ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮದು ತಗ್ಗಿ, ರಫ್ತು ಹೆಚ್ಚಿದರೆ ಆರ್ಥಿಕ ಪ್ರಗತಿ: ಶಶಿಕಾಂತ ಪಾಟೀಲ

ರಫ್ತು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ; ಸಣ್ಣ–ಮಧ್ಯಮ ಗಾತ್ರ
Published 22 ಡಿಸೆಂಬರ್ 2023, 15:56 IST
Last Updated 22 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ಕಲಬುರಗಿ: ‘ದೇಶದಲ್ಲಿ ಆಮದಿಗಿಂತಲೂ ರಫ್ತು ಹೆಚ್ಚಾಗಬೇಕು. ಭವಿಷ್ಯದಲ್ಲಿ ವಸ್ತುಗಳ ರಫ್ತಿಗೆ ಮಹತ್ವ ಕೊಟ್ಟರೆ ಮಾತ್ರವೇ ದೇಶದ ಆರ್ಥಿಕ ಪ್ರಗತಿ ಸಾಧ್ಯ’ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಹುಬ್ಬಳ್ಳಿಯ ಲಘು, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಅನುಕೂಲತೆ ಕಚೇರಿ ಹಾಗೂ ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ರಫ್ತು ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ. ಸಣ್ಣ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ತುಸು ಮುತುವರ್ಜಿ ವಹಿಸಿ ಕೆಲಸ ಮಾಡಿದರೆ, ಇಲ್ಲಿನ ಸಣ್ಣ ಉದ್ಯಮಿಗಳು ರಫ್ತು ಚಟುವಟಿಕೆಯಲ್ಲಿ ತೊಡಗಬಹುದು. ಇದರಿಂದ ಸಣ್ಣ ಉದ್ಯಮಿಗಳು ಹಾಗೂ ಈ ಪ್ರದೇಶ ಎರಡರ ಅಭಿವೃದ್ಧಿಯೂ ಒಟ್ಟಿಗೆ ಆಗುತ್ತದೆ’ ಎಂದರು.

‘ರಫ್ತು ಕುರಿತು ಕೆಕೆಸಿಸಿಐನಲ್ಲಿ ಕಳೆದ ಆಗಸ್ಟ್‌ನಲ್ಲಿಯೇ ಸೆಮಿನಾರ್‌ ನಡೆಯಬೇಕಿತ್ತು. ಕಾರಣಾಂತರಗಳಿಂದ ಅದು ಆಗಲಿಲ್ಲ. ಮುಂದಿನ ತಿಂಗಳು ರಫ್ತು ಕುರಿತು ಕಾರ್ಯಾಗಾರ ನಡೆಸಲಾಗುವುದು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್‌.ಜವಳಗಿ, ‘ರಫ್ತು ಕುರಿತು ಈ ಭಾಗದ ಜನರಿಗೆ ಸರಿಯಾಗಿ ಮಾಹಿತಿಯೇ ಇಲ್ಲ. ಸಣ್ಣ ಉದ್ಯಮಿಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಣ್ಣ ಕೈಗಾರಿಕೆಗಳ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಭೀಮಾಶಂಕರ ಪಾಟೀಲ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಸತೀಶಕುಮಾರ ಮಾತನಾಡಿದರು.

ವಿಟಿಪಿಸಿ ಉಪ ನಿರ್ದೇಶಕ ಮನ್ಸೂರ್, ಎಸ್‌ಬಿಐ ಬ್ಯಾಂಕಿನ ಅಮಿತ್‌ಕುಮಾರ, ಎಸ್‌ಕೆಎಸ್‌ ಗ್ಲೋಬಲ್‌ ಕನ್ಸಲ್ಟಿಂಗ್‌ ಇಂಪೋರ್ಟ್‌, ಎಕ್ಸಪೋರ್ಟ್‌ ಕಂಪನಿಯ ವ್ಯವಸ್ಥಾಪಕ ಪಾಲುದಾರ ರಾಹುಲ್ ಮಹಾಗಾಂವಕರ ಇದ್ದರು.

ಸಣ್ಣ ಉದ್ಯಮಿಗಳಿಗೆ ರಾಜ್ಯ ದೇಶದಲ್ಲೂ ವ್ಯಾಪಕ ಮಾರುಕಟ್ಟೆಯಿದೆ. ಮಹಿಳೆಯರು ಎಸ್ಸಿಎಸ್ಟಿ ವರ್ಗದ ಉದ್ಯಮಿಗಳಿಗೆ ಹೇರಳ ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳಬೇಕು
ಎ.ಕೋಕಿಲಾ ಬ್ರ್ಯಾಂಡ್‌ ಮುಖ್ಯಸ್ಥೆ ರಾಷ್ಟ್ರೀಯ ಎಸ್ಸಿಎಸ್ಟಿ ಹಬ್‌ ಬೆಂಗಳೂರು

‘ರಫ್ತಿಗೆ ಹಣವಲ್ಲ ಮನಸ್ಸು ಮುಖ್ಯ’

ರಫ್ತು ಮಾರುಕಟ್ಟೆ ಕುರಿತು ಮಾತನಾಡಿದ ಎಸ್‌ಕೆಎಸ್‌ ಗ್ಲೋಬಲ್‌ ಕನ್ಸಲ್ಟಿಂಗ್‌ ಇಂಪೋರ್ಟ್‌ ಎಕ್ಸಪೋರ್ಟ್‌ ಕಂಪನಿಯ ವ್ಯವಸ್ಥಾಪಕ ಪಾಲುದಾರ ರಾಹುಲ್ ಮಹಾಗಾಂವಕರ ‘ರಫ್ತುದಾರನಾಗಲು ಹಣವಲ್ಲ ಮುಖ್ಯವಲ್ಲ.  ಹಣ ಕೇವಲ ಮಾಧ್ಯಮವಷ್ಟೇ. ಅದಕ್ಕೂ ಹೆಚ್ಚಾಗಿ ಮನಸ್ಸು ಮನಸ್ಥಿತಿ ಮುಖ್ಯ’ ಎಂದು ಪ್ರತಿಪಾದಿಸಿದರು. ‘ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗವೆಂಬ ನಿಲುವಿನಿಂದ ಹೊರಬರಬೇಕು. ಇಲ್ಲಿಂದ ರಫ್ತು ಮಾಡಲು ಅಪಾರ ಅವಕಾಶಗಳಿದ್ದು ಅವುಗಳ ಕುರಿತು ಅರಿಯಬೇಕು’ ಎಂದರು. ‘ಆಹಾರಗಳ ಪೈಕಿ ಗೋದಿ ಅಕ್ಕಿ ಎಣ್ಣೆ ಸಕ್ಕರೆ ವಿಶ್ವದಲ್ಲಿ ಬಹುದೊಡ್ಡ ಮಾರುಕಟ್ಟೆ ಹೊಂದಿವೆ. ಈ ಪೈಕಿ ಗೋದಿಯಲ್ಲಿರುವ ಗುಲೆಟಿನ್‌ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಲ್ಲವು. ಅವುಗಳನ್ನು ನಿಯಂತ್ರಿಸಲು  ಜೋಳದಂಥ ಸಿರಿಧಾನ್ಯಗಳನ್ನು ಬಳಸಲು ಪ್ರಚಾರ ಮಾಡಬೇಕು. ಜಾಗತಿಕವಾಗಿ ಗೋದಿ ಹೊಂದಿರುವ ಮಾರುಕಟ್ಟೆಯ ಒಂದಿಷ್ಟಲು ಪಾಲನ್ನು ಜೋಳದಂಥ ಧಾನ್ಯಗಳು ಗಿಟ್ಟಿಸಿದರೆ ಸಾವಿರಾರು ಕೋಟಿ ರೂಪಾಯಿ ವಹಿವಾಟು ಸಾಧ್ಯವಾಗುತ್ತದೆ’ ಎಂದರು. 2012ರಲ್ಲಿ ಚಿಕ್ಕದಾಗಿ ಆರಂಭಿಸಿ ರಫ್ತುವಹಿವಾಟು ಆರಂಭಿಸಿದ್ದ ರಾಹುಲ್‌ ಇದೀಗ 32 ದೇಶಗಳಿಗೆ ವಿವಿಧ ಉತ್ಪನ್ನಗಳನ್ನು ರವಾನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT