ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಔಷಧ ವಿಜ್ಞಾನ ಕ್ಷೇತ್ರದಲ್ಲಿ ವ್ಯಾಪಕ ಅವಕಾಶ’

ಮಾತೋಶ್ರೀ ತಾರಾದೇವಿ ರಾಂಪುರೆ ಔಷಧ ವಿಜ್ಞಾನ ಕಾಲೇಜಿನ ಪದವಿ ಪ್ರದಾನ ಸಮಾರಂಭ
Last Updated 9 ಅಕ್ಟೋಬರ್ 2021, 14:22 IST
ಅಕ್ಷರ ಗಾತ್ರ

ಕಲಬುರಗಿ: ಭಾರತವು ಔಷಧಗಳ ರಫ್ತಿನಲ್ಲಿ ಮುನ್ನಡೆ ಸಾಧಿಸಿದ್ದು, ಕಳೆದ ವರ್ಷ ₹ 1.49 ಲಕ್ಷ ಕೋಟಿ ಮೊತ್ತದ ಔಷಧಿ ಸಾಮಗ್ರಿಗಳನ್ನು ರಫ್ತು ಮಾಡಲಾಗಿದೆ. ಕರ್ನಾಟಕವೂ ಪ್ರಮುಖ ಔಷಧ ತಯಾರಿಕಾ ರಾಜ್ಯವಾಗಿ ಗುರುತಿಸಿಕೊಂಡಿದ್ದು, ಔಷಧ ವಿಜ್ಞಾನ ಓದಿದವರಿಗೆ ಈ ಕ್ಷೇತ್ರದಲ್ಲಿ ವ್ಯಾಪಕ ಉದ್ಯೋಗಾವಕಾಶಗಳಿವೆ ಎಂದು ಕರ್ನಾಟಕ ಔಷಧ ನಿಯಂತ್ರಣ ಇಲಾಖೆಯ ಹೆಚ್ಚುವರಿ ಔಷಧ ನಿಯಂತ್ರಕ ಅಮರೇಶ ತುಂಬಗಿ ಹೇಳಿದರು.

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪುರೆ ಔಷಧ ವಿಜ್ಞಾನ ಕಾಲೇಜಿನ ವತಿಯಿಂದ ಶನಿವಾರ ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಆಸ್ಪತ್ರೆಯ ಔಷಧ ವಿಭಾಗ ಹಾಗೂ ಸರ್ಕಾರದ ಔಷಧ ನಿಯಂತ್ರಣ ಇಲಾಖೆಯಲ್ಲಿ ಕೆಲಸ ಮಾಡುವ ಸಾಂಪ್ರದಾಯಿಕ ಉದ್ಯೋಗಗಳ ಜೊತೆಗೆ ಔಷಧಿ ತಯಾರಿಕಾ ಕಂಪನಿಗಳಲ್ಲಿ ಸಂಶೋಧಕ, ವಿಶ್ಲೇಷಕ, ಔಷಧ ಗುಣಮಟ್ಟ ನಿಯಂತ್ರಕ ಸೇರಿದಂತೆ ಹಲವು ಉದ್ಯೋಗಗಳು ಸೃಷ್ಟಿಯಾಗಿವೆ. ಭಾರತ ಸರ್ಕಾರವು ಇತ್ತೀಚೆಗೆ 34 ವಿವಿಧ ಬಗೆಯ ಜವಾಬ್ದಾರಿಗಳನ್ನು ಔಷಧ ನಿಯಂತ್ರಣ ಇಲಾಖೆಗೆ ವಹಿಸಿದೆ. ಹೀಗಾಗಿ, ಈ ಕೋರ್ಸ್‌ ಅಧ್ಯಯನ ಮಾಡಿದವರಿಗೆ ನಿರುದ್ಯೋಗದ ಭೀತಿ ಕಾಡುವುದಿಲ್ಲ. ಆದರೆ, ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ನಮ್ಮನ್ನು ನಾವು ಹೊಸ ಸವಾಲುಗಳಿಗೆ ಅಣಿಗೊಳಿಸಿಕೊಳ್ಳಬೇಕು’ ಎಂದರು.

‘ಕೋವ್ಯಾಕ್ಸಿನ್‌ ಲಸಿಕೆ ತಯಾರಿಕೆ ಘಟಕ ಕರ್ನಾಟಕದಲ್ಲಿಯೂ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಔಷಧಿ, ಲಸಿಕೆ ತಯಾರಿಕೆ ಕಂಪನಿಗಳು ರಾಜ್ಯದತ್ತ ಮುಖ ಮಾಡಬಹುದು’ ಎಂದು ಅಮರೇಶ ತುಂಬಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಇ ಸೊಸೈಟಿ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ‘ದೇಶದ ವಿವಿಧ ಭಾಗಗಳಿಂದ ಔಷಧ ವಿಜ್ಞಾನ ಕಾಲೇಜಿಗೆ ಅಧ್ಯಯನಕ್ಕೆ ಬರುತ್ತಾರೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ವಿದ್ಯಾ ಸಂಸ್ಥೆಗಳು ಹೆಸರಾಗಿವೆ. ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಕಾಲೇಜು ಆರಂಭವಾಗಿ 2020ಕ್ಕೆ 50 ವರ್ಷಗಳು ಪೂರ್ಣಗೊಂಡಿದ್ದು, ಶೀಘ್ರವೇ ಅಮೃತ ಮಹೋತ್ಸವವನ್ನು ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದರು.

ಎಚ್‌ಕೆಇ ಸೊಸೈಟಿ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಡಾ. ಜಗನ್ನಾಥ ಬಿ. ಬಿಜಾಪುರ, ಜಂಟಿ ಕಾರ್ಯದರ್ಶಿ ಡಾ. ಮಹಾದೇವಪ್ಪ ವಿ. ರಾಂಪುರೆ, ಸದಸ್ಯರಾದ ಡಾ. ಶರಣಬಸಪ್ಪ ಬಿ. ಕಾಮರೆಡ್ಡಿ, ಡಾ. ನಾಗೇಂದ್ರ ಮಂಠಾಳೆ, ಅರುಣಕುಮಾರ ಎಂ. ಪಾಟೀಲ, ಡಾ. ಕೈಲಾಶ್ ಬಿ. ಪಾಟೀಲ, ವಿನಯ ಎಸ್‌. ಪಾಟೀಲ, ಸೋಮನಾಥ ಸಿ. ನಿಗ್ಗುಡಗಿ, ಡಾ. ಅನಿಲಕುಮಾರ ಬಿ. ಪಟ್ಟಣ, ಸಾಯಿನಾಥ ಎನ್‌. ಪಾಟೀಲ, ಎನ್. ಗಿರಿಜಾ ಶಂಕರ, ಕಾಲೇಜಿನ ಪ್ರಾಚಾರ್ಯ ಡಾ. ನಿತಿನ್ ಮಾಹೂರಕರ್, ಉಪ ಪ್ರಾಚಾರ್ಯ ಪ್ರೊ. ಲಿಂಗರಾಜ ಎಸ್. ಡಂಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT