ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ 18 ಬೇಡಿಕೆ: ಜ.8,9 ರಂದು ರಾಷ್ಟ್ರವ್ಯಾಪಿ ಮುಷ್ಕರ– ಅನಂತ ಸುಬ್ಬರಾವ್

Last Updated 18 ಡಿಸೆಂಬರ್ 2018, 12:28 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕನಿಷ್ಠ ಕೂಲಿ ನಿಗದಿ ಸೇರಿದಂತೆ ಕಾರ್ಮಿಕರ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 2019ರ ಜನವರಿ 8 ಮತ್ತು 9ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್ ಹೇಳಿದರು.

ನಗರದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‌ನ 6ನೇ ರಾಜ್ಯ ಸಮ್ಮೇಳನ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ‘ಬಹಿರಂಗ ಅಧಿವೇಶನ’ದಲ್ಲಿ ಅವರು ಮಾತನಾಡಿದರು.

‘ಜೀವವಿಮೆ, ಬ್ಯಾಂಕ್, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು. ತಿಂಗಳಿಗೆ ₹18 ಸಾವಿರ ಕನಿಷ್ಠ ಕೂಲಿ ನಿಗದಿಪಡಿಸಬೇಕು. ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡುವಂತೆ ಒತ್ತಾಯಿಸಿ ಸುಮಾರು 18 ಕೋಟಿ ಜನರು ಮುಷ್ಕರದಲ್ಲಿ ಪಾಳ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ ಮೂರು ರಾಷ್ಟ್ರವ್ಯಾಪಿ ಮುಷ್ಕರಗಳನ್ನು ನಡೆಸಲಾಗಿದ್ದು, ಇದು ನಾಲ್ಕನೆಯದ್ದಾಗಿದೆ’ ಎಂದು ತಿಳಿಸಿದರು.

‘ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳನ್ನು ಒಂದುಗೂಡಿಸಬೇಕು. ಕಾರ್ಮಿಕರ ಮೇಲಿನ ಕಿರುಕುಳ, ದಬ್ಬಾಳಿಕೆಯನ್ನು ನಿಲ್ಲಿಸಬೇಕು. ನಷ್ಟವನ್ನು ಸರಿದೂಗಿಸಬೇಕು’ ಎಂದು ಒತ್ತಾಯಿಸಿದರು.

‘ಕೆಎಸ್‌ಆರ್‌ಟಿಸಿ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕು’ ಎಂದು ಕರೆ ನೀಡಿದರು.

ಫೆಡರೇಷನ್‌ನ ಗೌರವ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ ಮಾತನಾಡಿ, ‘ಮೋದಿ ಸರ್ಕಾರ ಜನಸಾಮಾನ್ಯರ ಹಿತ ಕಾಯದೆ ಕಾರ್ಪೋರೇಟ್ ವಲಯದ ಗುಲಾಮನಂತೆ ವರ್ತಿಸುತ್ತಿದೆ. ರಫೇಲ್ ರಾಜ ಮೋದಿ ಅವರು ಎಲ್ಲವನ್ನೂ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದ್ದಾರೆ. ಹಿಂದೂ–ಮುಸ್ಲಿಮರ ಮಧ್ಯೆ ಒಡಕು ಉಂಟು ಮಾಡಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದ್ದಾರೆ. 5 ರಾಜ್ಯಗಳ ಜನತೆಗೆ ಈಗಾಗಲೇ ಪಾಠ ಕಲಿಸಿದ್ದು, ಮೋದಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT