ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕೋವಿಡ್‌ನಿಂದ ಮತ್ತೊಬ್ಬ ಸಾವು

ಹೊಸದಾಗಿ 38 ಮಂದಿಗೆ ಸೋಂಕು, ಇವರಲ್ಲಿ ಮಹಾರಾಷ್ಟ್ರದಿಂದ ಮರಳಿದವರು 18 ಜನ
Last Updated 3 ಜುಲೈ 2020, 4:44 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟ, ಬೀದರ್‌ ಜಿಲ್ಲೆಯ 36 ವರ್ಷದ ವ್ಯಕ್ತಿಗೂ ಕೋವಿಡ್‌ ಇರುವುದು ದೃಢಪಟ್ಟಿದೆ. ಈ ಮೂಲಕ ಕೋವಿಡ್‌ನಿಂದ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ 38 ಹೊಸ ಪ್ರಕರಣಗಳು ಗುರುವಾರ ಪತ್ತೆಯಾಗಿವೆ.

ಮೃತ ವ್ಯಕ್ತಿ ಬೀದರ್ ಜಿಲ್ಲೆಯ ಹುಮನಾಬಾದ್‍ ಮೂಲದವರು. ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ವಾಪಸಾಗಿದ್ದ ಇವರಿಗೆ, ಪ್ರಯಾಣದ ವೇಳೆ ಕೋವಿಡ್‌ ಅಂಟಿಕೊಂಡಿತ್ತು. ಜೂನ್‌ 29ರಂದು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರನ್ನು ‘ಜಿಮ್ಸ್’ ಆಸ್ಪತ್ರೆಗೆ ದಾಖಲಾಗಿತ್ತು. ಐಸಿಯು ಘಟಕದಲ್ಲಿ ಇದ್ದಾಗಲೇ ಅವರು ಜೂನ್‌ 30ರಂದು ಕೊನೆಯುಸಿರೆಳೆದರು. ಅವರ ಗಂಟಲು ದ್ರವ ತಪಾಸಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ.

ವ್ಯಕ್ತಿಯ ಮನೆಯನ್ನು ಶೀಲ್‌ಡೌನ್‌ ಮಾಡಿದ್ದು, ಕುಟುಂಬದವರು ಹಾಗೂ ನೇರ ಸಂಪರ್ಕಕ್ಕೆ ಬಂದವರನ್ನು ಹೋಂ ಕ್ವಾರಂಟೈಲ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.‌

ಇನ್ನೂ ನಿಲ್ಲದ ‘ಮಹಾ’ಕಂಟಕ: ಗುರುವಾರ ಪತ್ತೆಯಾದ 38 ಪ್ರಕರಣಗಳಲ್ಲಿ ಮಹಾರಾಷ್ಟ್ರದ ವಿವಿಧ ನಗರಗಳಿಂದ ಜಿಲ್ಲೆಗೆ ಮರಳಿದ 18 ಮಂದಿ ಸೇರಿದ್ದಾರೆ. ಎರಡೂವರೆ ತಿಂಗಳ ಬಳಿಕವೂ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗಳು ಹಾಗೂ ಅವರ ನೇರ ಸಂಪರ್ಕಕ್ಕೆ ಬಂದವರಲ್ಲಿ ವೈರಾಣು ಪತ್ತೆ ನಿಂತೇ ಇಲ್ಲ.

ಉಳಿದಂತೆ, ನಗದಲ್ಲಿ ಸೋಂಕಿತರ ನೇರ ಸಂಪ‍ರ್ಕಕ್ಕೆ ಬಂದ ಮೂವರನ್ನು ಐಸಿಯು ವಾರ್ಡ್‌ಗೆ ದಾಖಲಿಸಲಾಗಿದೆ.

ಆರು ಮಕ್ಕಳಿಗೆ ಸೋಂಕು: ಹೊಸದಾಗಿ ಪತ್ತೆಯಾದ ಪ್ರಕರಣಗಳಲ್ಲಿ ಬಹುಪಾಲು ಮಂದಿ 50 ವರ್ಷದೊಳಗಿನವರೇ ಆಗಿದ್ದಾರೆ. ಅದರಲ್ಲೂ ಆರು ಮಕ್ಕಳಿಗೂ ವೈರಾಣು ಅಂಟಿಕೊಂಡಿದೆ. 9 ಮಂದಿಗೆ ಯಾರ ಸಂಪರ್ಕದಿಂದ ಸೋಂಕು ತಗುಲಿದೆ ಎಂಬುದು ಪತ್ತೆಯಾಗಿಲ್ಲ. ಇವರೆಲ್ಲರೂ ಜ್ವರದಿಂದ ಬಳಲುತ್ತಿದ್ದ ಕಾರಣ, ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 1,488ಕ್ಕೆ ಏರಿಕೆಯಾಗಿದೆ. 23 ಜನ ಗುರುವಾರ ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ ಸಹ 1,126ಕ್ಕೆ ಏರಿದೆ. ಇನ್ನೂ 343 ಸೋಂಕಿತರಿಗೆ ಐಸೋಲೇಷನ್ ವಾರ್ಡ್‍ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತೆ ಇಬ್ಬರು ಕಾನ್‌ಸ್ಟೆಬಲ್‌, ಒಬ್ಬ ಹೋಂಗಾರ್ಡ್‌ಗೆ ಸೋಂಕು

ನಗರದ ಇಬ್ಬರು ಕಾನ್‌ಸ್ಟೆಬಲ್‌ಗಳು ಹಾಗೂ ಒಬ್ಬ ಗೃಹರಕ್ಷಕ ದಳದ ಒಬ್ಬ ಸಿಬ್ಬಂದಿಗೂ ಗುರುವಾರ ಸೋಂಕು ಅಂಟಿಕೊಂಡಿದೆ. ಇದರಿಂದ ಕೊರೊನಾ ವಾರಿಯರ್ಸ್‌ಗಳಲ್ಲಿ ಆತಂಕ ಮನೆ ಮಾಡಿದೆ.

ಇಲ್ಲಿನ ಸ್ಟೇಷನ್ ಬಜಾರ್‌ ಠಾಣೆಯ ಮತ್ತು ಬ್ರಹ್ಮಪುರ ಠಾಣೆಯ ತಲಾ ಒಬ್ಬರು ಕಾನ್‌ಸ್ಟೆಬಲ್‌ಗಳು ಹಾಗೂ ರಾಘವೇಂದ್ರ ನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೋಂ ಗಾರ್ಡ್‌ ವೈರಸ್‌ನಿಂದ ಬಳಲುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದ ಹಿರಿಯ ನೌಕರ ಹಾಗೂ ಸೇಡಂ ರಸ್ತೆಯಲ್ಲಿರುವ ಪ್ರಸಿದ್ಧ ಆಸ್ಪತ್ರೆಯ ಪಿ.ಜಿ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆಗೂ ಕೋವಿಡ್‌ ದೃಢಪಟ್ಟಿದೆ. ಈ ಮಹಿಳೆ ಗೋದುತಾಯಿ ನಗರದ ನಿವಾಸಿ. ಹೀಗಾಗಿ, ಹಾಸ್ಟೆಲ್‌ ಹಾಗೂ ಮಹಿಳೆಯ ನಿವಾಸದ ಸುತ್ತಲಿನ ಪ್ರದೇಶವನ್ನು ಶೀಲ್‌ಡೌನ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT