ಶುಕ್ರವಾರ, ಮೇ 27, 2022
23 °C
ಜಿಲ್ಲೆಯಲ್ಲಿ ಏಕಕಾಲಕ್ಕೆ ನಡೆಯಲಿದೆ ನ್ಯಾಷನಲ್‌ ಅಚೀವ್‌ಮೆಂಟ್‌ ಸರ್ವೆ

249 ಶಾಲೆಗಳಲ್ಲಿ ರಾಷ್ಟ್ರೀಯ ಸಾಧನಾ ಸಮೀಕ್ಷೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ವಿವಿಧ ಸ್ತರದ ಹಾಗೂ ವಿವಿಧ ಪರಿಸರದಲ್ಲಿನ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಬೌದ್ಧಿಕ ಸ್ವತ್ತನ್ನು ಅಳೆಯುವ ಉದ್ದೇಶದಿಂದ ‘ರಾಷ್ಟ್ರೀಯ ಸಾಧನಾ ಸಮೀಕ್ಷೆ’ (ನ್ಯಾಷನಲ್‌ ಅಚೀವ್‌ಮೆಂಟ್‌ ಸರ್ವೆ– ಎನ್‌.ಎ.ಎಸ್‌)ಯನ್ನು ಕೇಂದ್ರ ಸರ್ಕಾರ ಇದೇ 12ರಂದು ದೇಶದಾದ್ಯಂತ ಏಕಕಾಲಕ್ಕೆ ನಡೆಸುತ್ತಿದೆ.

ಜಿಲ್ಲೆಯ 249 ಶಾಲೆಗಳಲ್ಲಿ ಈ ಸಮೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಸಕಲ ಸಿದ್ಧತೆ ಮಾಡಿಕೊಂಡಿದೆ.

‘ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಶಾಶ್ವತ ಅನುದಾನ ರಹಿತ, ಸಿಬಿಎಸ್‌ಸಿ, ಆದರ್ಶ ವಿದ್ಯಾಲಯ, ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಸೈನಿಕ ಶಾಲೆ, ಖಾಸಗಿ ಶಿಕ್ಷಣ ಸಂಸ್ಥೆಗಳು, ವಿವಿಧ ವಸತಿ ಶಾಲೆಗಳು ಸೇರಿ 3787 ಶಾಲೆಗಳಿವೆ. ಇದರಲ್ಲಿ 249 ಶಾಲೆಗಳನ್ನು ಸಮೀಕ್ಷೆಗಾಗಿ ಆಯ್ಕೆ ಮಾಡಲಾಗಿದೆ. 295 ಮಂದಿ ಸಿಬ್ಬಂದಿಯನ್ನು ಫೀಲ್ಡ್‌ ಇನ್ವೆಸ್ಟಿಗೇಟರ್‌ ಆಗಿ ನಿಯೋಜಿಸಲಾಗಿದೆ. ಸಿಬಿಎಸ್‌ಸಿಯ 247 ಸಿಬ್ಬಂದಿಯನ್ನು ವೀಕ್ಷಕರಾಗಿ ನಿಯೋಜಿಸಲಾಗಿದೆ. ಜಿಲ್ಲಾ ಸಂಯೋಜನಾಧಿಕಾರಿ ಆಗಿ ಮಳಖೇಡದ ಆದಿತ್ಯಾ ಬಿರ್ಲಾ ಪಬ್ಲಿಕ್‌ ಸ್ಕೂಲ್‌ನ ಪ್ರಾಂಶುಪಾಲರಾದ ರಿಂಕು ಬ್ಯಾನರ್ಜಿ ಅವರನ್ನು ನೇಮಕ ಮಾಡಲಾಗಿದೆ’ ಎಂದು ಈ ಸಮೀಕ್ಷೆಯ ಜಿಲ್ಲಾ ನೋಡಲ್‌ ಅಧಿಕಾರಿಯೂ ಆಗಿರುವ ಡಯಟ್‌ ಪ್ರಾಂಶುಪಾಲ ಮಜರ್‌ ಹುಸೇನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

1ರಿಂದ 10ನೇ ತರಗತಿವರೆಗಿನ ಆಯ್ದ ತರಗತಿಗಳನ್ನು ಮಾತ್ರ ಸಮೀಕ್ಷೆಗೆ ಪರಿಗಣಿಸಲಾಗಿದೆ. ಅಂದರೆ; 3ನೆ ತರಗತಿ, 5, 8 ಹಾಗೂ 10ನೆ ತರಗತಿಗಳ ಮಕ್ಕಳನ್ನು ಮಾತ್ರ ಇದಕ್ಕೆ ಪರಿಗಣಿಸಲಾಗಿದೆ. ಈ ಸಮೀಕ್ಷೆ ನವೆಂಬರ್‌ 12ರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಸಮೀಕ್ಷೆ ಮುಗಿಯಲಿದೆ. ಆಯಾ ತರಗತಿಗಳ ಮಕ್ಕಳಿಗೆ ಒಂದೊಂದು ಪ್ರಶ್ನಾವಳಿ ಸಿದ್ಧಪಡಿಸಲಾಗಿದ್ದು, ಅಲ್ಲಿ ನಾಲ್ಕು ಆಯ್ಕೆಯ ಉತ್ತರಗಳನ್ನೂ ನೀಡಲಾಗಿದೆ. ಮೂರು ಮತ್ತು ಐದನೇ ತರಗತಿಯ ಸಣ್ಣ ಮಕ್ಕಳಿಗೆ ಪ್ರಶ್ನಾವಳಿ ಅರ್ಥವಾಗದೇ ಇದ್ದಲ್ಲಿ ಅದನ್ನು ಓದಿ ಹೇಳಿ, ಅವರು ಹೇಳುವ ಉತ್ತರವನ್ನೂ ಟಿಕ್‌ ಮಾಡಲು ಇಬ್ಬರು ಸಹಾಯಕರನ್ನೂ ನಿಯೋಜಿಸಲಾಗಿದೆ. 8 ಹಾಗೂ 10ನೇ ತರಗತಿ ಮಕ್ಕಳು ತಮ್ಮ ಸ್ವಯಂ ಪ್ರೇರಣೆಯಿಂದ ಉತ್ತರ ನೀಡಬೇಕು.

ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಕನ್ನಡ, ಹಿಂದಿ, ಇಂಗ್ಲಿಷ್‌, ಉರ್ದು, ಮರಾಠಿ, ತೆಲುಗು ಮಾಧ್ಯಮಗಳಲ್ಲಿ ಸಮೀಕ್ಷೆ ನಡೆಯಲಿದೆ. ಇದರೊಂದಿಗೆ ಆಯಾ ತರಗತಿಗಳ ಶಿಕ್ಷಕರಿಗೂ ಒಂದು ಪ್ರಶ್ನಾವಳಿ ಇರುತ್ತದೆ. ಮೂರನೇ ಹಂತರದಲ್ಲಿ ಆಯಾ ಪ್ರಾಂಶುಪಾಲರು, ಮುಖ್ಯಶಿಕ್ಷಕರಿಗೂ ಪ್ರಶ್ನಾವಳಿ ಇರುತ್ತದೆ. ಎಲ್ಲರೂ ತಮ್ಮ ಸ್ವಯಂ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ತರ ಮಾರ್ಕ್‌ ಮಾಡಿ ನೀಡಬೇಕು ಎಂಬುದು ನಿಯಮ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.