ಸೋಮವಾರ, ನವೆಂಬರ್ 29, 2021
20 °C
ಆನ್‍ಲೈನ್ ಅರಿವಿನ ಮನೆ ಕಾರ್ಯಕ್ರಮ

ಅನುಭವಗಳನ್ನೇ ತತ್ವಗಳಾಗಿ ಮಂಡಿಸಿದ ಶರಣರು: ಡಾ.ಜಯಶ್ರೀ ದಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಶರಣರು ಅಷ್ಟಾವರಣಗಳನ್ನು ಅಂಗವೆಂದು, ಪಂಚಾಚಾರಗಳನ್ನು ಪ್ರಾಣವೆಂದು, ಷಟ್‌ಸ್ಥಲಗಳನ್ನು ಆತ್ಮವೆಂದು ಪರಿಗಣಿಸಿ ಹೊಸತತ್ವ ಚಿಂತನೆಯನ್ನು ರೂಪಿಸಿದರು. ಅವರು ಎಂದಿಗೂ ತಿಳಿಯದ ತತ್ವವನ್ನು ಸಮಾಜದ ಮೇಲೆ ಹೇರಲಿಲ್ಲ. ಕೃತಿಗಳಲ್ಲಿ ಮಾತ್ರ ಸೀಮಿತವಾಗಿರುವ ವಿಷಯಗಳನ್ನು ಎಂದೂ ಮಂಡಿಸದೆ, ನಾವು ಸ್ವತಃ ಅನುಭವಿಸಿ ನಿರ್ಣಯಿಸ ಬಹುದಾದಂತಹ ಸಂಗತಿಗಳನ್ನೇ ತತ್ವವಾಗಿಸಿದ್ದು ವಿನೂತನವಾಗಿ ಕಾಣಿಸುತ್ತದೆ‌’ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ.ಜಯಶ್ರೀ ದಂಡೆ ಹೇಳಿದರು.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಭಾನುವಾರ 684ನೇ ಆನ್‍ಲೈನ್ ಅರಿವಿನ ಮನೆ ಕಾರ್ಯಕ್ರಮದಲ್ಲಿ ‘ಲಿಂಗ ತತ್ವ’ ಕುರಿತು ಉಪನ್ಯಾಸ ನೀಡಿದರು.

‘ಇಷ್ಟಲಿಂಗ– ಜಂಗಮ ಇವರೆಡೂ ಬಸವಣ್ಣನವರ ಉದರದಲ್ಲಿಯೇ ಜನಿಸಿದವು ಎಂದು ಚೆನ್ನಬಸವಣ್ಣನವರು ಹೇಳುತ್ತಾರೆ. ಅಷ್ಟಾವರಣದ ಗಾಂಭಿರ್ಯತೆಯ ತತ್ವವೇ ಬಸವಣ್ಣನವರ ಉದರದಿಂದ ಜನಿಸಿದ್ದು ಎಂದೂ ಹೇಳಲಾಗುತ್ತಿದೆ. ಅವರ ಎದೆಯಾಳದಲ್ಲಿ ಆ ಎಲ್ಲ ತತ್ವಗಳ ಜ್ಞಾನ ಅಡಗಿತ್ತು. ಲಿಂಗದ ಲೀಲೆಯಿಂದ ಅಂಗತತ್ವ, ಲಿಂಗತತ್ವ, ಶಿವತತ್ವ, ಪರತತ್ವ ಮೊದಲಾದವುಗಳನ್ನೆಲ್ಲ ಒಳಗೊಂಡು ನಿರೀಕ್ಷಣ ಮೂರ್ತಿಯಾಗಿ ಇಷ್ಟಲಿಂಗ ನಮ್ಮ ಅಂಗದ ಮೇಲೆ ನೆಲೆಸಿದೆ ಎಂದು ಅಲ್ಲಮಪ್ರಭು ಹೇಳುತ್ತಾರೆ. ಪರಮಾನಂದ ಭಾವದಿಂದ ಇಷ್ಟಲಿಂಗವನ್ನು ನೋಡಿ ತತ್ವದಲ್ಲಿ ನಿಶ್ಚಯವನ್ನು ಮಾಡಬೇಕು ಎನ್ನುವ ಸಂಗತಿಯನ್ನು ಮೆರೆಮಿಂಡದೇವ ಶರಣರು ನಮ್ಮ ಮುಂದೆ ಇಡುತ್ತಾರೆ. ಹೀಗೆ ತತ್ವಗಳೆಲ್ಲವೂ ಶರಣರ ಪ್ರಯೋಗಗಳೇ ಆಗಿವೆ’ ಎಂದರು.

ಕಲಬುರಗಿ ಬಸವ ಸಮಿತಿಯ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ, ಪ್ರಧಾನ ಕಾರ್ಯದರ್ಶಿ ಬಂಡಪ್ಪ ಕೇಸೂರ ಇದ್ದರು. ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು