ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ| ಈರುಳ್ಳಿ ಬೆಳೆಗೆ ತಲೆಸುಡು ರೋಗ: ಬೆಳೆಗಾರರು ಕಂಗಾಲು

Last Updated 8 ನವೆಂಬರ್ 2019, 10:33 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರತಿಕೂಲ ಹವಾಮಾನದಿಂದ ಈರುಳ್ಳಿ ಬೆಳೆಗೆ ಬಾಧಿಸುತ್ತಿರುವ ತಲೆಸುಡು ರೋಗದಿಂದ ಬೆಳೆಗಾರರು ಕೈ ಸುಟ್ಟುಕೊಳ್ಳುವಂತಾಗಿದೆ.

ಈರುಳ್ಳಿ ಸಸಿಗಳು ಚೇತರಿಸಿಕೊಳ್ಳುವ ಹಂತದಲ್ಲಿಯೇ ತಲೆಸುಡು ರೋಗಕ್ಕೆ ತುತ್ತಾಗಿರುವುದು ಚಿಂತೆಗೀಡು ಮಾಡಿದೆ ಎಂದು ಐನಾಪುರದ ಬೆಳೆಗಾರ ಗುಂಡಪ್ಪ ಹೊಸಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದರಿಂದ ಈರುಳ್ಳಿ ಗಡ್ಡೆಗೆ ಉತ್ತಮ ಬೆಲೆ ದೊರೆಯುವ ಆಸೆಯಿಂದ ತಾಲ್ಲೂಕಿನಲ್ಲಿ ನೀರಾವರಿ ಸೌಲಭ್ಯವುಳ್ಳ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೇಸಾಯಕ್ಕೆ ಮುಂದಾಗಿದ್ದಾರೆ.

ಮಳೆಯಿಂದ ಭೂಮಿಯ ಒಳಗಡೆ, ಮೇಲ್ಭಾಗದಲ್ಲಿ ಮತ್ತು ವಾತಾವರಣದಲ್ಲಿ ಅಧಿಕ ತೇವಾಂಶ ಇರುವುದು ರೋಗ ಬರಲು ಕಾರಣವಾಗಿದೆ.

ತಾಲ್ಲೂಕಿನಲ್ಲಿ ಸುಮಾರು 200 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಈ ಪ್ರದೇಶ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಜೀಮುದ್ದಿನ್‌ ತಿಳಿಸಿದ್ದಾರೆ.

ವಿಜ್ಞಾನಿಗಳ ಸಲಹೆ:ಈರುಳ್ಳಿಗೆ ತಲೆಸುಡು ರೋಗ ಚಿಂಚೋಳಿ ತಾಲ್ಲೂಕು ಹಾಗೂ ಕಮಲಾಪುರ ತಾಲ್ಲೂಕುಗಳಲ್ಲಿ ಕಾಣಿಸಿದೆ. ಶೇ 90ರಷ್ಟು ಈರುಳ್ಳಿ ತೋಟಗಳಲ್ಲಿ ಈ ರೋಗ ಸಾಮಾನ್ಯವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ತಜ್ಞ ಡಾ. ಜಹೀರ ಅಹಮದ್‌ ತಿಳಿಸಿದ್ದಾರೆ.

ತಲೆಸುಡು ರೋಗ ಹತೋಟಿಗೆ ರೈತರು ಪ್ರತಿ ಲೀಟರ್‌ ನೀರಿಗೆ ಕ್ರೊಥಲನಿಲ್‌ 2 ಗ್ರಾಂ ಅಥವಾ ಮ್ಯಾಕೊಜೆಬ್‌ 2 ಗ್ರಾಂ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅಧಿಕ ತೇವಾಂಶದಿಂದ ನುಸಿ ಹರಡುತ್ತಿದ್ದು, ನೆರಳೆ ಮಚ್ಛೆ ರೋಗದ ಶಿಲೀಂದ್ರ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಇದರ ಹತೋಟಿಗೆ ಪ್ರತಿ ಲೀಟರ್‌ ನೀರಿಗೆ ಲ್ಯಾಂಬ್ಡಸೈಲೊಥ್ರಿನ್ 0.5 ಗ್ರಾಂ ಬೆರೆಸಿ ಸಿಂಪಡಿಸಬೇಕು ಎಂದರು.

ಡಾ.ಜಹೀರ ಅಹಮದ್‌ ಅವರು ರಟಕಲ್‌, ಮರಗುತ್ತಿ, ಕಿಣ್ಣಿ ಸಡಕ್, ಮಹಾಗಾಂವ್‌, ಮುಕರಂಬಾ, ಗೋಗಿ, ಕೋಡ್ಲಿ, ಚಂದನಕೇರಾ ಮೊದಲಾದ ಕಡೆ ಈರುಳ್ಳಿ ಹೊಲಗಳಿಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT