ಬುಧವಾರ, ಜನವರಿ 29, 2020
27 °C
₹8 ಕೋಟಿ ವೆಚ್ಚದ ‘ಜಲ ನಿರ್ಮಲ’ ಯೋಜನೆ ವಿಫಲ; ಗ್ರಾಮಸ್ಥರ ಆಕ್ರೋಶ

ಸೌಲಭ್ಯ ವಂಚಿತ ಅಳ್ಳಗಿ (ಕೆ) ಗ್ರಾಮ

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕು ಕೇಂದ್ರದಿಂದ 6 ಕಿಲೋಮೀಟರ್ ದೂರದಲ್ಲಿರುವ, ಗೌರ (ಬಿ ) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಳ್ಳಗಿ (ಕೆ) ಗ್ರಾಮವು ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಸೊನ್ನ ಭೀಮಾ ಬ್ಯಾರೇಜಿನಿಂದ ಅಳ್ಳಗಿ (ಕೆ) ಸೇರಿದಂತೆ 7 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ₹8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಯೋಜನೆ ಮುಗಿದು 10 ವರ್ಷಗಳಾದರೂ ಯಾವ ಗ್ರಾಮಕ್ಕೂ ನೀರು ಪೂರೈಕೆ ಆಗಿಲ್ಲ.

‘ಜಲ ನಿರ್ಮಲ ಯೋಜನೆಯಡಿಯಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ಕಳಪೆ ಕಾಮಗಾರಿಯಿಂದ ಘಟಕಕ್ಕೆ ನೀರು ಪೂರೈಕೆ ಆಗುತ್ತಿಲ್ಲ. ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಘಟಕವು ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಭಾಗದ ದಲಿತ ಮುಖಂಡ ಭೀಮರಾವ್ ಗೌರ ಅವರು ಶುದ್ಧ ಕುಡಿಯವ ನೀರಿನ ಯೋಜನೆ ಕುರಿತು ಮಾಹಿತಿ ನೀಡಿ, ‘ಈ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಿ ನೀರು ಪೂರೈಸಬೇಕು ಎಂದು ಹಲವಾರು ಬಾರಿ ಹೋರಾಟ ಮಾಡಿದ್ದೇನೆ. ಆದರೂ ಸಹ ಯಾರೂ ಏನೂ ಮಾಡುತ್ತಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಈ ಭಾಗದ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಲ ನಿರ್ಮಲ ಯೋಜನೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ ಹೊಸದಾಗಿ ಆರೋಗ್ಯ ಸಹಾಯಕಿಯರ ಕೊಠಡಿ ನಿರ್ಮಿಸಿದ್ದಾರೆ. ಅದು ಸಹ ಇನ್ನೂ ಉದ್ಘಾಟನೆಯಾಗಿಲ್ಲ. ಗ್ರಾಮಕ್ಕೆ ಆರೋಗ್ಯ ಸಹಾಯಕಿಯರು ಬರುತ್ತಿಲ್ಲ. ‘ಕಾಯಿಲೆ ಬಂದರೆ, ಮಹಿಳೆಯರಿಗೆ ಹೆರಿಗೆ ಸಮಸ್ಯೆಯಾದರೆ ಏನು ಮಾಡಬೇಕು ಗೊತ್ತಾಗುತ್ತಿಲ್ಲ. ತಾಲ್ಲೂಕು ಆರೋಗ್ಯ ಅಧಿಕಾರಿಗಳು ತಕ್ಷಣ ಕೊಠಡಿಯನ್ನು ಉದ್ಘಾಟಿಸಿ ಆರೋಗ್ಯ ಸಹಾಯಕಿಯರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಜನರು ಬಹಳ ತೊಂದರೆಗೆ ಒಳಗಾಗುತ್ತಾರೆ’ ಎಂದು ಗ್ರಾಮದ ಮುಖಂಡರಾದ ಮೋನಪ್ಪ ಬಡಿಗೇರ್, ರಂಜಾನ್ ಸುತಾರ್ ಹೇಳುತ್ತಾರೆ.

ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಗ್ರಾಮಕ್ಕೆ ಅಫಜಲಪುರದಿಂದ ಉತ್ತಮ ರಸ್ತೆಯನ್ನು ನಿರ್ಮಿಸಿ ಸಾರಿಗೆ ಸೌಲಭ್ಯ ಒದಗಿಸಬೇಕು ಎಂಬುದು ಗ್ರಾಮಸ್ಥರ ಇನ್ನೊಂದು ಮುಖ್ಯ ಬೇಡಿಕೆಯಾಗಿದೆ. ಹಾಗೆಯೇ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು