ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಮುಕ್ತ ಕಲಬುರ್ಗಿಗೆ ಸಿದ್ಧತೆ

ರಾಷ್ಟ್ರೀಯ ಹಸಿರು ಪೀಠದ ಕರ್ನಾಟಕ ರಾಜ್ಯ ಮಂಡಳಿ ಅಧ್ಯಕ್ಷ ನ್ಯಾ.ಸುಭಾಷ್‌ ಆಡಿ
Last Updated 12 ಜುಲೈ 2019, 15:40 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲಬುರ್ಗಿಯನ್ನು ನವೆಂಬರ್‌ 1ರ ರಾಜ್ಯೋತ್ಸವ ದಿನದಿಂದಲೇ ತ್ಯಾಜ್ಯಮುಕ್ತ ನಗರವನ್ನಾಗಿಸಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದ್ದು, ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್‌ ಬಳಕೆಗೂ ಅಂದಿನಿಂದಲೇ ಕಟ್ಟುನಿಟ್ಟಿನ ಕಡಿವಾಣ ಹಾಕಲಾಗುತ್ತದೆ’ ಎಂದು ರಾಷ್ಟ್ರೀಯ ಹಸಿರು ಪೀಠದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ, ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಂಬಂಧ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತೆ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಚರ್ಚಿಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆಯೂ ಸೂಚಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಮಾಧ್ಯಮಗಳ ಸಹಕಾರವೂ ಅಷ್ಟೇ ಅಗತ್ಯವಾಗಿದೆ’ ಎಂದರು.

‘ಪ್ಲಾಸ್ಟಿಕ್‌ ಕೊಡುವವರಷ್ಟೇ ಅಲ್ಲದೇ, ಪ್ಲಾಸ್ಟಿಕ್‌ ಒಯ್ಯುವ ಸಾರ್ವಜನಿಕರ ಮೇಲೂ ಕಣ್ಣಿಡಲಾಗುತ್ತದೆ. ಇದಕ್ಕಾಗಿ ಪಾಲಿಕೆಯಿಂದ ಸಿಬ್ಬಂದಿ ನಿಯೋಜಿಸಲಾಗುತ್ತಿದ್ದು, ಪ್ಲಾಸ್ಟಿಕ್ ಒಯ್ಯುವವರ ಭಾವಚಿತ್ರ ತೆಗೆದು ದಂಡ ಹಾಕುತ್ತಾರೆ. ಒಟ್ಟಾರೆ, ಪ್ಲಾಸ್ಟಿಕ್‌ ಮುಕ್ತ ಕಲಬುರ್ಗಿಯನ್ನಾಗಿಸುವಲ್ಲಿ ಕೆಲ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಪ್ರತಿಯೊಂದು ಬಡಾವಣೆಗಳಲ್ಲಿ ಹಸಿ ಕಸವನ್ನು ಸಂಸ್ಕರಿಸಿ ಕಾಂಪೋಸ್ಟ್‌ ಗೊಬ್ಬರವನ್ನು ತಯಾರಿಸಲು ಪಾಲಿಕೆ ತರಬೇತಿ ನೀಡಲಿದೆ. ಇದರಿಂದಾಗಿ ಕಸವನ್ನು ದೂರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಯ್ಯುವುದು ತಪ್ಪುತ್ತದೆ. ಜೊತೆಗೆ ಬಡಾವಣೆಯಲ್ಲಿನ ಉದ್ಯಾನಗಳು, ತೋಟಗಳಿಗೆ ಬಳಸಲು ಗೊಬ್ಬರವೂ ಸಿಕ್ಕಂತಾಗುತ್ತದೆ. ಹೆಚ್ಚುವರಿ ಗೊಬ್ಬರವನ್ನು ಕೃಷಿ ಇಲಾಖೆಗೆ ನೀಡಬಹುದಾಗಿದೆ. ಕಡ್ಡಾಯವಾಗಿ ಒಣ ಕಸ ಹಾಗೂ ಹಸಿ ಕಸವನ್ನು ವಿಂಗಡಿಸಿಯೇ ಪೌರಕಾರ್ಮಿಕರಿಗೆ ಕೊಡಬೇಕು. ಇದು ಕಡ್ಡಾಯ’ ಎಂದರು.

ಕಟ್ಟಡ ತ್ಯಾಜ್ಯ ಒಯ್ಯಲು ಆನ್‌ಲೈನ್‌ ಮೂಲಕ ಮಾಹಿತಿ ನೀಡಿ: ‘ನಗರದಲ್ಲಿ ಕಟ್ಟಡ ಕೆಲಸಗಳು ನಡೆಯುತ್ತಿದ್ದು, ಹಳೆ ಕಟ್ಟಡಗಳನ್ನು ಕೆಡವುವ ಕೆಲಸವೂ ನಡೆಯುತ್ತಿದೆ. ಇವುಗಳನ್ನು ಸಾಗಿಸುವ ವಾಹನಗಳಿಗೆ ಪಾಲಿಕೆ ಪರ್ಮಿಟ್‌ ನೀಡಲಿದೆ. ಪರ್ಮಿಟ್‌ ಇಲ್ಲದ ವಾಹನಗಳಲ್ಲಿ ಕಟ್ಟಡದ ತ್ಯಾಜ್ಯ ಸಾಗಿಸಲು ಅವಕಾಶವಿಲ್ಲ. ಇಂತಹ ಅವಶೇಷಗಳನ್ನು ಸಾಗಿಸಬೇಕಾದಲ್ಲಿ ಪಾಲಿಕೆಗೆ ಆನ್‌ಲೈನ್‌ ಮೂಲಕ ಮಾಹಿತಿ ನೀಡಿದರೆ ಪಾಲಿಕೆ ಸಿಬ್ಬಂದಿ ಬಂದು ತ್ಯಾಜ್ಯ ಒಯ್ಯುತ್ತಾರೆ. ಮನೆಯಲ್ಲಿ ಹುಷಾರು ತಪ್ಪಿದವರು ತೀರಿಕೊಂಡ ಬಳಿಕ ಅವರು ಬಳಕೆ ಮಾಡಿದ ಗಾದಿ, ಬೆಡ್‌ಷೀಟ್‌, ತಲೆದಿಂಬನ್ನು ರಸ್ತೆಪಕ್ಕದಲ್ಲಿ ಎಸೆಯಲಾಗುತ್ತದೆ. ಅಂಥ ವಸ್ತುಗಳ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಿದರೆ ಅವರು ಕೊಂಡೊಯ್ಯುತ್ತಾರೆ. ಇದಕ್ಕೆ ಪಾಲಿಕೆ ಶುಲ್ಕವನ್ನು ಪಡೆಯಲಿದೆ. ಇದರಿಂದ ಪಾಲಿಕೆಗೆ ವರಮಾನವೂ ಬರಲಿದೆ’ ಎಂದು ಹೇಳಿದರು.

ಕಾರ್ಖಾನೆ ತ್ಯಾಜ್ಯ: ಜಿಲ್ಲೆಯಲ್ಲಿರುವ ಕಾರ್ಖಾನೆಗಳು ತ್ಯಾಜ್ಯ ನೀರನ್ನು ನದಿಗೆ ಬಿಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತ್ಯಾಜ್ಯ ಬಿಡುವುದು ಸಾಬೀತಾದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತನಿಖೆ ನಡೆಸಿ ಕಾರ್ಖಾನೆಯನ್ನೇ ಬಂದ್‌ ಮಾಡಿಸಬಹುದು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ., ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ್‌,ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ.ಗೋಪಾಲಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಪ್ಪ ಸತ್ಯಂಪೇಟೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಿಗಿರಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಎಸ್.ಇ.ಒ ಡಾ.ಎ.ರಮೇಶ್, ರಾಜ್ಯ ಮಟ್ಟದ ಸಮಿತಿಯ ನೋಡಲ್ ಅಧಿಕಾರಿ ನಾಗೇಶ್ ಹಂಚೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT