ಮಂಗಳವಾರ, ಮೇ 17, 2022
23 °C
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸರಮಾಲೆ ತೆರೆದಿಟ್ಟ ವಿದ್ಯಾರ್ಥಿಗಳು, ಹಾಸ್ಟೆಲ್‌ನಲ್ಲಿ ಮೂಲಸೌಕರ್ಯಗಳಿಗೂ ಆಗ್ರಹ

ಪ್ರಜಾವಾಣಿ ಫೋನ್‌ ಇನ್: ಸಮಸ್ಯೆಗಳ ಸರಮಾಲೆ ತೆರೆದಿಟ್ಟ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣ ಪಡೆಯುವ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಶಿಷ್ಯವೇತನದ ಬಗ್ಗೆ ಗೊಂದಲ ಇದೆ. ಈ ಹಿಂದೆ ಮೂರೂ ಇಲಾಖೆಗಳಿಂದ ಎಲ್ಲ ವಿದ್ಯಾರ್ಥಿಗಳಿಗೂ ಶಿಷ್ಯವೇತನ ಬರುತ್ತಿತ್ತು. ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ಪ್ರವೇಶ ಪಡೆದವರು, ಖಾಸಗಿ ಕಾಲೇಜುಗಳಿಗೆ ಸರ್ಕಾರಿ ಕೋಟಾ ಹಾಗೂ ಮ್ಯಾನೇಜ್‌ಮೆಂಟ್‌ ಕೋಟಾ ಅಡಿ ಪ್ರವೇಶ ಪಡೆದವರಿಗೂ ಶಿಷ್ಯವೇತನ ನೀಡಲಾಗುತ್ತಿತ್ತು. ಆದರೆ, ಈ ನಿಯಮವನ್ನು ಬದಲಾಯಿಸಲಾಗಿದೆ. ಈಗ ಸರ್ಕಾರಿ ಕೋಟಾದಡಿ ಪ್ರವೇಶ ಪಡೆದವರಿಗೆ ಮಾತ್ರ ನೀಡಲಾಗುತ್ತದೆ. ಖಾಸಗಿ ಕಾಲೇಜುಗಳಿಗೆ ಮ್ಯಾನೇಜ್‌ಮೆಂಟ್‌ ಕೋಟಾ ಅಡಿ ಪ್ರವೇಶ ಪಡೆದವರಿಗೆ ಯಾವುದೇ ತರದ ಶಿಷ್ಯವೇತನ ಇಲಾಖೆಗಳಿಂದ ಬರುವುದಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಬಕಷ್‌ ಮಾಹಿತಿ ನೀಡಿದರು.

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ವಿದ್ಯಾರ್ಥಿ ವೇತನದ ಬಗ್ಗೆ ಈಗಲೂ ಬಹಳಷ್ಟು ಮಂದಿ ನಿಖರ ಮಾಹಿತಿ ಪಡೆದಿಲ್ಲ. ಹೀಗಾಗಿ, ತಮಗೆ ಇಲಾಖೆಯಿಂದಲೇ ಅನ್ಯಾಯವಾಗುತ್ತದೆ ಎಂದು ತಪ್ಪು ತಿಳಿದಿದ್ದಾರೆ. ಆದರೆ, ‘ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (ಎಸ್‌ಎಸ್‌ಟಿ–1920)’ದ ಪ್ರಕಾರ ಇದರಲ್ಲಿ ಸಾಕಷ್ಟು ಮಾರ್ಪಾಡುಗಳಾಗಿವೆ’ ಎಂದರು.

ಜಿಲ್ಲೆಯಲ್ಲಿರುವ ಹಾಸ್ಟೆಲ್‌ಗಳಲ್ಲಿನ ಮೂಲಸೌಕರ್ಯ ಕೊರತೆ, ಕೊಠಡಿಗಳ ಕೊರತೆ, ಸ್ವಚ್ಛತೆ, ಶೌಚಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯೂ ಸೇರಿದಂತೆ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅಧಿಕಾರಿಗಳ ಮುಂದಿಟ್ಟರು. ಅವುಗಳಲ್ಲಿ ಆಯ್ದ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

l ಕಳೆದ ಮೂರು ವರ್ಷಗಳಿಂದ ಬಿಸಿಎಂ ಹಾಸ್ಟೆಲ್‌ಗೆ ಅರ್ಜಿ ಹಾಕಿದರೂ ಪ್ರವೇಶ ಸಿಗುತ್ತಿಲ್ಲ. ಕಾರಣವೇನು?

–2ಎ, 2ಬಿ, 3ಎ, 3ಬಿ, ಕೆಟಗರಿ–1 ಸೇರಿದಂತೆ ಯಾವುದೇ ಮೀಸಲಾತಿ ಅಡಿ ಪ್ರವೇಶ ಪಡೆಯಬೇಕಾದರೂ ಜಾತಿ– ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಆದಾಯ ಮಿತಿ ಮೀರಿದ್ದರೆ, ಫಲಿತಾಂಶ ಕಳಪೆ ಇದ್ದಾಗಲೂ ಕೋಟಾದಡಿ ಪ್ರವೇಶ ಸಿಗುವುದಿಲ್ಲ. ಈ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಕಚೇರಿಗೆ ಖುದ್ದು ಭೇಟಿ ಆಗಿ ಮಾಹಿತಿ ಪಡೆಯಬಹುದು.

l ನಾನು ಅಲ್ಲಾಪುರ ತಾಂಡಾದಲ್ಲಿ ಓದುತ್ತಿದ್ದು, ಪ‍್ರಸಕ್ತ ವರ್ಷದ ಸ್ಕಾಲರ್‌ಶಿಪ್‌ ಇನ್ನೂ ಬಂದಿಲ್ಲ?

–ಆಯಾ ಶಾಲೆಗಳ ಮುಖ್ಯ ಶಿಕ್ಷಕರ ಬಳಿಯೇ ಸ್ಕಾಲರ್‌ ಶಿಪ್‌ಗಳ ಮಾಹಿತಿ ಇರುತ್ತದೆ. ಈಗಾಗಲೇ ಎಲ್ಲ ಶಾಲೆಗಳಿಗೂ ಇದರ ಅನುದಾನ ಮಂಜೂರಾಗಿದೆ. ಹಲವು ಮುಖ್ಯ ಶಿಕ್ಷಕರು ಇಲಾಖೆಗೆ ಬಂದು ಮಂಜೂರಾತಿಗಳನ್ನು ಪಡೆದು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇನ್ನೂ ತಲುಪದೇ ಇದ್ದಲ್ಲಿ ಆಯಾ ಶಾಲೆಗಳು ಮುಖ್ಯಶಿಕ್ಷಕರನ್ನು ಕೇಳಿ ಮಾಹಿತಿ ಪಡೆಯಿರಿ.

l ನನ್ನ ಮಗಳು ಯಡ್ರಾಮಿಯಲ್ಲಿ ಬಿ.ಇಡಿ. ಓದುತ್ತಿದ್ದಾಳೆ. ಹಿಂದೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಹಾಸ್ಟೆಲ್‌ ಸಿಗಬಹುದೇ?

–ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ವರ್ಗಕ್ಕೆ ಹಾಸ್ಟೆಲ್‌ ನೀಡಲು ಅವಕಾಶ ಇದೆಯೇ ಎಂದು ಪರಿಶೀಲಿಸಲಾಗುವುದು. ಆದರೆ, ಸಾಮಾನ್ಯ ವರ್ಗದಲ್ಲಿ ಬಂದರೆ ಸದ್ಯಕ್ಕೆ ಸರ್ಕಾರಿ ಹಾಸ್ಟೆಲ್‌ನಲ್ಲಿ ಪ್ರವೇಶ ನೀಡಲು ಅವಕಾಶವಿಲ್ಲ.

l ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಶಿಷ್ಯವೇತನ ಹಾಗೂ ಶುಲ್ಕ ಮರುಪಾವತಿ ಆಗಿಲ್ಲ, ಕಾರಣವೇನು?

–ಕಳೆದ ಒಂದು ವರ್ಷ ಲಾಕ್‌ಡೌನ್‌ನಲ್ಲಿ ಮುಗಿದಿದೆ. ಸರ್ಕಾರದಿಂದ ಇಲಾಖೆಗೆ ಬರುವ ಬಹಳಷ್ಟು ಅನುದಾನಗಳು ಕಡಿತಗೊಂಡಿವೆ. ಹಾಗಾಗಿ, ಶಿಷ್ಯವೇತನಗಳು ವಿಳಂಬವಾಗಿವೆ. ಶುಲ್ಕ ಮರುಪಾವತಿ ವಿಚಾರವಾಗಿ ಆಯಾ ಶಾಲೆ–ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡುತ್ತೇನೆ.

l ಸೇಡಂ ತಾಲ್ಲೂಕು ನಿಡಗುಂದಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡವಿದ್ದರೂ ಮೂಲಸೌಕರ್ಯಗಳಿಲ್ಲ, ಪ್ರಾಂಶುಪಾಲರು ಸಹ ತಿಂಗಳಿಗೆ ಒಮ್ಮೆ ಮಾತ್ರ ಬರುತ್ತಾರೆ. ವಿದ್ಯಾರ್ಥಿಗಳ ಸಂಕಷ್ಟ ಕೇಳುವವರೇ ಇಲ್ಲ.

–ನಾಳೆಯೇ ಈ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಕೋವಿಡ್ ಸಾಂಕ್ರಾಮಿಕ ಇರುವ ಕಾರಣ ವಿದ್ಯಾರ್ಥಿಗಳ ಸುರಕ್ಷತೆಗೆ ಆಯಾ ವಸತಿ ಶಾಲೆಗಳ ಪ್ರಾಂಶುಪಾಲರೇ ಗಮನ ಹರಿಸಬೇಕಾಗುತ್ತದೆ. ಬಿಸಿನೀರು, ಶೌಚಾಲಯ, ಊಟ ಸೇರಿದಂತೆ ಎಲ್ಲ ಸೌಕರ್ಯಗಳನ್ನೂ ಚಾಚೂತಪ್ಪದೇ ಒದಗಿಸಬೇಕು ಎಂಬುದು ನಿಯಮ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. 

l ನಿಡಗುಂದಾ ಸ್ವಾಮಿ ವಿವೇಕಾನಂದ ಶಾಲೆಯ ಹಾಸ್ಟೆಲ್‌ ಕಟ್ಟಲು ಅನುದಾನ ನೀಡಿದ್ದರೂ ಕಟ್ಟಿಲ್ಲ.

– ಈ ಹಾಸ್ಟೆಲ್‌ಗಾಗಿ ₹ 40 ಲಕ್ಷ ಅನುದಾನ ಮಂಜೂರಾಗಿದ್ದು, ಈಗಾಗಲೇ ₹ 12 ಲಕ್ಷ ಬಿಡುಗಡೆ ಆಗಿದೆ ಎಂದು ಊರಿನವರು ಮಾಹಿತಿ ನೀಡಿದ್ದಾರೆ. ಇದನ್ನು ಖುದ್ದಾಗಿ ಪರಿಶೀಲಿಸಿ, ಆಗಬೇಕಾದ ಕೆಲಸ ಏನು ಎಂದು ಪರಿಶೀಲಿಸಲು ಸೇಡಂ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡುತ್ತೇನೆ.

l ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮಾಸಿಕ ಸಹಾಯ ಧನವನ್ನು ಎರಡು ವರ್ಷದಿಂದ ನಿಲ್ಲಿಸಲಾಗಿದೆ. ನಮ್ಮ ವಸತಿ, ವಿದ್ಯುತ್‌ ಬಿಲ್‌, ಊಟ ಸೇರಿದಂತೆ ಎಲ್ಲಕ್ಕೂ ಇದನ್ನೇ ಅವಲಂಬಿಸಿದ್ದೇವೆ. ಹಣ ಯಾವಾಗ ಬಿಡುಗಡೆ ಆಗುತ್ತದೆ?

–ಲಾಕ್‌ಡೌನ್‌ ಇದ್ದ ಕಾರಣ ಸರ್ಕಾರದಿಂದ ಅಗತ್ಯ ಅನುದಾನ ಬಂದಿಲ್ಲ. ಇನ್ನು ಕೆಲವು ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ನೆರವು ತಲುಪುವ ನಿರೀಕ್ಷೆ ಇದೆ.

l ಶರಣಬಸವ ವಿ.ವಿ.ಯಲ್ಲಿ ಪ‍ತ್ರಿಕೋದ್ಯಮ ಎಂ.ಎ ಪದವಿ ಮುಗಿದರೂ ಇಲಾಖೆಯಿಂದ ಬರಬೇಕಾದ ಸ್ಕಾಲರ್‌ಶಿಪ್‌ ಇನ್ನೂ ಬಂದಿಲ್ಲ.

–ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆದಿದ್ದರೆ ಮಾತ್ರ ಸ್ಕಾಲರ್‌ಶಿಪ್‌ ಬರುತ್ತದೆ.

l ಚಿಂಚೋಳಿ ವಸತಿ ಶಾಲೆಯ ಗ್ರಂಥಾಲಯದಲ್ಲಿ ಉ‍‍ಪಯುಕ್ತ ಪುಸ್ತಕ ಸೌಕರ್ಯ ಕಲ್ಪಿಸಿ.

– ಮೆಟ್ರಿಕ್ ನಂತರದ ಎಲ್ಲ ವಸತಿ ಶಾಲೆಗಳ ಹಾಸ್ಟೆಲ್‌ಗಳಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ಇಡಲು ಕ್ರಮ ಕೈಗೊಳ್ಳಲಾಗುವುದು. ಕೊರತೆ ಇರುವ ಕಡೆ ವಿಚಾರಣೆ ಮಾಡಿ, ಆದಷ್ಟು ಬೇಗ ಮಂಜೂರು ಮಾಡಲಾಗುವುದು.

l ಜೇವರ್ಗಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಟ್ಟಿದ ಮೂರು ಶಾದಿಮಹಲ್‌ಗಳಿವೆ. ಅವುಗಳ ನಿರ್ವಹಣೆ ಮಾಡುವವರು ಪ್ರತಿ ಕಾರ್ಯಕ್ರಮಕ್ಕೂ ಕನಿಷ್ಠ ₹ 35 ಸಾವಿರ ಪಡೆಯುತ್ತಿದ್ದಾರೆ. ಇದರಿಂದ ಬಡವರಿಗೆ ಪ್ರಯೋಜನವಾಗುತ್ತಿಲ್ಲ

–ಜಿಲ್ಲೆಯಲ್ಲಿ ಎಲ್ಲಿಯೇ ಶಾದಿಮಹಲ್‌ಗಳು ಇದ್ದರೂ ಇಷ್ಟು ದೊಡ್ಡ ಮೊತ್ತದ ಹಣ ಪಡೆಯುವಂತಿಲ್ಲ. ಆಯಾ ಸಭಾಂಗಣಗಳಿಗೆ ತಕ್ಕಂತೆ ನಿರ್ವಹಣೆಗಾಗಿ ಮಾತ್ರ ಅಲ್ಪಪ್ರಮಾಣದ ಹಣ ಪಡೆಯಲು ಅವಕಾಶ ನೀಡಲಾಗಿದೆ. ಈ ರೀತಿ ಪ್ರಕರಣಗಳು ಎಲ್ಲಿಯೇ ಕಂಡುಬಂದರೂ ನಮ್ಮ ಗಮನಕ್ಕೆ ತಂದರೆ ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಅತಿಥಿ ಶಿಕ್ಷಕರಿಗೂ ಸಂಬಳ ಸಂದಾಯ

l ಜನವರಿಯಿಂದ ಆರಂಭವಾದ ಶಾಲೆ– ಕಾಲೇಜುಗಳಲ್ಲಿ ಅತಿಥಿ ಶಿಕ್ಷಕ– ಉಪನ್ಯಾಸಕರಿಗೆ ಸಂಬಳ ಕೊಡುತ್ತಿಲ್ಲ.

–ಜಿಲ್ಲೆಯ ಎಲ್ಲ ವಸತಿ ಶಾಲೆಗಳಲ್ಲಿಯೂ ಈಗ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲರ ಸಂಬಳ ನಿಂತಿದೆ. ಆದರೆ, ಜನವರಿಯಿಂದ ಆರಂಭವಾದ ಎಲ್ಲ ಕಡೆಯೂ ಸಂಬಳ ನೀಡಲು ಆಯಾ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಯಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರ ಬಳಿಯೂ ಖಚಿತ ಮಾಡಿಕೊಳ್ಳಬಹುದು.

ಬೌದ್ಧ ಪಂಥದವರೂ ಪರಿಶಿಷ್ಟ ಸೌಲಭ್ಯಕ್ಕೆ ಅರ್ಹ

l ವಿವಿಧ ಅರ್ಜಿಗಳ ಜಾತಿ– ಧರ್ಮದ ಕಾಲಂನಲ್ಲಿ ‘ಬುದ್ಧಿಸ್ಟ್‌’ ಎಂದು ಬರೆದರೆ ನಮಗೆ ‘ಎಸ್‌.ಸಿ’ ಕೋಟಾದ ಸೌಲಭ್ಯಗಳು ಸಿಗುತ್ತವೆಯೇ?

–ಖಂಡಿತ ಸಿಗುತ್ತವೆ. ಅರ್ಜಿ ತುಂಬುವಾಗಿ ‘ಎಸ್‌.ಸಿ. ಬುದ್ಧಿಸ್ಟ್‌’ ಎಂದೇ ಭರ್ತಿ ಮಾಡಬೇಕು. ಬುದ್ಧಿಸ್ಟ್‌ ಎಂದು ಸೇರಿಸಿ ಬರೆದಾಕ್ಷಣ ಅಲ್ಪಸಂಖ್ಯಾತರು ಎಂದು ಪರಿಗಣಿತವಾಗುವುದಿಲ್ಲ. ಅವರನ್ನು ಪರಿಶಿಷ್ಟರು ಎಂದು ಪರಿಗಣಿಸಿ, ಎಲ್ಲ ಸೌಕರ್ಯಗಳನ್ನೂ ನೀಡಲು ಅವಕಾಶವಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು