ಸೋಮವಾರ, ಏಪ್ರಿಲ್ 19, 2021
31 °C
ರಾಜ್ಯ ಮಟ್ಟದ ವಿಚಾರ ಸಂಕಿರಣ

ವಿರೋಧಿಸುವುದಕ್ಕಿಂತ ಗೌರವಿಸುವುದು ಶ್ರೇಷ್ಠ: ಕೆ.ವಿ.ಸುಬ್ರಹ್ಮಣ್ಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಭಾಗದ ಹಿಂದಿನ ಕಲಾವಿದರಿಗೆ ರಾಜಾಶ್ರಯ ಸಿಗಲಿಲ್ಲ. ಹಾಗಾಗಿ, ಅವರು ಇತರ ಪ್ರದೇಶಗಳ ಕಲಾವಿದರಂತೆ ದೊಡ್ಡ ಹೆಸರು ಮಾಡಿಲ್ಲ. ಆದರೆ, ಕಲೆಯಲ್ಲಿ ಮಾತ್ರ ಎಲ್ಲರಿಗಿಂತ ಗಟ್ಟಿತನ ಉಳಿಸಿಕೊಂಡಿದ್ದಾರೆ’ ಎಂದು ದೃಶ್ಯಕಲಾ ವಿಮರ್ಶಕ, ಬರಹಗಾರ ಕೆ.ವಿ.ಸುಬ್ರಹ್ಮಣ್ಯಂ ತಿಳಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ರಂಗಾಯಣದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕಲ್ಯಾಣ ಕರ್ನಾಟಕ ಆಧುನಿಕ ಮತ್ತು ಸಮಕಾಲೀನ ದೃಶ್ಯಕಲೆ’ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಬುರ್ಗಿಯ ಎಸ್.ಎಂ. ಪಂಡಿತ, ಶಂಕರರಾವ ಆಳಂದಕರ್, ರಾಯಚೂರಿನ ಶಂಕರಗೌಡ ಬೆಟ್ಟದೂರು ಅವರಿಂದ ಹಿಡಿದು ಈಗಿನ ಜೆ.ಎಸ್. ಖಂಡೇರಾವ್‌, ವಿ.ಜಿ. ಅಂದಾಣಿ, ಎ.ಎಸ್.ಪಾಟೀಲ ಅವರವರೆಗೂ ದೃಶ್ಯಕಲಾ ಇತಿಹಾಸ ಅವಲೋಕಿಸಿದಾಗ ಬೆರಗಾಗುತ್ತೇವೆ. ಬೇರೆ ಭಾಗದವರಿಗೆ ಸಿಕ್ಕಂತೆ ರಾಜಾಶ್ರಯ ಸಿಗಲಿಲ್ಲ. ಅದರೆ, ಅವರ ಕಲೆ ಶ್ರೇಷ್ಠವಾಗಿದೆ‘ ಎಂದರು.

‘ನಾವು ನಮ್ಮವರನ್ನು ಗೌರವಿಸುವುದಕ್ಕಿಂತ ವಿರೋಧಿಸುವುದೇ ಹೆಚ್ಚು. ನಮ್ಮ ಭಾಗದ ಕಲಾವಿದರನ್ನು ಗುರತಿಸುವ, ಬೆಳೆಸುವ ಪುರುಸೊತ್ತು ಈಗ ಯಾರಲ್ಲೂ ಇಲ್ಲ. ಈ ಕಾರಣಕ್ಕಾಗಿಯೇ ನಾವು ಎಲ್ಲದರಲ್ಲೂ ಹಿಂದೆ ಉಳಿದಿದ್ದೇವೆ ಎಂಬ ಭಾವನೆ ಮೂಡಿದೆ. ಇನ್ಮೇಲಾದರೂ ಈ ಭಾಗದ ಕಲಾವಿದರು ಹಾಗೂ ಕಲೆಗಳ ಬಗ್ಗೆ ಸಂಶೋಧನೆಗಳು ನಡೆಯಬೇಕು’ ಎಂದರು.

‘ಈ ನೆಲವು ಕಲೆಯಲ್ಲಿ ಎಷ್ಟು ಶ್ರೀಮಂತ ಎಂಬುದು ಬಹುಪಾಲು ಮಂದಿಗೆ ಇನ್ನೂ ತಿಳಿದಿಲ್ಲ. ಮೂರು ಅಂತರರಾಷ್ಟ್ರೀಯ ಮಟ್ಟದ ದೃಶ್ಯಕಲಾ ಮೇಳಗಳು ಕಲಬುರ್ಗಿ ನಗರದಲ್ಲೇ ನಡೆದಿವೆ. ಇದನ್ನು ಹೊರತುಪಡಿಸಿದರೆ ತುಮಕೂರು ಮತ್ತು ಪುದುಚೆರಿಯಲ್ಲಿ ನಡೆದಿವೆ. ಇದು ನಾವು ಹೆಮ್ಮೆ ಪಡುವ ಸಂಗತಿ ಅಲ್ಲವೇ? ಇಂಥ ಹಲವಾರು ಸತ್ಯಗಳನ್ನು ಈ ನೆಲವು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ’ ಎಂದರು.

‘ದೇವಾನು–ದೇವತನೆಗಳ ಕಲಾಕೃತಿಗಳನ್ನು ರಚಿಸುವ (ಡಿವೈನ್ ಆರ್ಟ್) ಕಲೆಯಲ್ಲಿ ಈ ಭಾಗದ ಕಲಾವಿದರ ಕೊಡುಗೆ ಅವಿಸ್ಮರಣೀಯ. ದೆಹಲಿ ಬಿರ್ಲಾ ಆರ್ಟ್‌ ಗ್ಯಾಲರಿಯಲ್ಲಿ ಇಲ್ಲಿನ ಕಲಾವಿದರ ಕಲಾಕೃತಿಗಳಿವೆ. ಗಾಂಧೀಜಿ ಅವರನ್ನು ಶಂಕರಗೌಡರು ಚಿತ್ರಿಸಿದರೆ, ಬೇದ್ರೆ ಅವರನ್ನು ಶಂಕರರಾವ್‌ ಚಿತ್ರಿಸಿದ್ದಾರೆ. ಇವೆರಡೂ ಕಲಾಕೃತಿಗಳು ಅಮೋಘವಾದವು’ ಎಂದು ಸುಬ್ರಹ್ಮಣ್ಯ ಬಣ್ಣಿಸಿದರು.

ಕಲಬುರ್ಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ‘ಶ್ರೇಷ್ಠ ಕಲಾವಿದರಾದ ಶಂಕರರಾವ್‌ ಆಳಂದಕರ್ ಅವರ ಹೆಸರನ್ನು ರಂಗಾಯಣದಲ್ಲಿ ಚಿರಸ್ಥಾಯಿಗೊಳಿಸಬೇಕು ಎಂಬ ವಿಚಾರಕ್ಕಿಂತ, ಅವರು ಕೆಲಸ ಮಾಡಿದ ಸಂಸ್ಥೆಯ ವಿಭಾಗಕ್ಕೆ ಹೆಸರಿಡುವುದು ಒಳ್ಳೆಯದು. ಈ ಬಗ್ಗೆ ಸಂಸ್ಥೆಗೆ ಮನವಿ ಮಾಡಿದ್ದೇನೆ’ ಎಂದರು.

ಎಸ್‌ಬಿಆರ್ ಕಾಲೇಜಿನ ಫೈನ್‌ ಆರ್ಟ್‌ ವಿಭಾಗದ ಮುಖ್ಯಸ್ಥೆ ಡಾ.ಶಾಂತಲಾ ಬಿ. ಅಪ್ಪ ಮತ್ತು ಹಿರಿಯ ಕಲಾವಿದ ಡಾ.ಎ.ಎಸ್. ಪಾಟೀಲ, ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ.ಪರಶುರಾಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಜಾನೆ ಕಾರ್ಯಕ್ರಮ ನಿರೂಪಿಸಿದರು.

ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯ ನಂತರದ ದೃಶ್ಯಕಲಾ ಚಟುವಟಿಕೆಗಳು ಹಾಗೂ ಕಲ್ಯಾಣ ಕರ್ನಾಟಕದ ಆಧುನಿಕ ಮತ್ತು ಸಮಕಾಲೀನ ಚಿತ್ರಕಲೆ ಕುರಿತು ಗೋಷ್ಠಿಗಳು ನಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.