ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವಾಹನಗಳಲ್ಲಿ ಕಾಣದ ‘ಅಂತರ’

ಆಳಂದ: ಟಂಟಂ, ಕ್ರೂಸರ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ, ಹೆಚ್ಚಿದ ಆತಂಕ
Last Updated 4 ಜೂನ್ 2020, 10:01 IST
ಅಕ್ಷರ ಗಾತ್ರ

ಆಳಂದ (ಕಲಬುರ್ಗಿ): ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಳಂದ ಪಟ್ಟಣಕ್ಕೆ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿರುವ ಟಂಟಂ, ಕ್ರೂಸರ್‌ ಇತ್ಯಾದಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರ ನಡುವೆ ನಿಗದಿತ ಅಂತರ ಹಾಗೂ ಮಾಸ್ಕ್‌ ಬಳಕೆ ಕಾಣುತ್ತಿಲ್ಲ.

ಲಾಕ್‌ಡೌನ್‌ ಸಡಿಲಿಕೆ ನಂತರ ಹಳ್ಳಿಗಳಿಂದ ಆಳಂದ ಪಟ್ಟಣಕ್ಕೆ ಆಗಮಿಸುವರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್‌ಗಳ ಓಡಾಟಕ್ಕೆ ಇನ್ನೂ ಅನುಮತಿ ದೊರೆತಿಲ್ಲ. ಕೊರೊನಾ ಹರಡುವಿಕೆಯ ತಡೆಗಾಗಿ ಬಸ್‌ ಸಂಚಾರಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಆದರೆ ಜನರು ಕಿರಾಣಿ, ಕೃಷಿ ಸಲಕರಣೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ, ಆಸ್ಪತ್ರೆ, ಬ್ಯಾಂಕ್‌ ವ್ಯವಹಾರಗಳಿಗಾಗಿ ಖಾಸಗಿ ವಾಹನಗಳಲ್ಲಿ ಪಟ್ಟಣಕ್ಕೆ ಬರುತ್ತಿದ್ದಾರೆ.

ಗ್ರಾಮಸ್ಥರು ಸಹಜವಾಗಿ ಅಲ್ಲಿನ ಕ್ರೂಸರ್‌, ಜೀಪ್‌, ಟಂಟಂ ಅವಲಂಬಿಸಿದ್ದಾರೆ. ಈ ವಾಹನಗಳು ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿರುವದು ಆತಂಕಕ್ಕೆ ಕಾರಣವಾಗಿದೆ. 18ಕ್ಕೂ ಹೆಚ್ಚು ಜನರು ಈ ವಾಹನಗಳಲ್ಲಿ ಕುಳಿತು, ಕಿಟಕಿ ಹಿಡಿದು ನಿಂತು ಬರುವ ದೃಶ್ಯಗಳು ಕಾಣುತ್ತಿವೆ. ತಾಲ್ಲೂಕಿನಲ್ಲಿ ದಿನೇ ದಿನೇ ಕೋವಿಡ್‌ ಸೋಂಕಿತರ ಸಂಖ್ಯೆಯು ಅಧಿಕಗೊಳ್ಳುತ್ತಾ ಹೋಗುತ್ತಿದೆ.

‘ಜನರು ವ್ಯಾಪಾರ ವಹಿವಾಟಿಗೆ ಪಟ್ಟಣಕ್ಕೆ ಬರವುದು ಅನಿವಾರ್ಯವಾಗಿದೆ. ಸರ್ಕಾರಿ ಬಸ್‌ ಇಲ್ಲ ಅಂದರೆ ಜೀಪ್‌ಗಳಲ್ಲಿ ಬರಬೇಕು, ಅವರು ಜೀಪ್‌ ತುಂಬಿದ ಮೇಲೆ ಗಾಡಿ ಚಾಲೂ ಮಾಡ್ತಾರ’ ಎಂದು ಕಣಮಸದ ಮಲ್ಲಿಕಾರ್ಜುನ ತಿಳಿಸಿದರು.

ಮಾದನ ಹಿಪ್ಪರಗಾ, ಖಜೂರಿ, ತಡಕಲ, ಬೆಳಮಗಿ, ನಿಂಬರ್ಗಾ, ಹಿರೋಳ್ಳಿ ಮಾರ್ಗವಾಗಿ ದಿನನಿತ್ಯ ನೂರಾರು ಖಾಸಗಿ ವಾಹನಗಳು ಸಂಚರಿಸುತ್ತಿವೆ. ಕೊರೊನಾ ಇದ್ದರೂ ದೇವರ ಮೇಲೆ ಭಾರ ಹಾಕಿ ಹೋಗುತ್ತಿವೆ ಎಂದು ಪ್ರಯಾಣಿಕೆ ಶಿವಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

‘ಕ್ರೂಸರ್‌ನಲ್ಲಿ ಅಂತರ ಕಾಪಾಡಿಕೊಳ್ಳಲು ಹೋದರೆ ನಮಗೆ ನಷ್ಟವಾಗುವುದು. ಪ್ರಯಾಣಿಕರಿಂದ ಹೆಚ್ಚಿಗೆ ಹಣ ಕೇಳಿದರೆ ಕೊಡಲು ಹಿಂದೇಟು ಹಾಕುತ್ತಾರೆ. ಮಾಸ್ಕ್‌, ಬಟ್ಟೆ ಕಟ್ಟಿಕೊಂಡು ವಾಹನದಲ್ಲಿ ಕುಳಿತುಕೊಳ್ಳಲು ಸೂಚಿಸುತ್ತೇವೆ’ ಎಂದು ಜೀಪ್‌ ಚಾಲಕ ಗಂಗಪ್ಪ ಹೇಳಿದರು.

ಸರ್ಕಾರ ಸೂಚಿಸಿದ ನಿಯಮಗಳನ್ನು ಖಾಸಗಿ ವಾಹನಗಳು ಆಚರಣೆಗೆ ತರದಿರುವುದು ಕಂಡು ಬಂದರೂ ಇದಕ್ಕೆ ಕಡಿವಾಣ ಹಾಕಲು ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳದೆ ಹೋದರೆ ಜನರಲ್ಲಿ ಆತಂಕ ಹೆಚ್ಚಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT