ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯಲ್ಲಿ ಪಾರ್ಕಿಂಗ್ ಸಮಸ್ಯೆ: ತಪ್ಪದ ಸಂಚಾರ ಸಂಕಷ್ಟ

ಪಾಲನೆಯಾಗದ ಸಂಚಾರ ನಿಯಮ, ಸೂಪರ್‌ ಮಾರ್ಕೆಟ್‌ನಲ್ಲಿ ಹೆಚ್ಚಿದ ವಾಹನಗಳ ದಟ್ಟಣೆ, ರಸ್ತೆ ಮಧ್ಯದಲ್ಲಿಯೇ ಆಟೊಗಳ ನಿಲುಗಡೆ
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ವಾಹನಗಳ ನೋಂದಣಿ ಪ್ರಕ್ರಿಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ತಕ್ಕಂತೆ ನಗರ ಸೇರಿದಂತೆ ತಾಲ್ಲೂಕುಗಳಲ್ಲಿಯೂ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ.

ಸಂಚಾರ ನಿಯಮ ಮೀರಿ ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಸುಗಮ ಸಂಚಾರಕ್ಕೆ ನಿತ್ಯ ತೊಂದರೆ ಅನುಭವಿಸುತ್ತಲೇ ಇದ್ದಾರೆ.

ಕಲಬುರ್ಗಿ ನಗರದಲ್ಲಿನ ಸೂಪರ್‌ ಮಾರ್ಕೆಟ್‌ ಪ್ರದೇಶ, ನ್ಯೂ ಜೇವರ್ಗಿ ರಸ್ತೆ, ರಾಮಮಂದಿರ ವೃತ್ತ, ಆಳಂದ ಚೆಕ್‌ಪೋಸ್ಟ್‌, ಸರ್ದಾರ್‌ ವಲ್ಲಭ್‌ ಭಾಯ್ ಪಟೇಲ್‌ ವೃತ್ತ ಹಾಗೂ ಕೇಂದ್ರ ಬಸ್‌ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿತ್ಯ ಅಪಾರ ಸಂಖ್ಯೆಯಲ್ಲಿ ವಾಹನಗಳು ಸಂಚಾರಿಸುತ್ತವೆ. ಇಲ್ಲಿ ದ್ವಿಚಕ್ರ ವಾಹನ ಸವಾರರು ವಾಹನ ನಿಲುಗಡೆ ಮಾಡಲು ಸೂಕ್ತ ಜಾಗ ಹುಡುಕಬೇಕಾಗುತ್ತದೆ. ರಸ್ತೆ ಬದಿ ವಾಹನ ನಿಲ್ಲಿಸಿದರೂ ಮಾಲೀಕರಿಗೆ ಅದರ ಭದ್ರತೆ ಚಿಂತೆಯೂ ಇರುತ್ತದೆ!

ನಗರದ ಸೂಪರ್‌ ಮಾರ್ಕೆಟ್‌ನ ಪಾದಚಾರಿ ಮಾರ್ಗದಲ್ಲಿಯೇ ದ್ವಿಚಕ್ರ ವಾಹನ ಸವಾರರು ವಾಹನ ನಿಲುಗಡೆ ಮಾಡುತ್ತಾರೆ. ಸಂಚಾರ ಠಾಣೆಯ ಪೊಲೀಸರು ಅವರಿಗೆ ದಂಡ ಹಾಕುತ್ತಾರೆ. ಅದು ಎಂದಿನಂತೆ ಮುಂದುವರೆಯುತ್ತಲೇ ಇರುತ್ತದೆ. ಇಲ್ಲಿನ ತರಕಾರಿ ಮಾರ್ಕೆಟ್‌ ಎದುರು ಸಾಲು ಸಾಲು ದ್ವಿಚಕ್ರ ವಾಹನ ಹಾಗೂ ಆಟೊಗಳನ್ನು ನಿಲ್ಲಿಸಲಾಗುತ್ತಿದೆ. ಅವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಪಾದಚಾರಿಗಳ ದೂರು.

‘ಸೂಪರ್‌ ಮಾರ್ಕೆಟ್‌ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ನಿಷೇಧವಿದೆ. ಆದರೂ ಜನರು ನಮ್ಮ ಹೋಟೆಲ್‌ ಮುಂದೆ ವಾಹನಗಳನ್ನು ನಿಲ್ಲಿಸುತ್ತಾರೆ. ಗ್ರಾಹಕರು ನಮ್ಮ ಹೋಟೆಲ್‌ಗೆ ಬರಲು ಪ್ರಯಾಸ ಪಡುತ್ತಾರೆ. ಇದರಿಂದ ನಮ್ಮ ವ್ಯಾಪಾರಕ್ಕೂ ತೊಂದರೆಯಾಗುತ್ತಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಬೇಕು. ಇಲ್ಲವಾದರೆ ವಾಹನಗಳನ್ನು ವಶಪಡಿಸಿಕೊಳ್ಳಬೇಕು. ಆದರೆ, ಇದ್ಯಾವುದನ್ನೂ ಪೊಲೀಸರು ಮಾಡುತ್ತಿಲ್ಲ’ ಎಂದು ಸೂಪರ್‌ ಮಾರ್ಕೆಟ್‌ನ ಹೋಟೆಲ್‌ನ ಮಾಲೀಕರೊಬ್ಬರು ದೂರುತ್ತಾರೆ.

‘ನಗರದಲ್ಲಿನ ವಾಹನಗಳ ಸಂಖ್ಯೆಗೆ ಅನುಗುಣವಾಗಿ ವ್ಯವಸ್ಥಿತವಾದ ವಾಹನಗಳ ನಿಲುಗಡೆ ಸೌಲಭ್ಯವನ್ನು ಕಲ್ಪಿಸಬೇಕು. ಮುಖ್ಯವಾಗಿ ಜನದಟ್ಟಣೆ ಸ್ಥಳವಾದ ಸೂಪರ್ ಮಾರ್ಕೆಟ್‌ ಹಾಗೂ ಬಸ್‌ನಿಲ್ದಾಣದ ಬಳಿ ಬಹುಅಂತಸ್ತಿನ ಪಾರ್ಕಿಂಗ್‌ ಸೌಲಭ್ಯದ ಕಟ್ಟಡವನ್ನು ನಿರ್ಮಾಣ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು‘ ಎನ್ನುತ್ತಾರೆ ಸೂಪರ್‌ ಮಾರ್ಕೆಟ್‌ನ ಅಂಗಡಿಯೊಂದರ ಮಾಲೀಕ ಮಹಮ್ಮದ್‌ ಬಾಷಾ.

***

ಸದಾ ವಾಹನ ದಟ್ಟಣೆ ಇರುವ ಸೂಪರ್‌ ಮಾರ್ಕೆಟ್‌ ರಸ್ತೆಯ ಸ್ಥಿತಿ ಹೇಳತೀರದು. ಜನರು ಸುಗಮವಾಗಿ ಓಡಾಡಲು ಸಾಧ್ಯವಾಗದ ಸ್ಥಿತಿ ಇದೆ. ರಸ್ತೆ ಮಧ್ಯದಲ್ಲಿಯೇ ದ್ವಿಚಕ್ರ ವಾಹನ, ಆಟೊಗಳನ್ನು ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೆ ನಿತ್ಯ ತೊಂದರೆಯಾಗುತ್ತಿದೆ.
ರಾಜು ಚೌವಾಣ್, ಮೆಡಿಕಲ್‌ ವಿದ್ಯಾರ್ಥಿ.
****
ನಗರದ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ವೃತ್ತ, ರೈಲ್ವೆ ನಿಲ್ದಾಣ ರಸ್ತೆ ಮಾರ್ಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯಿಲ್ಲ. ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ಸಂಚಾರ ಠಾಣೆಯ ಪೊಲೀಸರು ತೆಗೆದುಕೊಂಡು ಹೋಗುತ್ತಾರೆ. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡದೆ ವಾಹನ ಸವಾರರಿಗೆ ದಂಡ ವಿಧಿಸುವುದು, ವಾಹನಗಳನ್ನು ತೆಗೆದುಕೊಂಡು ಹೋಗುವುದು ಸರಿಯಲ್ಲ.
ಕೃಷ್ಣಮೂರ್ತಿ ಪವಾರ್‌, ವಿದ್ಯಾರ್ಥಿ.
****

ನಗರದ ಕೇಂದ್ರ ಬಸ್‌ನಿಲ್ದಾಣ ರಸ್ತೆಯಲ್ಲಿ (ಎಸ್‌ವಿಪಿ ವೃತ್ತದ ಬಳಿ) ಕೆಲ ಅಂಗಡಿಯವರು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು, ತಮ್ಮ ವ್ಯಾಪಾರಕ್ಕೆ ಪೂರಕವಾದ ಶೆಡ್‌ಗಳನ್ನು ಹಾಕಿರುತ್ತಾರೆ. ಇದು ಪಾದಚಾರಿಗಳಿಗೆ ತೊಂದರೆಯಾಗುತ್ತದೆ. ಕೂಡಲೇ ಸಂಬಂಧಿಸಿದವರು ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಬೇಕು.
ರಮೇಶ ಗುತ್ತೇದಾರ, ವ್ಯಾಪಾರಿ.
****

ಸಂಚಾರ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಂಬಂಧಿಸಿದ ಅಧಿಕಾರಿಗಳು ನಗರದಲ್ಲಿ ಉತ್ತಮ ಪಾರ್ಕಿಂಗ್‌ ಸೌಲಭ್ಯವನ್ನು ಕಲ್ಪಿಸಿಕೊಟ್ಟರೆ, ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.
ಶಿವಯೋಗಿ ಮಠಪತಿ, ಸಾಮಾಜಿಕ ಕಾರ್ಯಕರ್ತ, ಕಲಬುರ್ಗಿ.
****
ಸೇಡಂನಲ್ಲಿ ಒನ್ ವೇ ನಿಯಮವನ್ನು ಎಲ್ಲರೂ ಪಾಲಿಸಬೇಕು. ದೇಶದ ನಾಗರಿಕರಾದ ನಾವು ನೆಲದ ಕಾನೂನನ್ನು ಗೌರವಿಸಲೇ ಬೇಕು.
ಶೇಖರ್ ನಾಟೀಕಾರ, ಸೇಡಂ ನಿವಾಸಿ

****
ಸೂಪರ್ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇಲ್ಲಿನ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ಮಾರ್ಕೆಟ್ ಪ್ರದೇಶದಲ್ಲಿ ಬೃಹತ್ ಪಾರ್ಕಿಂಗ್ ವ್ಯವಸ್ಥೆಯನ್ನು ಪಾಲಿಕೆ ಅಧಿಕಾರಿಗಳು ಕಲ್ಪಿಸಿಕೊಡಬೇಕು
ಡಾ.ಅವಿನಾಶ್ ಎಚ್.ತಳಕೇರಿ, ಪ್ರಶಾಂತ್ ನಗರ, ಕಲಬುರ್ಗಿ

****

₹ 38 ಲಕ್ಷ ವೆಚ್ಚದಲ್ಲಿ ಪಾರ್ಕಿಂಗ್ ಸೌಲಭ್ಯ

‘ನಗರದ ಬಸ್‌ನಿಲ್ದಾಣದ ಬಳಿಯ ಜಿಡಿಎ ಬಡಾವಣೆಯಲ್ಲಿ 2 ಎಕರೆ ಪ್ರದೇಶದಲ್ಲಿ ಕೆಕೆಆರ್‌ಡಿಬಿ ವತಿಯಿಂದ ₹ 38 ಲಕ್ಷ ವೆಚ್ಚದಲ್ಲಿ ವ್ಯವಸ್ಥಿತವಾದ ಪಾರ್ಕಿಂಗ್‌ ಸೌಲಭ್ಯ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಆವರಣಕ್ಕೆ ತಂತಿ ಬೇಲಿ ಹಾಕಲಾಗಿದೆ. ಟಿಕೆಟ್‌ ಕೌಂಟರ್‌ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ದೀಪಗಳನ್ನು ಅಳವಡಿಸಲಾಗಿದೆ. ಇಲ್ಲಿ 500ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. ವಾಹನಗಳಿಗೆ ಭದ್ರತೆಯೂ ಇರುತ್ತದೆ‘ ಎನ್ನುತ್ತಾರೆ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ. ಜಾಧವ್‌.

‘ಇದಲ್ಲದೇ ಸೂಪರ್‌ ಮಾರ್ಕೆಟ್‌ ಪ್ರದೇಶದಲ್ಲಿನ ಸಿಟಿ ಬಸ್‌ನಿಲ್ದಾಣದ ಬಳಿ ಪಾಲಿಕೆ ವತಿಯಿಂದ ಸುಮಾರು ₹ 10 ಕೋಟಿ ವೆಚ್ಚದಲ್ಲಿ ಬಹುಅಂತಸ್ತಿನ ಪಾರ್ಕಿಂಗ್‌ ಕಟ್ಟಡವನ್ನು ನಿರ್ಮಿಸುವ ಚಿಂತನೆಯೂ ಇದೆ. ಇದಕ್ಕಾಗಿ ಅಗತ್ಯ ನಿವೇಶನ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಪಾಲಿಕೆಯಿಂದ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಅವರು ಜಾಗವನ್ನು

‘ಪೇ ಪಾರ್ಕಿಂಗ್‌ ಸೌಲಭ್ಯವಿಲ್ಲ’

‘ಕಲಬುರ್ಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎರಡು ಸಂಚಾರ ಠಾಣೆ ಸೇರಿದಂತೆ ಒಟ್ಟು 14 ಪೊಲೀಸ್‌ ಠಾಣೆಗಳಿವೆ. ಯಾವ ಠಾಣೆಯ ವ್ಯಾಪ್ತಿಯಲ್ಲೂ ‘ಪೇ ಪಾರ್ಕಿಂಗ್‌’ ವ್ಯವಸ್ಥೆ ಇಲ್ಲ. ನಗರದಿಂದ 2 ಕಿ.ಮೀ. ದೂರದಲ್ಲಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವ ನಿವೇಶವನ್ನು ಗುರುತಿಸುವ ಚಿಂತನೆ ನಡೆದಿತ್ತು. ಆದರೆ, ಅದು ನಗರದ ಜನತೆಗೆ ದೂರವಾಗುತ್ತದೆ. ಪ್ರಸ್ತುತ ಜಿಡಿಎ ಬಡಾವಣೆಯಲ್ಲಿ ಪಾಲಿಕೆಯಿಂದ ವ್ಯವಸ್ಥಿತವಾದ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವ ಕಾಮಗಾರಿ ಆರಂಭವಾಗಿದೆ‘ ಎಂದು ಸಂಚಾರ ಪೊಲೀಸ್‌ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿಯೇ ಈಗಾಗಲೇ ಗಂಜ್‌ ಮಾರ್ಗ ರಸ್ತೆ, ನ್ಯೂ ಜೇರ್ವಗಿ ರಸ್ತೆ ಸೇರಿ ಕೆಲವೆಡೆ ಸಮ–ಬೆಸ ಸಂಖ್ಯೆಗಳ ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಮಾರ್ಗದ ಕೆಲವೆಡೆ ವಾಹನ ನಿಲುಗಡೆಗಾಗಿಯೇ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಅಳವಡಿಸಬೇಕಿದೆ. ಇದಕ್ಕಾಗಿ ಪಾಲಿಕೆ ಅಧಿಕಾರಿಗಳಲ್ಲಿ ಮನವಿಯನ್ನೂ ಮಾಡಿಕೊಳ್ಳಲಾಗಿದೆ‘ ಎನ್ನುತ್ತಾರೆ ಅವರು.

ಸಿಬ್ಬಂದಿ ಕೊರತೆ

ನಗರದಲ್ಲಿ ವಾಹನಗಳ ದಟ್ಟಣೆಯಿಂದಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ನಿತ್ಯ ದಂಡ ಹಾಕುತ್ತಿರುತ್ತೇವೆ. ಆದರೂ, ಉಲ್ಲಂಘಿಸುವವರು ಹೆಚ್ಚಾಗಿದ್ದಾರೆ. ಇನ್ನೂ ಹೆಚ್ಚು ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಬೇಕಿದೆ. ಇದಕ್ಕಾಗಿ ನಮ್ಮಲ್ಲಿ ಅಗತ್ಯ ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ ಅವರು.

ರಸ್ತೆ ಬದಿಯಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಹಾಗೂ ಮಾರುಕಟ್ಟೆ ಪ್ರದೇಶದ ಸುತ್ತಮುತ್ತ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬೇಡಿ. ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂದು ನಿತ್ಯ ನಮ್ಮ ಸಿಬ್ಬಂದಿ ಸವಾರರಿಗೆ ಮನವಿ ಮಾಡುತ್ತಾರೆ. ಯಾರೂ ಪಾಲಿಸಲ್ಲ. ಎಲ್ಲಿದೆ ಫಲಕ ಎಂದು ನಮ್ಮ ಸಿಬ್ಬಂದಿಯನ್ನೇ ಪ್ರಶ್ನಿಸುತ್ತಾರೆ. ಈ ಧೋರಣೆ ಸರಿಯಲ್ಲ. ಎಲ್ಲರ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುತ್ತಾರೆ ಅವರು.

ಕಬ್ಬಿಣದ ತಡೆ ಗೇಟ್‌ ಬೇಡ

‘ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಾರದು ಎಂದು ಸೂಪರ್‌ ಮಾರ್ಕೆಟ್‌ನ ಕೆಲ ಅಂಗಡಿ, ಹೋಟೆಲ್‌ಗಳ ಮಾಲೀಕರು ತಮ್ಮ ಅಂಗಡಿ ಮುಂದಿನ ಪಾದಚಾರಿ ಮಾರ್ಗದಲ್ಲಿಯೇ ಕಬ್ಬಿಣದ ತಡೆ ಗೇಟ್‌ಗಳನ್ನು ಇಟ್ಟಿರುತ್ತಾರೆ. ಇದು ಜನರ ಸಂಚಾರಕ್ಕೆ ತೊಂದರೆಯಾಗುತ್ತದೆ. ಕೆಲವೊಮ್ಮೆ ಮಹಿಳೆಯರು, ಮಕ್ಕಳು ಇದನ್ನು ಎಡವಿ ಬಿದ್ದಿರುವ ಘಟನೆಗಳು ಕೂಡ ನಡೆದಿವೆ. ಇಂತಹ ಕಬ್ಬಿಣದ ಗೇಟ್‌ಗಳನ್ನು ಹಾಕಬಾರದು‘ ಎನ್ನುತ್ತಾರೆ ಸಂಚಾರ ಠಾಣೆಯ ಪೊಲೀಸ್.

*****

ತಾಲ್ಲೂಕುಗಳಲ್ಲಿಯೂ ಸಮಸ್ಯೆ

ಅಫಜಲಪುರ ಪಟ್ಟಣದಲ್ಲಿ ಸುಮಾರು 20 ಸರ್ಕಾರಿ ಕಚೇರಿಗಳಿದ್ದು, ಯಾವ ಕಚೇರಿ ಎದುರು ಪಾರ್ಕಿಂಗ್ ವ್ಯವಸ್ಥೆ ಇಲ್ಲ. ವಾಹನಗಳ ನಿಲುಗಡೆ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಜನರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಾರೆ.

ತಾಲ್ಲೂಕು ಆಡಳಿತವು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತಬಿರಾದಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ.ನದಾಫ್ ಹಾಗೂ ತಾಲ್ಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಶಂಕ್ರಪ್ಪ ‌ಮಣ್ಣೂರ ಮನವಿ ಮಾಡುತ್ತಾರೆ.

ಜೇವರ್ಗಿ, ವಾಡಿ ಹಾಗೂ ಸೇಡಂ ಪಟ್ಟಣದಲ್ಲಿಯೂ ವಾಹನಗಳ ಸಂಖ್ಯೆ ಹೆಚ್ಚು ಇದೆ. ಆದರೆ, ಎಲ್ಲಿಯೂ ವ್ಯವಸ್ಥಿತವಾದ ಪಾರ್ಕಿಂಗ್‌ ಸೌಲಭ್ಯವಿಲ್ಲ. ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಾರೆ. ವಾಡಿ ಪಟ್ಟಣದ ಮುಖ್ಯ ರಸ್ತೆಯಲ್ಲಿಯೇ ಲಾರಿಗಳನ್ನು ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ತೊಂದರೆ ಎದುರಿಸುವಂತಾಗಿದೆ.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ವ್ಯವಸ್ಥಿತವಾದ ಪಾರ್ಕಿಂಗ್ ಸೌಲಭ್ಯದ ಅಗತ್ಯವಿದೆ.
***

ವಾಹನ ನಿಲುಗಡೆ ನಿಷೇಧ ವಲಯ

ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆ, ವೃತ್ತಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಿರುವ ಕಾರಣ ಈ ಪ್ರದೇಶದಲ್ಲಿ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆ ದೃಷ್ಟಿಯಿಂದ ನಗರದ ಒಟ್ಟು 94 ವೃತ್ತಗಳಲ್ಲಿ ವಾಹನ ನಿಲುಗಡೆ ನಿಷೇಧ ವಲಯ (On Street No Parking Zone) ಎಂದು ಗುರುತಿಸಿ, ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಅಧಿಸೂಚನೆ ಹೊರಡಿಸಿದ್ದಾರೆ.

ಪಾಲಿಕೆಯ ವ್ಯಾಪ್ತಿಯ ವಲಯ-1ರಲ್ಲಿ 22, ವಲಯ-2 ರಲ್ಲಿ 55 ಹಾಗೂ

ವಲಯ-3 ರಲ್ಲಿ 17 ಸೇರಿದಂತೆ ಒಟ್ಟು 94 ದೊಡ್ಡ ಹಾಗೂ ಚಿಕ್ಕ ವೃತ್ತಗಳಲ್ಲಿ (Free left) ವಾಹನ ಸಂಚಾರ ಸುಗಮಗೊಳಿಸಲು ದೊಡ್ಡ ವೃತ್ತಗಳಲ್ಲಿ 50 ಮೀಟರ್‌ ವರೆಗೆ ಹಾಗೂ ಚಿಕ್ಕ ವೃತ್ತಗಳಲ್ಲಿ 25 ಮೀಟರ್‌ಗಳ ವರೆಗೆ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧ ವಲಯದ ಸ್ಥಳಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಪ್ರತ್ಯೇಕವಾಗಿ ಗುರುತಿಸಲಾದ ಪಾರ್ಕಿಂಗ್ ಜಾಗಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಸೂಚಿಸಿದ್ದಾರೆ.

***

ತಾಲ್ಲೂಕುವಾರು ನೋಂದಣಿ ವಾಹನಗಳ ವಿವರ (1990 ರಿಂದ 2021 ಮಾರ್ಚ್‌ ವರೆಗೆ)

ತಾಲ್ಲೂಕು;ವಾಹನಗಳು

ಕಲಬುರ್ಗಿ ನಗರ;2,90,543

ಚಿತ್ತಾಪುರ;50,889

ಸೇಡಂ;46,046

ಆಳಂದ;46,818

ಜೇವರ್ಗಿ;51,637

ಚಿಂಚೋಳಿ;41,001

ಅಫಜಲಪುರ;42,240

ಒಟ್ಟು 5,69,174 (ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ಬಗೆಯ ವಾಹನಗಳು)

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ವೆಂಕಟೇಶ ಹರವಾಳ, ಸಿದ್ದರಾಜ ಎಸ್‌.ಮಲಕಂಡಿ, ಅವಿನಾಶ ಬೋರಂಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT