ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಸೌಲಭ್ಯ ಸ್ಥಗಿತ: ಜನರ ಪರದಾಟ

ಸಿಸಿ ರಸ್ತೆ ನಿರ್ಮಾಣ ಕಾಮಗಾರಿ; ಪಟ್ಟಣದಲ್ಲಿ ಬಸ್‌ ಸಂಚಾರಕ್ಕೆ ನಿಷೇಧ
Last Updated 13 ಮೇ 2022, 2:39 IST
ಅಕ್ಷರ ಗಾತ್ರ

ವಾಡಿ: ಪಟ್ಟಣದಲ್ಲಿ ಮುಖ್ಯ ಹೆದ್ದಾರಿ ಕಾಮಗಾರಿ ನೆಪದಲ್ಲಿ ಕಳೆದ 45 ದಿನಗಳಿಂದ ಬಸ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಇದರಿಂದ ಕಲಬುರ್ಗಿ, ಯಾದಗಿರಿ ಹಾಗೂ ಇನ್ನಿತರ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.

ಬಸ್ ಸ್ಥಗಿತಗೊಂಡು ಒಂದೂವರೇ ತಿಂಗಳು ಗತಿಸಿದೆ. ಸಾರಿಗೆ ವ್ಯವಸ್ಥೆ ಸ್ಥಗಿತದಿಂದ ವೃದ್ಧರು, ಮಕ್ಕಳು, ಮಹಿಳೆಯರ ಗೋಳು ಜನಪ್ರತಿನಿಧಿಗಳ ಮನ ತಟ್ಟುತ್ತಿಲ್ಲ. ಬೇಸಿಗೆಯ ಬಿರುಬಿಸಿಲು ಲೆಕ್ಕಿಸದೇ ಜನರು ಬಸ್ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಸಮಸ್ಯೆ ಅರಿವಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಹರಿಸಲು ಮುಂದಾಗದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣಕ್ಕೆ ಬಸ್ ಬಾರದ ಕಾರಣ ಸ್ಥಳೀಯ ನಿವಾಸಿಗಳು ಪಟ್ಟಣ ಹೊರವಲಯದ ಎರಡು ಕಿ.ಮೀ. ದೂರದ ಬಳಿರಾಮ್‌ ಚೌಕದಲ್ಲಿ ಬಸ್ ಹಿಡಿಯಬೇಕಾಗಿದೆ. ಕಲಬುರ್ಗಿಯಿಂದ ವಾಡಿಗೆ ಬರಬೇಕಾದರೆ 4 ಕಿ.ಮೀ. ದೂರದ ರಾವೂರು ಗ್ರಾಮದಲ್ಲಿ ಇಳಿದು ಅಟೋ ಲಾರಿ ಹಿಡಿದು ಬರುವ ದುಸ್ಥಿತಿ ಎದುರಾಗಿದೆ. ಬಳಿರಾಮ್ ಚೌಕ್ ವೃತ್ತದಲ್ಲಿ ಪ್ರಯಾಣಿಕರು ನಿಲ್ಲಲು ಸೂಕ್ತ ವ್ಯವಸ್ತೆ ಇಲ್ಲದ ಕಾರಣ ಪುಟ್ಟ ಮಕ್ಕಳೊಂದಿಗೆ ಬೇಸಿಗೆಯ ಬಿಸಲಿಗೆ ಮೈಯೊಡ್ಡಿ ನಿಲ್ಲುವುದು ಪ್ರಯಾಣಿಕರಿಗೆ ಅನಿವಾರ್ಯವಾಗಿದೆ. ರಾತ್ರಿ ಸಮಯದಲ್ಲಿ ಬಸ್‌ ಗಳು ಪಟ್ಟಣಕ್ಕೆ ಪ್ರವೇಶಿಸದೇ ಬೈಪಾಸ್ ಹೋಗುತ್ತಿರುವುದರಿಂದ ಪ್ರಯಾಣಿಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಬಸ್ ಸ್ಥಗಿತದಿಂದ ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಕಳೆದ 45 ದಿನಗಳಿಂದ ಪ್ರತಿನಿತ್ಯ ತೀವ್ರ ಪರದಾಡುತ್ತಿರುವುದು ಆಡಳಿತದ ಬೇಜವಾಬ್ದಾರಿ ಎತ್ತಿ ತೋರಿಸುವಂತಿದೆ.

ಕಾಮಗಾರಿಗೆ ತೊಂದರೆಯಾಗಲಿದೆ ಎನ್ನುವ ಉದ್ದೇಶದಿಂದ ಬಸ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಆದರೆ ಸ್ಥಳೀಯ ಎಸಿಸಿ ಕಾರ್ಖಾನೆಯ ಭಾರೀ ಗಾತ್ರದ ಲಾರಿಗಳು ಹಾಗೂ ಟ್ಯಾಂಕರ್‌ಗಳ ಓಡಾಟಕ್ಕೆ ನಿರ್ಬಂಧವಿಲ್ಲ. ಇಲಾಖೆ ಇಬ್ಬಂದಿ ನೀತಿಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಲಾರಿ, ಟ್ಯಾಂಕರ್‌ಗಳ ಓಡಾಟದಿಂದ ಹಾಳಾಗದ ರಸ್ತೆ ಬಸ್‌ಗಳ ಓಡಾಟದಿಂದ ಹೇಗೆ ಹಾಳಾಗುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಬಸ್ ಪಟ್ಟಣಕ್ಕೆ ಬಂದರೆ ಕಾಮಗಾರಿಗೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ರಸ್ತೆ ನಿರ್ಮಾಣಕ್ಕೆ ಬಳಸುವ ಜೆಲ್ಲಿ ಕಂಕರ್‌ಗಳು, ಮರಳು ರಸ್ತೆಯ ಮೇಲೆಯೇ ಸುರಿಯಲಾಗಿದ್ದು, ಸಾರ್ವಜನಿಕರ ಸುಗಮ ಓಡಾಟಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಕಾಮಗಾರಿಗೆ ಅವಶ್ಯವಾದ ಸಾಮಗ್ರಿ ಸಂಗ್ರಹಣೆಗೆ ಪ್ರತ್ಯೇಕ ಯಾರ್ಡ್ ಮಾಡಿಕೊಂಡಿದ್ದರೆ, ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈ ಕೂಡಲೇ ಪಟ್ಟಣದ ಮೂಲಕ ಸಾರಿಗೆ ಬಸ್‌ಗಳು ಹಾದು ಹೋಗಲು ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT