ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ರಾಜ್ಯಶಾಸ್ತ್ರದಲ್ಲಿ ಪಲ್ಲವಿಗೆ ಮೊದಲ ರ್‍ಯಾಂಕ್

ಗುಲಬರ್ಗಾ ವಿಶ್ವವಿದ್ಯಾಲಯ: ಮಹಾಗಾಂವ ಕ್ರಾಸ್‌ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿ
–ತೀರ್ಥಕುಮಾರ ಬೆಳಕೋಟಾ
Published : 11 ಆಗಸ್ಟ್ 2024, 5:31 IST
Last Updated : 11 ಆಗಸ್ಟ್ 2024, 5:31 IST
ಫಾಲೋ ಮಾಡಿ
Comments

ಕಮಲಾಪುರ: ತಾಲ್ಲೂಕಿನ ಮಹಾಗಾಂವ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿ, ಕಲಖೋರಾ ಗ್ರಾಮದ ‍ಪಲ್ಲವಿ ರಮೇಶ ಕಾಳಮಂದರ್ಗಿ ಅವರು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ರಾಜ್ಯಶಾಸ್ತ್ರ ವಿಭಾಗದಲ್ಲಿ ಮೊದಲ ರ್‍ಯಾಂಕ್‌ ‍ಪಡೆದಿದ್ದಾರೆ.

ರಾಜ್ಯಶಾಸ್ತ್ರ ವಿಭಾಗದಲ್ಲಿ 2023–2024ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಲ್ಲವಿ ಶೇ 70.15 ರಷ್ಟು ಅಂಕ ಪಡೆದು ಪೂರ್ಣಗೊಳಿಸಿದ್ದಾರೆ.  ಆಗಸ್ಟ್‌ 12 ರಂದು ನಡೆಯಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಕಲಖೋರಾ ಗ್ರಾಮದ ಕೃಷಿಕ ಕುಟುಂಬದ ರಮೇಶ, ಸಾವಿತ್ರಿ ಅವರ ಮಗಳು ಪಲ್ಲವಿ ಕಲಖೋರಾ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದಾರೆ. ಕಮಲಾಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕಲಬುರಗಿಯ ನೂತನ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ ಪಡೆದಿದ್ದಾರೆ.

‘ತಂದೆ, ತಾಯಿ, ಕುಟುಂಬಸ್ಥರ ಸಹಕಾರ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ಪ್ರಾಚಾರ್ಯರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಸರ್ಕಾರಿ ಶಾಲಾ, ಕಾಲೇಜುಗಳ ಬಗ್ಗೆ ತಾತ್ಸಾರ ತಾಳಬಾರದು. ಗುಣಮಟ್ಟದ ಶಿಕ್ಷಕರು ಪ್ರಾಧ್ಯಾಪಕರು ಇರುತ್ತಾರೆ. ಅವರ ಮಾರ್ಗದರ್ಶನದೊಂದಿಗೆ ಸತತ ಅಭ್ಯಾಸ ಮಾಡಿದರೆ ಸಾಧನೆ ಸುಲಭವಾಗುತ್ತದೆ’ ಎಂಬುದು ಪಲ್ಲವಿ ಅವರ ಅಭಿಪ್ರಾಯ.

‘ನಿತ್ಯ 15 ಕಿ.ಮೀ ಸಂಚರಿಸಿ, ಗ್ರಾಮೀಣ ಭಾಗದ ಸ್ನಾತಕೋತ್ತರ ಕೇಂದ್ರದಲ್ಲಿ ಅಭ್ಯಾಸ ಮಾಡಿ ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನ ಪಡೆಯುವುದು ಸಣ್ಣ ಮಾತಲ್ಲ. ಈ ನಿಟ್ಟಿನಲ್ಲಿ ಮಹಾಗಾಂವ ಕ್ರಾಸ್‌ ಸ್ನಾತಕೋತ್ತರ ಕೇಂದ್ರದ ಶ್ರಮ ದೊಡ್ಡದಾಗಿದೆ. ವಿದ್ಯಾರ್ಥಿನಿ ಸಾಧನೆ ಪ್ರಸಂಶನೀಯ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಬಸವರಾಜ ಮತ್ತಿಮಡು ಹಾಗೂ ಪ್ರಾಚಾರ್ಯ ಶರಣಪ್ಪ ಎಸ್‌. ಮಾಳಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಪ್ರಾಧ್ಯಾಪಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT