ಶನಿವಾರ, ಡಿಸೆಂಬರ್ 3, 2022
26 °C

ವಿವಿಧ ಪ್ರಕರಣ; 6 ಮಂದಿ ವಿರುದ್ಧ ಗಡಿಪಾರು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮಾದಕ ವಸ್ತು ಮಾರಾಟ, ಜೂಜಾಟ, ಗೂಂಡಾ ಕೃತ್ಯ, ಅಕ್ರಮ ಕಳ್ಳಭಟ್ಟಿ, ಅನೈತಿಕ ವ್ಯವಹಾರ, ದರೋಡೆ, ಕಳ್ಳತನ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಐವರನ್ನು ಗಡಿಪಾರು ಹಾಗೂ ಒಬ್ಬನ ವಿರುದ್ಧ ಒಂದು ವರ್ಷ ಪ್ರತಿಬಂಧಕ ಬಂಧನದ ಆದೇಶ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ತಿಳಿಸಿದ್ದಾರೆ.

ನಗರದ ಜಿಡಿಎ ಕಾಲೊನಿಯ ಯಲ್ಲಮ್ಮ ಗುಡಿ ನಿವಾಸಿ ಕರ್ಣ ರಮೇಶ ಜಮಾದಾರ ವಿರುದ್ಧ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ದರೋಡೆ, ಕಳ್ಳತನ, ಸುಲಿಗೆ ಸೇರಿ ಹಲವು ಕೃತ್ಯ ಎಸಗಿದ್ದ ಆಪಾದನೆಗಳಿವೆ. ಜಾಮೀನು ಮೇಲೆ ಬಿಡುಗಡೆಯಾಗಿದ್ದರೂ ಷರತ್ತುಗಳನ್ನು ಉಲ್ಲಂಘಿಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ. ಹೀಗಾಗಿ ಕರ್ಣನನ್ನು ಸಕ್ಷಮ ಪ್ರಾಧಿಕಾರ ಹಾಗೂ ಗೂಂಡಾ ಕಾಯ್ದೆಯಡಿ ಸೆ.19ರಿಂದ ಒಂದು ವರ್ಷದವರೆಗೆ ಶಿವಮೊಗ್ಗ ಜೈಲಿಗೆ ಗಡಿಪಾರು ಮಾಡಿ, ಬಂಧನದಲ್ಲಿ ಇರಿಸುವುದು ಅವಶ್ಯ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ ಎಂದು ಹೇಳಿದ್ದಾರೆ.

ಮೈಸೂರಿಗೆ ಮಿರ್ಜಾ ಮಹ್ಮದ್ ಗಡಿಪಾರು: ಕೊಲೆ ಯತ್ನ, ದೌರ್ಜನ್ಯ, ಆಯುಧ ಕಾಯ್ದೆ ಉಲ್ಲಂಘನೆ ಪ್ರಕರಣದಡಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ನಗರದ ನಿವಾಸಿ ಮಿರ್ಜಾ ಮಹ್ಮದ್ ಅಬ್ದುಲ್ ಬೇಗ್ ವಿರುದ್ಧ ದೂರು ದಾಖಲಾಗಿದ್ದವು. ಹೀಗಾಗಿ, ಮಿರ್ಜಾನನ್ನು ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಒಂದು ವರ್ಷ ಗಡಿಪಾರು ಮಾಡಲಾಗಿದೆ.

ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಬಾಪು ನಗರದ ರಮೇಶ ವಿಜಯಕುಮಾರ ಕಾಳೆ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನನ್ನು ಒಂದು ವರ್ಷದ ಅವಧಿಗೆ ಕೊಡಗು ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿದ ಆದೇಶ ಹೊರಡಿಸಲಾಗಿದೆ.

ಉಪನಗರ ಪೊಲೀಸ್ ಠಾಣೆಯಲ್ಲಿ ಆರ್‌ಎಸ್‌ ಕಾಲೊನಿ ನಿವಾಸಿ ರಾಜಶೇಖರ ಉಮಾಶೆಟ್ಟಿ ವಿರುದ್ಧ ಮಟಕಾ ಅಡಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ರಾಜಶೇಖರನನ್ನು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ದರೋಡೆ, ಸುಲಿಗೆ, ಕಳ್ಳತನ ಮತ್ತು ದೌರ್ಜನ್ಯದ ಪ್ರಕರಣಗಳ ಸಂಬಂಧ ಶೇಖ ಶೇರ ಅಲಿ ಹಜರತಸಾಬ್ ಅವರನ್ನು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಗಡಿಪಾರು ಆದೇಶಕ್ಕೆ ತಡೆಯಾಜ್ಞೆ

ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಅಕ್ರಮ ಪಡಿತರ ಸಾಗಣೆ ಹಾಗೂ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಯಾದಗಿರಿ ಜಿಲ್ಲೆಯ ಮಣಿಕಂಠ ರಾಠೋಡ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ಈತನನ್ನು ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಗೆ ಒಂದು ವರ್ಷ ಗಡಿಪಾರು ಆದೇಶ ಹೊರಡಿಸಲಾಗಿದೆ. ಆದರೆ, ಮಣಿಕಂಠ ರಾಠೋಡ ಅವರು ಗಡಿಪಾರು ಆದೇಶದ ವಿರುದ್ಧವಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

₹85,000 ದಂಡ ವಸೂಲಿ

ಬಾಂಡ್ ನಿಯಮ ಉಲ್ಲಂಘನೆ ಮಾಡಿದ ವಿವಿಧ ಠಾಣೆಗಳ ಆರೋಪಿಗಳಾದ ಮುತ್ತುರಾಜ ಸಂತೋಷಗೆ ₹25,000, ಮುಸ್ತಫ್‌ ಛೋಟಾ ಮಿಯಾಗೆ ₹10,000, ಮುರ್ತುಜಾ ಮಹ್ಮದ್ ಅಲಿಗೆ ₹25,000 ಹಾಗೂ ಅವಧೂತ ಪವನಗೆ ₹ 25,000 ದಂಡ ವಿಧಿಸಲಾಗಿದೆ. ನಾಲ್ವರು ಆರೋಪಿಗಳಿಂದ ಒಟ್ಟಾರೆ ₹85 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು