ಮಂಗಳವಾರ, ಮಾರ್ಚ್ 28, 2023
25 °C

ಕಲಬುರಗಿ: ಮೋದಿ ಕಾರ್ಯಕ್ರಮಕ್ಕೆ ಬಸ್‌ ಬಳಕೆ; ₹5.5 ಕೋಟಿ ಬಿಲ್

ಮಲ್ಲಿಕಾರ್ಜುನ ನಾಲವಾರ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಕಂದಾಯ ಇಲಾಖೆ ಯಿಂದ ನಡೆದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಫಲಾನುಭವಿಗಳು, ಜನರನ್ನು ಕರೆತಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) 2,200 ಬಸ್‌ಗಳಿಗೆ ₹5.5 ಕೋಟಿ ಬಿಲ್‌ ಆಗಿದೆ.

ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಿಂದ ಫಲಾನುಭವಿಗಳು, ಜನರು ಅಲ್ಲದೇ ಬಳ್ಳಾರಿ, ಕೊಪ್ಪಳ ಮತ್ತು ಇತರೆ ಜಿಲ್ಲೆಗಳಿಂದಲೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಜನರನ್ನು ಕರೆತರಲಾಯಿತು. ಪ್ರತಿ ಬಸ್‌ನಲ್ಲಿ 40 ರಿಂದ 50 ಜನರು ಪ್ರಯಾಣಿಸಿದ್ದರು.

‘ರಾಜಕೀಯ ಪಕ್ಷಗಳ ಸಮಾವೇಶ, ಸರ್ಕಾರಿ ಕಾರ್ಯಕ್ರಮ, ಚುನಾವಣೆ ಕರ್ತವ್ಯ, ಶೈಕ್ಷಣಿಕ ಪ್ರವಾಸ, ಭದ್ರತೆಗೆ ಪೊಲೀಸರ ಕರೆದೊಯ್ಯುವಂತಹ ಸೇವೆಗಳಿಗೆ ಕೆಕೆಆರ್‌ಟಿಸಿಯು ಸಾವಿರಾರು ಬಸ್‌ಗಳನ್ನು ಒಪ್ಪಂದದ ಮೇಲೆ ನೀಡುತ್ತದೆ. ನಿತ್ಯ ಗರಿಷ್ಠ 300 ಕಿ.ಮೀ. ಪ್ರಯಾಣದ ಲೆಕ್ಕದಲ್ಲಿ ಪ್ರತಿ ಬಸ್‌ಗೆ ₹13,300 ದರ ನಿಗದಿ ಮಾಡುತ್ತದೆ. ಪಕ್ಷಗಳ ಸಮಾವೇಶಕ್ಕೆ ಕೆಲ ರಾಜಕೀಯ ಮುಖಂಡರು ಕಡಿಮೆ ಮೊತ್ತಕ್ಕೆ ಬಸ್‌ಗಳನ್ನು ನೀಡುವಂತೆ ಒತ್ತಡ ಹಾಕುತ್ತಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ಒಂದೇ ದರದಲ್ಲಿ ಬಸ್‌ಗಳನ್ನು ಒದಗಿಸುತ್ತೇವೆ. ಇಲ್ಲದಿದ್ದರೆ ಸಂಸ್ಥೆಗೆ ಆರ್ಥಿಕ ಹೊರೆ’ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿ.

‘ಏಕಕಾಲದಲ್ಲಿ ನೂರಾರು ಬಸ್‌ ಗಳನ್ನು ಕಾಯ್ದಿರಿಸುವುದರಿಂದ ಸಂಸ್ಥೆಗೆ ಹೆಚ್ಚಿನ ಲಾಭವಾಗಲಿದೆ. ಕಾಯ್ದಿರಿಸಿದ ಬಸ್‌ ಒಂದು ದಿನಕ್ಕೆ 300 ಕಿ.ಮೀ. ಓಡದಿದ್ದರೂ ನಿಗದಿತ ಮೊತ್ತ ಪಾವತಿಸಬೇಕು. ಕಡಿಮೆ ಕಿ.ಮೀ. ಓಡಿದಾಗ, ಇಂಧನ ಖರ್ಚು ತಗ್ಗಿ, ಹಣವೂ ಉಳಿಕೆಯಾಗಲಿದೆ’ ಎಂದರು.

ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳು ಗಳಿಂದ ದೊಡ್ಡಮಟ್ಟದ ಕಾರ್ಯಕ್ರಮ ನಡೆಯುತ್ತಿದ್ದು, ಕೆಕೆಆರ್‌ಟಿಸಿಗೆ ವರದಾನವಾಗಿದೆ. ನಗರದ ಹೊರವಲ ಯದಲ್ಲಿ ನಡೆದ ಬಿಜೆಪಿಯ (ಒಬಿಸಿ) ವಿರಾಟ್ ಸಮಾವೇಶ ಹಾಗೂ ಸೇಡಂನ ಲ್ಲಿನ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ತಲಾ 300 ಬಸ್, ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವಕ್ಕೆ 400 ಬಸ್‌ಗಳನ್ನು ಕೆಕೆಆರ್‌ಟಿಸಿ ಒದಗಿಸಿತ್ತು. ಇದರಿಂದ ಸಾರಿಗೆ ಸಂಸ್ಥೆಗೆ ಕೊಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ.

ಕೆಕೆಆರ್‌ಡಿಬಿಯಿಂದ ₹50 ಲಕ್ಷ ಬಾಕಿ!

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು(ಕೆಕೆಆರ್‌ಡಿಬಿ) ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೆ ಜನರನ್ನು ಕರೆತರಲು ಕೆಕೆಆರ್‌ಟಿಸಿಯ 400 ಬಸ್‌ಗಳನ್ನು ಬಳಿಸಿತ್ತು. ಕಾರ್ಯಕ್ರಮ ಮುಗಿದು 5 ತಿಂಗಳಾದರೂ ₹50 ಲಕ್ಷ ಬಾಕಿ ಉಳಿಸಿಕೊಂಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಸೆಪ್ಟೆಂಬರ್‌ನಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಆಯೋಜಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು. 400 ಬಸ್ ಸೇವೆ ಪಡೆದ ಮಂಡಳಿಯು ಇನ್ನೂ ಹಣ ಪಾವತಿಸಿಲ್ಲ’ ಎಂದರು.

ಒಬಿಸಿ ವಿರಾಟ್ ಸಮಾವೇಶ ಹಾಗೂ ಮಹಾಗಾಂವನಲ್ಲಿ ನಡೆದ ಜನಸಂಕಲ್ಪ ಯಾತ್ರೆಗೆ ಬಳಕೆಯಾದ ನೂರಾರು ಬಸ್‌ಗಳ ಹಣವನ್ನು ಬಿಜೆಪಿಯ ಜಿಲ್ಲಾ, ತಾಲ್ಲೂಕು ಮಟ್ಟದ ಮುಖಂಡರು ಪಾವತಿಸಿದ್ದಾರೆ. ಅಖಿಲ ಭಾರತ ಸಹಕಾರ ಸಪ್ತಾಹದ 300 ಬಸ್‌ಗಳ ಸೇವಾ ಮೊತ್ತವನ್ನು ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೀಡಿದೆ.

‘ಕಂದಾಯ ಇಲಾಖೆಯಿಂದ ಪಾವತಿ’

‘ಮೋದಿ ಕಾರ್ಯಕ್ರಮದ 2,200 ಬಸ್‌ಗಳ ₹5.5 ಕೋಟಿ ಬಿಲ್‌ ಹಣವನ್ನು ಕಂದಾಯ ಇಲಾಖೆಯ ಕಾರ್ಯದರ್ಶಿ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂದಾಯ ಇಲಾಖೆಯಿಂದ ಬಿಲ್ ಹಣ ಬರುವುದು ಖಚಿತ. ಕೆಕೆಆರ್‌ಡಿಬಿ ₹50 ಲಕ್ಷ ಉಳಿಸಿಕೊಂಡಿದ್ದು, ಮಂಡಳಿಯವರನ್ನು ಸಂಪರ್ಕಿಸಿ, ಬಾಕಿ ಹಣ ಕೊಡುವಂತೆ ಕೇಳುವೆ. ಏಕಕಾಲದಲ್ಲಿ ದೊಡ್ಡ ಮೊತ್ತದ ಹಣ ಬರುವುದರಿಂದ ನೌಕರರ ವಿಳಂಬ ವೇತನ ಪಾವತಿ ತಪ್ಪುತ್ತದೆ’ ಎಂದರು.

*ಬಸ್‌ಗಳ ಖರೀದಿಗೆ ಕೆಕೆಆರ್‌ ಡಿಬಿಯು ಕೆಕೆಆರ್‌ಟಿಸಿಗೆ ₹40 ಕೋಟಿ ಕೊಟ್ಟಿದೆ. ಬಾಕಿ ಉಳಿದ ಬಸ್‌ಗಳ ಸೇವಾ ಮೊತ್ತವನ್ನು ಕಾರ್ಯದರ್ಶಿಗಳಿಗೆ ಭೇಟಿ ಮಾಡಿ, ಮನವರಿಕೆ ಮಾಡಿದರೆ ಕೊಡುತ್ತಾರೆ

–ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಡಿಬಿ ಅಧ್ಯಕ್ಷ

ಕಾರ್ಯಕ್ರಮಕ್ಕೆ ಬಳಕೆಯಾದ ಕೆಕೆಆರ್‌ಟಿಸಿ ಬಸ್‌ಗಳು

ಕಾರ್ಯಕ್ರಮ; ಬಸ್‌ಗಳು; ಬಿಲ್(₹ಲಕ್ಷ)

ಮೋದಿ ಕಾರ್ಯಕ್ರಮ; 2,200; 5.5(₹ಕೋಟಿ)

ಬಿಜೆಪಿ ಒಬಿಸಿ ಸಮಾವೇಶ; 300; 48

ಸಹಕಾರ ಸಪ್ತಾಹ; 300; 48

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ; 400; 50

ಮಾಹಿತಿ; ಕೆಕೆಆರ್‌ಟಿಸಿ ಅಧಿಕಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು