ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3.26 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

ಮೊದಲ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ
Last Updated 6 ಮಾರ್ಚ್ 2019, 6:53 IST
ಅಕ್ಷರ ಗಾತ್ರ

ಕಲಬುರ್ಗಿ: 2019ನೇ ಸಾಲಿನ ಪ್ರಥಮ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಮಾರ್ಚ್‌ 10ರಿಂದ 13ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ. ಐದು ವರ್ಷದೊಳಗಿನ 3,26,340 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ. ಹೇಳಿದರು.

ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಮಾರ್ಚ್‌ 10ರಂದು ಮೊದಲ ದಿನ ಬೂತ್ ಮಟ್ಟದಲ್ಲಿ ಲಸಿಕೆ ಹಾಕಲಾಗುವುದು. ಇದಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮಾರ್ಚ್ 11 ರಿಂದ 13ರ ವರೆಗೆ ಮನೆ-ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕಲಿವೆ.

ಒಟ್ಟು 1,647 ತಂಡಗಳನ್ನು ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದ್ದು, 326 ಮೇಲ್ವಿಚಾರಕರನ್ನು ಸಹ ನೇಮಿಸಲಾಗಿದೆ. ಲಸಿಕಾ ತಂಡಗಳು ಸ್ಲಂ ನಿವಾಸಿಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಮಕ್ಕಳಿ ಹನಿ ಹಾಕಬೇಕು. ಯಾವುದೇ ಕಾರಣಕ್ಕೂ ಲಸಿಕಾ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳು ವಂಚಿತರಾಗದಂತೆ ಆರೋಗ್ಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಡಿ-ಫ್ರೀಜರ್‌ನಲ್ಲಿ ಲಸಿಕೆ ಶೇಖರಣೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳವರೆಗೆ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಆಗದಂತೆ ಜೆಸ್ಕಾಂ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಾಧವರಾವ ಕೆ.ಪಾಟೀಲ, ಪೂರ್ವಸಿದ್ಧತೆ ಬಗ್ಗೆ ವಿವರಿಸಿದರು. ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಅಂಬರಾಯ ಎಸ್. ರುದ್ರವಾಡಿ, ಆಯುಷ್ ಇಲಾಖೆಯ ಉಪನಿರ್ದೇಶಕಿ ನಾಗರತ್ನಾ ಚಿಮ್ಮಲಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

**

ಅಂಕಿ ಅಂಶಗಳು

5,52,373 – ಲಸಿಕೆ ಕಾರ್ಯಕ್ರಮಕ್ಕೆ ಸರ್ವೆ ಮಾಡಿದ ಮನೆಗಳು

1,490 – ಜಿಲ್ಲೆಯಲ್ಲಿ ರಚಿಸಿದ ಲಸಿಕಾ ತಂಡಗಳು

1,647 – ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿಸಿದ ಒಟ್ಟು ತಂಡಗಳು

1,490 – ಮನೆಮನೆಗೆ ಭೇಟಿ ನೀಡಲಿರುವ ತಂಡಗಳ ಸಂಖ್ಯೆ

157 – ಸಂಚಾರಿ ಲಸಿಕಾ ತಂಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT