ಕಾಳಗಿ: ಹೊಸ ತಾಲ್ಲೂಕಾಗಿ ಆರು ವರ್ಷ ಕಳೆಯುತ್ತಿದ್ದಂತೆ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ
ತಲೆ ಎತ್ತಿದೆ. ಆದರೆ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮುಖ್ಯಮಂತ್ರಿಗಳ 2021-22ನೇ ಸಾಲಿನ ವಿವೇಚನಾ ನಿಧಿ (ಕಲ್ಯಾಣ ಕರ್ನಾಟಕ ಪ್ರದೇಶ
ಅಭಿವೃದ್ಧಿ ಮಂಡಳಿ ಮುಖಾಂತರ) ₹ 5ಕೋಟಿ ವೆಚ್ಚದಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ
(ಸ್ಲಂ ಬೋರ್ಡ್) ಈ ಬಸ್ ನಿಲ್ದಾಣ ನಿರ್ಮಾಣ ಮಾಡಿದೆ.
ಆದರೆ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ಜನರ ಆಕ್ರೋಶಕ್ಕೆ
ಕಾರಣವಾಗಿದೆ. ನಿಲ್ದಾಣ ಕಳೆದ ಮಾರ್ಚ್ 20ರಂದು ಉದ್ಘಾಟನೆಗೊಂಡಿದೆ. ಆದರೆ
ಕಾಮಗಾರಿ ಅಪೂರ್ಣದ ಹಿನ್ನೆಲೆಯಲ್ಲಿ ನ.4ರಂದು ಕಾರ್ಯಾರಂಭ ಮಾಡಿದೆ. ಅಂದಿನಿಂದ ಎಲ್ಲಾ
ಬಸ್ಸುಗಳು ಹಳೆನಿಲ್ದಾಣದ ಬದಲು ಹೊಸ ಬಸ್ ನಿಲ್ದಾಣದಲ್ಲೇ ಬಂದು ನಿಲ್ಲುತ್ತಿವೆ. ಆದರೆ ಈ
ನಿಲ್ದಾಣಕ್ಕೆ ಸಾರ್ವಜನಿಕವಾಗಿ ಕುಡಿಯುವ ನೀರಿನ ಯಾವುದೇ ಮೂಲ ಇಲ್ಲ. ಅಕ್ಕಪಕ್ಕದಲ್ಲಿ
ಹೋಟೆಲ್, ಖಾನಾವಳಿ, ದುಕಾನ, ಪಾನಶಾಪ, ಬೇಕರಿ, ಮನೆಗಳಿಲ್ಲ. ನಿಲ್ದಾಣದ 14 ಮಳಿಗೆಗಳಿಗೆ
ಇನ್ನೂ ಟೆಂಡರ್ ಆಗದೆ ಅವುಗಳಿಗೆ ಬೀಗ ಬಿದ್ದಿದೆ. ಪ್ರಯಾಣಿಕರು ನೀರು ಕೊಂಡು
ಕೊಳ್ಳಬೇಕೆಂದರೆ ಹಳೆ ಬಸ್ ನಿಲ್ದಾಣ ಮತ್ತು ಭರತನೂರ ರಸ್ತೆ ಮಾರ್ಗ ಸ್ವಲ್ಪ ಅಂತರದಲ್ಲಿದ್ದು
ಬಸ್ಸು ತಪ್ಪಿಸಿಕೊಳ್ಳುವ ಭಯ ಪ್ರಯಾಣಿಕರಿಗೆ ಕಾಡುತ್ತಿದೆ.
‘ಕುಡಿಯುವ ನೀರಿನ ವ್ಯವಸ್ಥೆ ಯಾಕೆ ಮಾಡಿಲ್ಲ? ಎಂದು ಬಸ್ ನಿಲ್ದಾಣ ಅಥವಾ ಬಸ್ ಘಟಕದ
ಮುಖ್ಯಸ್ಥರಿಗೆ ಕೇಳಿದರೆ, ಈ ನೀರಿನ ವ್ಯವಸ್ಥೆಯು ಹೊಸ ನಿಲ್ದಾಣದ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಿಗೆ ಸಂಬಂಧಪಟ್ಟಿಲ್ಲ ಹೀಗಾಗಿ ಅವರು ವ್ಯವಸ್ಥೆ ಕಲ್ಪಿಸಿರುವುದಿಲ್ಲ ಎಂಬ ಹಾರಿಕೆ
ಉತ್ತರ ನೀಡುತ್ತಿದ್ದಾರೆ’ ಎಂದು ಪ್ರಯಾಣಿಕರು ದೂರಿದ್ದಾರೆ.
ಬಸ್ ನಿಲ್ದಾಣ ಉದ್ಘಾಟನೆಗೊಂಡು ಏಳು ತಿಂಗಳ ಬಳಿಕ ಕಾರ್ಯಾರಂಭಗೊಳಿಸಿದರೂ ಇನ್ನು
ಕುಡಿಯುವ ನೀರಿನ ವ್ಯವಸ್ಥೆ ಇಲ್ಲವೆಂದರೆ ಏನರ್ಥ? ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ಪ್ರಯಾಣಿಕರಿಗೆ ಕುಡಿಯುವ ನೀರಿಲ್ಲದೆ ಹೊಸ ಬಸ್ ನಿಲ್ದಾಣ ಶುರುಮಾಡಿದ್ದಾರೆ. ಜನರು ಬಾಯಾರಿಕೆಯಿಂದ ಬಳಲಿ ಏನಾದರೂ ಅನಾಹುತವಾದರೆ ಈ ನಿಲ್ದಾಣದವರೇ ಹೊಣೆ ಹೊರಬೇಕಾಗುತ್ತದೆ.– ಇಬ್ರಾಹಿಂಪಾಶಾ ಗಿರಣಿಕರ್, ನಿವೃತ್ತ ನೌಕರ
ಮಳಿಗೆಗಳನ್ನು ಹರಾಜು ಮಾಡದೆ ಕುಡಿಯುವ ನೀರಿಲ್ಲದೆ ಸ್ವಚ್ಛತೆ ಇಲ್ಲದೆ ಬಸ್ ನಿಲ್ದಾಣ ಆರಂಭಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಿದೆ.– ಕಾಳಪ್ಪ ಸುಂಠಾಣ, ಸ್ಥಳೀಯ
Quote - ಕುಡಿಯುವ ನೀರಿನ ವ್ಯವಸ್ಥೆ ಶೀಘ್ರದಲ್ಲಿ ಕಲ್ಪಿಸುವಂತೆ ಕೆ.ಕೆ.ಆರ್.ಟಿ.ಸಿ ಎಇಇ ಅವರಿಗೆ ತಿಳಿಸಿದ್ದೇನೆ. 2 ದಿನಗಳಲ್ಲಿ ಸಿಂಟೆಕ್ಸ್ ಟ್ಯಾಂಕ್ ಪೈಪ್ ಅಳವಡಿಸುವ ಭರವಸೆ ನೀಡಿದ್ದಾರೆ.– ಯಶವಂತ ಯಾತನೂರ, ಡಿಪೊ ಮ್ಯಾನೇಜರ್ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.