ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಲ್ಲಿ ಮೋದಿ ‘ಶೋ’: ಬಿಸಿಲಲ್ಲಿ ಬೆವರಿದ ಜನ

‘ರೋಡ್‌ ಶೋ’ಗಾಗಿ ಗಂಟೆಗಟ್ಟಲೆ ಕಾದು ನಿಂತು ದಣಿದವರಿಗೆ ಬೇಸರ, ನಿರಾಸೆ
Published 17 ಮಾರ್ಚ್ 2024, 5:19 IST
Last Updated 17 ಮಾರ್ಚ್ 2024, 5:19 IST
ಅಕ್ಷರ ಗಾತ್ರ

ಕಲಬುರಗಿ: ಲೋಕಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ‘ರೋಡ್‌ ಶೋ’ ಕಣ್ತುಂಬಿಕೊಳ್ಳಲು ರಣ, ರಣ ಬಿಸಿಲಲ್ಲಿ ಸೇರಿದವರಿಗೆ ಮೋದಿಯ ‘ಕಾರ್‌ ಶೋ’ ಅಕ್ಷರಶಃ ನಿರಾಸೆಯ ಮಡುವಿನಲ್ಲಿ ಮುಳುಗಿಸಿತು.

ಮಧ್ಯಾಹ್ನದ ಸೂರ್ಯ, 40 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಶಾಖದ ಹೊಡೆತ (ಹೀಟ್ ವೇವ್) ನೀಡುತ್ತಾ ಬಿಸಿಲಿಗೆ ಬಂದವರಿಗೆ ಬೆವರಿಳಿಸುತ್ತಿದ್ದ. ಇತ್ತ ‘ಕಮಲ’ ಚಿಹ್ನೆಯ ಬಾವುಟ ಹಿಡಿದು ತಂಡೋಪತಂಡವಾಗಿ ಮಧ್ಯಾಹ್ನ 12ರ ಸುಮಾರಿಗೆ ಬಂದ ಮೋದಿ ಅಭಿಮಾನಿಗಳು, ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರು ಹುಮ್ಮಸ್ಸಿನಿಂದ ‘ನಮೋ’ ಜೈಕಾರಾ ಹಾಕುತ್ತಾ ರಸ್ತೆ ಬದಿಯಲ್ಲಿ ನಿಂತ್ತಿದ್ದರು.

ರಣ ಬಿಸಿಲಿಗೆ ನೆಲವೆಲ್ಲ ಕಾದು ಕೆಂಡವಾಗಿತ್ತು. ಆದರೂ ಸಾವಿರಾರು ಸಂಖ್ಯೆಯಲ್ಲಿ ಜನರು ಸಿದ್ದಿಬಾಷಾ ದರ್ಗಾದಿಂದ ಎನ್‌.ವಿ. ಮೈದಾನದವರೆಗೆ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದರು. ತಲೆಯ ಮೇಲೆ ಕರ್ಚೀಫ್, ಟವೆಲ್, ಕ್ಯಾಪ್ ಹಾಕಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯಲು ಯತ್ನಿಸಿದರು. ಆದರೆ, ಬಿಸಿಲಿನ ಪ್ರಖರತೆಯಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ತಮ್ಮ ನೆಚ್ಚಿನ ನಾಯಕನನ್ನು ಹತ್ತಿರದಿಂದ ನೋಡುವ ಹುಮ್ಮಸ್ಸು ಅವರನ್ನು ಅಲ್ಲಿಂದ ಕದಲಿಸಲಿಲ್ಲ.

ಮಧ್ಯಾಹ್ನ 1ಕ್ಕೆ ‘ರೋಡ್ ಶೋ’ ನಡೆಯುವುದಾಗಿ ನಂಬಿದ್ದ ಹಲವರು ಮುಂಚಿತವಾಗಿ ಬಂದು ಬಿಸಿಲು, ಧಗೆ ಲೆಕ್ಕಿಸದೆ ಉಸ್ಸಪ್ಪಾ ಎನ್ನುತ್ತಾ ನಿಂತಿದ್ದರು. ಮಾಧ್ಯಮಗಳ ಕ್ಯಾಮೆರಾ ಕಾಣುತ್ತಿದ್ದಂತೆ ‘ಜೈ ಶ್ರೀರಾಮ್’, ‘ಮೋದಿ ಮೋದಿ’ ಎಂದು ಜೈಕಾರ ಹಾಕಿದರು. ಬಾಯಿ ಒಣಗುತ್ತಿದ್ದಂತೆ ಅವರಿವರ ಬಳಿಯಿಂದ ನೀರು ಕುಡಿದು ಸಾವರಿಸಿಕೊಂಡರು.

ಎರಡು ಹೆಲಿಕಾಪ್ಟರ್‌ಗಳ ಹಾರಾಟ ಶುರುವಾಗುತ್ತಿದ್ದಂತೆ ನಿದ್ದೆಯಿಂದ ಎದ್ದವರಂತೆ ಬಿಸಿಲಿನ ಝಳದಲ್ಲಿ ಜಾಗೃತಗೊಂಡರು. ಇನ್ನೇನು ಮೋದಿ ಬರುತ್ತಾರೆ, ತೆರೆದ ವಾಹನದಲ್ಲಿ ನಿಂತು ತಮ್ಮತ್ತ ಕೈಬಿಸುತ್ತಾರೆ ಎಂದುಕೊಂಡು ಕೈಯಲ್ಲಿ ಬಾಡಿದ ಪುಷ್ಪದಳ ಹಿಡಿದು ನಿಂತರು. ಮಧ್ಯಾಹ್ನ 2.05ರ ವೇಳೆಗೆ ಮೋದಿ ಅವರು ಪರೇಡ್ ಮೈದಾನದಿಂದ ಭದ್ರತಾ ಪಡೆಗಳ ಬೆಂಗಾವಲು ವಾಹನಗಳೊಂದಿಗೆ ರಸ್ತೆಗೆ ಬಂದರು. ಕಾರಿನಲ್ಲೇ ಕುಳಿತು ರಸ್ತೆ ಬದಿಯಲ್ಲಿ ಬಿಸಿಲಿನಲ್ಲಿ ನಿಂತವರತ್ತ ಕೈ ಬೀಸುತ್ತಾ ‘ಕಾರ್ ಶೋ’ ನಡೆಸಿದರು. 

ಮೋದಿಯ ‘ಕಾರ್‌ ಶೋ’ಗೆ ನಿರಾಶೆಯಾದ ಜನರು ಹ್ಯಾಪು ಮೋರೆ ಹಾಕಿಕೊಂಡು ಬಂದ ದಾರಿಗೆ ಸುಂಕವಿಲ್ಲದಂತೆ ಸಮಾವೇಶದ ಮೈದಾನದತ್ತ ಹೆಜ್ಜೆಹಾಕಿದರು. ಏಕಕಾಲದಲ್ಲಿ ಸಾವಿರಾರು ಜನರು ಸೇರಿದ್ದರಿಂದ ಮೈದಾನ ಎರಡು ಪ್ರವೇಶ ದ್ವಾರಗಳಲ್ಲಿ ಜನದಟ್ಟಣೆಯಾಗಿ ನೂಕುನುಗ್ಗಲು ಕಂಡುಬಂತು. ಪೊಲೀಸರು ತಪಾಸಣೆ ನಡೆಸಿ ಒಳಬಿಡಲು ಬಸವಳಿದರು. ಒಳ ಹೋಗಲು ಆಗದವರು ಅಲ್ಲಲ್ಲಿ ಕಟ್ಟಡಗಳ ಮೇಲೆ ನಿಂತರು.

ಕಲಬುರಗಿಯಲ್ಲಿ ಶನಿವಾರ ಚುನಾವಣಾ ಪ್ರಚಾರ ಹಿನ್ನೆಲೆಯ ರೋಡ್‌ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಳಿತ ಕಾರಿನ ಮೇಲೆ ಜನರು ಪುಷ್ಪದಳ ಎಸೆದರು
ಕಲಬುರಗಿಯಲ್ಲಿ ಶನಿವಾರ ಚುನಾವಣಾ ಪ್ರಚಾರ ಹಿನ್ನೆಲೆಯ ರೋಡ್‌ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಳಿತ ಕಾರಿನ ಮೇಲೆ ಜನರು ಪುಷ್ಪದಳ ಎಸೆದರು
ಕಲಬುರಗಿಯಲ್ಲಿ ಶನಿವಾರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ರೋಡ್‌ ಶೋಗಾಗಿ ಕಾದು ಬಿಸಿಲಿನಲ್ಲಿ ಬಾಟಲ್ ನೀರಿನ ಮೊರೆಹೋದ ವ್ಯಕ್ತಿ
ಕಲಬುರಗಿಯಲ್ಲಿ ಶನಿವಾರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ರೋಡ್‌ ಶೋಗಾಗಿ ಕಾದು ಬಿಸಿಲಿನಲ್ಲಿ ಬಾಟಲ್ ನೀರಿನ ಮೊರೆಹೋದ ವ್ಯಕ್ತಿ
ಕಲಬುರಗಿಯಲ್ಲಿ ಶನಿವಾರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ನಡೆದ ಪ್ರಧಾನಿ ಮೋದಿ ಅವರ ರೋಡ್‌ ಶೋ ವೀಕ್ಷಣೆಗಾಗಿ ಬಿಸಿಲಿನಲ್ಲಿ ನಿಂತಿದ್ದ ಜನರು
ಕಲಬುರಗಿಯಲ್ಲಿ ಶನಿವಾರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ನಡೆದ ಪ್ರಧಾನಿ ಮೋದಿ ಅವರ ರೋಡ್‌ ಶೋ ವೀಕ್ಷಣೆಗಾಗಿ ಬಿಸಿಲಿನಲ್ಲಿ ನಿಂತಿದ್ದ ಜನರು
ಕಲಬುರಗಿಯಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರದ ಸಮಾವೇಶದ ಎನ್‌.ವಿ ಮೈದಾನದಲ್ಲಿ ಎಸೆಯಲಾದ ಮೋದಿ ಭಾವಚಿತ್ರದ ಫೋಟೊಗಳು
ಕಲಬುರಗಿಯಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರದ ಸಮಾವೇಶದ ಎನ್‌.ವಿ ಮೈದಾನದಲ್ಲಿ ಎಸೆಯಲಾದ ಮೋದಿ ಭಾವಚಿತ್ರದ ಫೋಟೊಗಳು

ವಾಹನ ದಟ್ಟಣೆ; ಮಾತಿನ ಚಕಮಕಿ

ನಗರದ ಹೃದಯ ಭಾಗದಲ್ಲಿ ಸಮಾವೇಶ ನಡೆಸಿದ್ದರಿಂದ ಕಲಬುರಗಿ ಮತ್ತು ಬೀದರ್‌ನಿಂದ ಲಕ್ಷಾಂತರ ಜನರು ಬಂದಿದ್ದರು. ಹೀಗಾಗಿ ಸಮಾವೇಶ ಆರಂಭಕ್ಕೂ ಮುನ್ನ ಹಾಗೂ ಮುಗಿದ ನಂತರ ವಾಹನ ದಟ್ಟಣೆ ಉಂಟಾಯಿತು. ಈ ವೇಳೆ ಪೊಲೀಸರು ಹಾಗೂ ಜನರ ನಡುವೆ ಅಲ್ಲಲ್ಲಿ ಮಾತಿನ ಚಕಮಕಿ ನಡೆಯಿತು. ವಾಹನಗಳ ಸಂಚಾರ ನಿಭಾಯಿಸಲು ಪೊಲೀಸರು ವಾಹನಗಳ ನಿಲುಗಡೆಗೆ ಚಾಲಕರು ಪರದಾಡಿದರು. ನಿಗದಿತ ಸ್ಥಳ ಗುರುತಿಸಿದ್ದರು ಆ ಕಡೆಗೆ ಹೋಗದೆ ಅಲ್ಲಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. 

ನೆರಳಲ್ಲಿದ್ದವರಿಗೆ ಬಿಸಲಿನ ಹಾದಿ ತೋರಿದ ಪೊಲೀಸ್

ಬಿಸಿಲಿಗೆ ಬಸವಳಿದ ಮಹಿಳೆಯರು ಡಾ.ಎಸ್‌.ಎಂ. ಪಂಡಿತ್ ರಂಗಮಂದಿರ ಮುಂಭಾಗದ ಮರಗಳ ನೆರಳನ್ನು ಆಶ್ರಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಿಂತಿದ್ದರು. ಎನ್‌.ವಿ. ಮೈದಾನ ರಸ್ತೆಯ ಉದ್ಯಾನದತ್ತ ಹೋಗುವಂತೆ ಭದ್ರತೆಗೆ ನಿಯೋಜನೆಗೊಂಡಿದ್ದ ಇನ್‌ಸ್ಪೆಕ್ಟರ್ ಕುಬೇರ ಎಸ್. ಅವರು ಮಹಿಳೆಯರನ್ನು ಕಳುಹಿಸಿದ್ದು ಕಂಡುಬಂತು. ‘ಅಲ್ಲಿ ಬಿಸಿಲಿದೆ. ಇಲ್ಲಿಯೇ ಕಾಂಪೌಂಡ್ ಪಕ್ಕ ನಿಲ್ಲುತ್ತೇವೆ’ ಎಂದು ಮಹಿಳೆಯರು ಕೋರಿದರೂ ಕಿವಿಗೊಡಲಿಲ್ಲ. ‘ಪಕ್ಷದ ಮುಖಂಡರ ಆದೇಶದಂತೆ ಮಹಿಳೆಯರನ್ನು ರೋಡ್‌ ಶೋಗೆ ಕರೆತಂದಿದ್ದೇವೆ. ಪೊಲೀಸರು ಇಲ್ಲಿ ನಿಲ್ಲಬೇಡಿ ಅಲ್ಲಿ ನಿಲ್ಲ ಬೇಡಿ ಎಂದು ಕಳುಹಿಸುತ್ತಿದ್ದಾರೆ. ಇದನ್ನು ಕೇಳಲು ಒಬ್ಬ ಮುಖಂಡರೂ ಇಲ್ಲ’ ಎಂದು ಮಹಿಳಾ ಮೋರ್ಚಾ ಮಂಡಲದ ಉಪಾಧ್ಯಕ್ಷೆ ಸಿದ್ದಮ್ಮ ಅಲವತ್ತುಕೊಂಡರು.

- ಪೊಲೀಸರಿಗೆ ಸಿಗದ ಊಟ!

ಸಮಾವೇಶದ ಭದ್ರತೆಗಾಗಿ ವೇದಿಕೆಯ ಸುತ್ತಲಿನ ಪ್ರದೇಶ ಹಾಗೂ ರೋಡ್ ಶೋ ಮಾರ್ಗದ ಉದ್ದಕ್ಕೂ ಪೊಲೀಸ್ ಕಣ್ಗಾವಲು ಇರಿಸಲಾಗಿತ್ತು. ಬಿಸಿಲಿನಲ್ಲಿ ಜನರನ್ನು ನಿಯಂತ್ರಿಸಿದರೂ ಕೆಲವು ಪೊಲೀಸರಿಗೆ ಮಧ್ಯಾಹ್ನ ಆಹಾರ ಸಿಗಲಿಲ್ಲ ಎಂದು ಅಲ್ಲಲ್ಲಿ ನಿಂತಿದ್ದ ಸಿಬ್ಬಂದಿ ಅಲವತ್ತುಕೊಂಡರು. ‘ಪ್ಯಾಕ್‌ ಮಾಡಿದ ಆಹಾರದ ಪ್ಯಾಕೇಟ್‌ಗಳನ್ನು ಬೈಕ್‌ ಮೇಲೆ ಹೊಯ್ದು ವಿತರಣೆ ಮಾಡಿದ್ದಾರೆ. ಕೆಲವರಿಗೆ ಆಹಾರ ಸಿಕ್ಕರೆ ಬಹುತೇಕರು ಖಾಲಿ ಹೊಟ್ಟೆಯಲ್ಲಿ ಕೆಲಸ ನಿರ್ವಹಿಸಿದ್ದೆವು. ಇಂತಹ ದೊಡ್ಡ ಸಮಾವೇಶದಲ್ಲಿ ಇವೆಲ್ಲ ನಮಗೆ ಸರ್ವೆ ಸಾಮಾನ್ಯ’ ಎಂದು ಮತ್ತೊಬ್ಬ ಸಿಬ್ಬಂದಿ ಹೇಳಿದರು.

ಕಪ್ಪು ಬಟ್ಟೆ ಧರಿಸಿ ಬಂದವರಿಗೆ ತಡೆ

ಕಪ್ಪು ಬಟ್ಟೆ ಧರಿಸಿ ಬಂದವರಿಗೆ ಸಮಾವೇಶದ ಮೈದಾನ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಅನುಮತಿ ನಿರಾಕರಿಸಿದರು. ಕಪ್ಪು ಅಂಗಿ ಧರಿಸಿ ಬಂದವರನ್ನು ಪ್ರವೇಶ ದ್ವಾರದಲ್ಲೇ ತಡೆದರು. ಕಪ್ಪು ಬಣ್ಣದ ಟೋಪಿ ಕರ್ಚೀಫ್‌ ಇತರೆ ಬಟ್ಟೆಗಳನ್ನು ಹೊರಗಡೆ ಇರಿಸಿ ಒಳಬಿಟ್ಟರು. ಪೆನ್ನು ಗುಟ್ಕಾ ತಂಬಾಕು ವಾಟರ್ ಬಾಟಲ್‌ಗಳಿಗೂ ನಿಷೇಧ ಹಾಕಲಾಗಿತ್ತು. ಪ್ರವೇಶ ದ್ವಾರದಲ್ಲಿ ಮೂರ್ನಾಲ್ಕು ಬುಟ್ಟಿ ಪೆನ್ನು ಗುಟ್ಕಾ ತಂಬಾಕು ಬಿದ್ದಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT