ಕಳೆದ ಫೆಬ್ರುವರಿ ತಿಂಗಳಲ್ಲಿ ನಿತ್ಯ ಸರಾಸರಿ 1,243 (ತಲಾ 200 ಎಂಎಲ್‌ನ 6,215 ಪ್ಯಾಕೆಟ್‌) ಲೀಟರ್‌ಗಳಷ್ಟಿದ್ದ ಮಜ್ಜಿಗೆಯ ಬೇಡಿಕೆಗೆ ಮಾರ್ಚ್‌ ತಿಂಗಳಲ್ಲಿ ಮೂರೂವರೆ ಪಟ್ಟು ಹೆಚ್ಚಾಗಿದೆ. ಇದೀಗ ಪ್ರತಿ ಸರಾಸರಿ 4,615 ಲೀಟರ್‌ಗೂ ಅಧಿಕ ಮಜ್ಜಿಗೆ (23,075 ಪ್ಯಾಕೆಟ್‌) ಮಾರಾಟವಾಗುತ್ತಿದೆ.

2023ರ ಮಾರ್ಚ್‌ಗೆ ಹೋಲಿಸಿದರೆ, 2024ರ ಮಾರ್ಚ್‌ನಲ್ಲಿ ಮಜ್ಜಿಗೆಯ ಬೇಡಿಕೆಗೆ ಬಹುತೇಕ ದುಪ್ಪಟ್ಟು ತಲುಪಿದೆ. 2023ರ ಮಾರ್ಚ್‌ನಲ್ಲಿ ನಿತ್ಯ ಸರಾಸರಿ 2,830 ಲೀಟರ್‌ ಮಜ್ಜಿಗೆಗೆ ಬೇಡಿಕೆಯಿತ್ತು. ಈ ಮಾರ್ಚ್‌ 20ರ ವೇಳೆಗೆ ನಿತ್ಯ ಸರಾಸರಿ 4,615 ಲೀಟರ್‌ ಮಜ್ಜಿಗೆ ಮಾರಾಟವಾಗುತ್ತಿದೆ ಎಂದು ಒಕ್ಕೂಟದ ಅಧಿಕಾರಿಗಳು ತಿಳಿಸಿದ್ದಾರೆ.

ಮಜ್ಜಿಗೆಯೊಂದಿಗೆ ನಂದಿನಿ ಮೊಸರಿಗೂ ಬೇಡಿಕೆ ವೃದ್ಧಿಸಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ನಿತ್ಯ ಸರಾಸರಿ 9,618 ಲೀಟರ್‌ ಮೊಸರು ಮಾರಾಟವಾಗುತ್ತಿತ್ತು. ಮಾರ್ಚ್‌ 20ರ ವೇಳೆಗೆ ಈ ಬೇಡಿಕೆ ನಿತ್ಯ 10,821 ಲೀಟರ್‌ಗೆ ಹೆಚ್ಚಿದೆ. ಒಟ್ಟಾರೆ ಬೇಡಿಕೆಯಲ್ಲಿ 1,203 ಲೀಟರ್‌ಗಳಷ್ಟು ಹೆಚ್ಚಳ ಕಂಡು ಬಂದಿದೆ.

ಫೆಬ್ರುವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಒಕ್ಕೂಟ ವ್ಯಾಪ್ತಿಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಮೊಸರಿಗೆ ಬೇಡಿಕೆ ವೃದ್ಧಿಸಿದೆ. ಯಾದಗಿರಿ ಜಿಲ್ಲೆಯಲ್ಲಿ ನಂದಿನಿ ಮಜ್ಜಿಗೆಗೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ.

ಲಸ್ಸಿ, ಐಸ್‌ಕ್ರೀಂಗೂ ಬೇಡಿಕೆ:

ಇದೇ ಸಲ ಒಕ್ಕೂಟದಿಂದ ಲಸ್ಸಿ ಕೂಡ ಉತ್ಪಾದಿಸಲಾಗುತ್ತಿದ್ದು, ನಿತ್ಯ ಸರಾಸರಿ 600 ಲೀಟರ್‌ಗಳಷ್ಟು(ತಲಾ 200 ಎಂಎಲ್‌ನ 6 ಸಾವಿರ ಪ್ಯಾಕೆಟ್‌) ಲಸ್ಸಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಬಿಸಿಲು ಹೆಚ್ಚಿದ ಬೆನ್ನಲ್ಲೇ ಐಸ್‌ಕ್ರೀಂಗೂ ಬೇಡಿಕೆ ಬಂದಿದೆ. ಪ್ರತಿ ತಿಂಗಳು ವಿವಿಧ ಬಗೆಯ 6 ಸಾವಿರ ಲೀಟರ್‌ ಐಸ್‌ಕ್ರೀಂ ಮಾರಾಟವಾಗುತ್ತಿತ್ತು. ಈಗ ಐಸ್‌ಕ್ರೀಂ ಬೇಡಿಕೆಗೆ ತಿಂಗಳಿಗೆ 10 ಸಾವಿರ ಲೀಟರ್‌ಗೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಮ್ಮೆ ಹಾಲಿಗೂ ಉತ್ತಮ ಸ್ಪಂದನೆ:

‘ಒಕ್ಕೂಟದಿಂದ ಇದೇ ತಿಂಗಳು ಮಾರುಕಟ್ಟೆಗೆ ಪರಿಚಯಿಸಿರುವ ಎಮ್ಮೆ ಹಾಲಿಗೂ ದಿನೇ ದಿನೇ ಬೇಡಿಕೆಗೆ ಹೆಚ್ಚುತ್ತಿದೆ. ಸದ್ಯ ಪ್ರತಿದಿನ ಸರಾಸರಿ 3 ಸಾವಿರ ಲೀಟರ್‌ ಎಮ್ಮೆ ಹಾಲು ಮಾರಾಟವಾಗುತ್ತಿದೆ. ಸದ್ಯ ರಂಜಾನ್‌ ತಿಂಗಳು ನಡೆಯುತ್ತಿದ್ದು, ಮುಸ್ಲಿಂ ಸಮುದಾಯದ ಹೋಟೆಲ್‌ಗಳ ದಿನದ ವಹಿವಾಟು ಕಡಿಮೆಯಾಗಿರುತ್ತದೆ. ರಂಜಾನ್‌ ಮಾಸ ಮುಗಿದರೆ, ಎಮ್ಮೆ ಹಾಲಿಗೆ ಇನ್ನಷ್ಟು ಬೇಡಿಕೆ ಬರಲಿದೆ’ ಎಂಬುದು ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟದ ಅಧಿಕಾರಿಗಳ ವಿಶ್ವಾಸ.

ಲಕ್ಷ ಪ್ಯಾಕೆಟ್‌ ಮಾರಾಟ ನಿರೀಕ್ಷೆ

‘ಹೆಚ್ಚುತ್ತಿರುವ ಬೇಸಿಲಿನ ಜೊತೆಗೆ ನಂದಿನಿ ಮಜ್ಜಿಗೆ ಮನೆಯಲ್ಲಿ ತಯಾರಿಸಿದಂತೆ ಸ್ವಾದಿಷ್ಟ ರುಚಿಯೂ ಇರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಭಾಗದ ಜನ ತುಸು ಕಾರ ಇಷ್ಟಪಡುತ್ತಾರೆ. ಹೀಗಾಗಿ ಈ ಭಾಗದ ಜನರ ನಿರೀಕ್ಷೆಗೆ ತಕ್ಕಂತೆ ರುಚಿಕಟ್ಟಾದ ಮಜ್ಜಿಗೆ ಪೂರೈಸಲಾಗುತ್ತಿದೆ. ಈ ಬೇಸಿಗೆಯಲ್ಲಿ ನಿತ್ಯ ಒಂದು ಲಕ್ಷ ಪ್ಯಾಕೆಟ್‌ (20 ಸಾವಿರ ಲೀಟರ್‌) ಮಜ್ಜಿಗೆ ಮಾರಾಟವಾಗುವ ನಿರೀಕ್ಷೆಯಿದೆ’ ಎಂದು ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಪಾಟೀಲ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT