ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಳಿನ್‌, ಸೋಮಣ್ಣ ಚಡ್ಡಿ ಹೊತ್ತಿಲ್ಲ ಏಕೆ?’

ಬಿಜೆಪಿಯಲ್ಲಿ ದಲಿತರಿಗೆ ಚಡ್ಡಿ ಹೊರುವ ಕೆಲಸ ಏಕೆ?: ಪ್ರಿಯಾಂಕ್ ಪ್ರಶ್ನೆ
Last Updated 15 ಜೂನ್ 2022, 6:34 IST
ಅಕ್ಷರ ಗಾತ್ರ

ಕಲಬುರಗಿ: ‘ಯುವ ಕಾಂಗ್ರೆಸ್ ಕಾರ್ಯಕರ್ತರು ಈಚೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಧರಿಸುವ ಖಾಕಿ ಚಡ್ಡಿಯನ್ನು ಪ್ರತಿ
ಭಟನೆ ವೇಳೆ ಸುಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರು ಎಸ್‌ಸಿ ಮೋರ್ಚಾದವರಿಗೆ ಹಳೆ ಚಡ್ಡಿಗಳನ್ನು ಸಂಗ್ರಹಿಸಿ ಕಾಂಗ್ರೆಸ್ ಕಚೇರಿಗೆ ತಲುಪಿಸುವ ಕೆಲಸ ವಹಿಸಿದ್ದಾರೆ. ದಲಿತ ಮುಖಂಡರ ಬದಲು ಪಕ್ಷದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ ಚಡ್ಡಿ ಹೊತ್ತಿಲ್ಲವೇಕೆ?’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಸೇರಿದರೂ ದಲಿತರಿಗೆ ಚಡ್ಡಿ ಹೊರುವುದು ತಪ್ಪಲಿಲ್ಲ. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದಕ್ಕೆ ಛಲವಾದಿ ನಾರಾಯಣಸ್ವಾಮಿ ಅವರು ಈ ಕೆಲಸ ಒಪ್ಪಿಕೊಳ್ಳಬಾರದಿತ್ತು. ಸೋಮಣ್ಣ, ಅಶೋಕ ಅವರು ಹಳೆ ಚಡ್ಡಿ ಪಡೆಯಲು ಕಲಬುರಗಿಯ ನಮ್ಮ ಮನೆಗೆ ಬಂದಿದ್ದರೆ ಖುಷಿಯಿಂದ ಹಳೆ ಚಡ್ಡಿ ಕೊಡುತ್ತಿದ್ದೆ’ ಎಂದರು.

‘ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ನಾನು ಹುಟ್ಟಿದ್ದೇನೆ. ನಮ್ಮ ತಂದೆಯವರು ಮುಖ್ಯಮಂತ್ರಿಯಾಗಲು ಅಡ್ಡಿಯಾಗಿದ್ದೇನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಅವರ ಬಗ್ಗೆ ನನಗೆ ಈಗಲೂ ಅಪಾರ ಗೌರವವಿದೆ. ಅವರು ರಾಜಕೀಯದಲ್ಲಿ ಬೆಳೆದು ಬಂದಿದ್ದೇ ದಲಿತ ಅಸ್ಮಿತೆಯಿಂದ’ ಎಂದು ಅವರು ತಿಳಿಸಿದರು.

‘ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಾರಾಯಣಸ್ವಾಮಿಯವರ ಆತ್ಮೀಯ ಒಡನಾಟವಿದೆ. ಪಠ್ಯಪುಸ್ತಕ ವಿವಾದದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾದ ಬಿಜೆಪಿ ವಿಷಯಾಂತರ ಮಾಡಲು ನಾರಾಯಣಸ್ವಾಮಿ ಅವರ ಮೂಲಕ ನಮ್ಮ ಕುಟುಂಬದ ವೈಯಕ್ತಿಕ ವಿಚಾರವನ್ನು ಮುನ್ನೆಲೆಗೆ ತರಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ನಮ್ಮ ವಿರುದ್ಧ ಮಾತನಾಡಿದವರಿಗೆ ನಾವು ಯಾವುದೇ ಬಗೆಯ ಬೆದರಿಕೆ ಹಾಕಿಲ್ಲ. ಈ ಬಗ್ಗೆ ಒಂದೇ ಒಂದು ಉದಾಹರಣೆ ಇದ್ದರೂ ತಿಳಿಸಬೇಕು. ಚಿತ್ತಾಪುರಕ್ಕೆ ಬಂದಾಗ ಕ್ಯಾ. ಗಣೇಶ್ ಕಾರ್ಣಿಕ್ ಅವರು ವೈಯಕ್ತಿಕ ವಿಚಾರ ಮಾತನಾಡಿದ್ದಾರೆ. ಹಾಗಾಗಿ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ನ್ಯಾಯಾಲಯ ತೀರ್ಪು ನೀಡಲಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಭೀಮಣ್ಣ ಸಾಲಿ ಇದ್ದರು.

ಪಠ್ಯಪುಸ್ತಕ: ಇಂದು ಅಹೋರಾತ್ರಿ ಧರಣಿ

‘ಚಕ್ರತೀರ್ಥ ಸಮಿತಿ ನೇಮಕಕ್ಕೆ ಘಟನೋತ್ತರ ಅನುಮತಿ ನೀಡಲಾಗುವುದು ಎಂದು ಹೇಳಲಾಗಿದೆ. ಹಾಗಿದ್ದರೆ, ಪರಿಷ್ಕೃತ ಪಠ್ಯಪುಸ್ತಕ ಮುದ್ರಿಸಲು ಅನುಮತಿ ನೀಡಿದ್ದು ಯಾರು? ನಿಯಮಗಳನ್ನು ಮೀರಿ ಶಿಕ್ಷಣ ಸಚಿವರು ಹಣ ಖರ್ಚು ಮಾಡಲು ಅವಕಾಶ ನೀಡಿದ್ದು ಏಕೆ’ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

‘ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಹಲವು ಲೋಪ ದೋಷಗಳಾಗಿದ್ದು, ಸತ್ಯ ಮರೆಮಾಚಿ ಇತಿಹಾಸ ತಿರುಚಲಾಗಿದೆ. ಕರ್ನಾಟಕದ ಮಹನೀಯರ ಜೀವನಚರಿತ್ರೆ ಬಗ್ಗೆ ತಪ್ಪು ಮಾಹಿತಿ ನೀಡಿ ಕನ್ನಡದ ಆಸ್ಮಿತೆಗೆ ಧಕ್ಕೆ ಮಾಡಲಾಗಿದೆ. ಇದನ್ನು ಖಂಡಿಸಿ ಬುಧವಾರ (ಜೂನ್‌ 15) ಕಲಬುರಗಿಯ ಜಗತ್ ವೃತ್ತದ ಬಳಿಯಿರುವ ಬಸವೇಶ್ವರ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು‘ ಎಂದು ಅವರು ತಿಳಿಸಿದರು.

‘ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನ ಮೊದಲು ಸಂವಿಧಾನ ಶಿಲ್ಪಿ ಪದ ತೆಗೆಯಲಾಗಿದೆ. ಅವರ ತಂದೆ, ತಾಯಿ ಮತ್ತು ಊರಿನ ಹೆಸರು‌ ಬಗ್ಗೆ ಮಾಹಿತಿ ಇಲ್ಲ. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಬಗ್ಗೆಯೂ ಅವಹೇಳನೆ ಮಾಡಲಾಗಿದೆ. ಅವರಿಗೆ ರಾಮ ಬೇಕು, ಆದರೆ ವಾಲ್ಮೀಕಿ ಬೇಡ’ ಎಂದು ಅವರು ಟೀಕಿಸಿದರು.

‘ದೇಶದ ಸಂವಿಧಾನದ ವಿರೋಧಿಗಳಾದ ಆರ್‌ಎಸ್‌ಎಸ್‌ನವರು ಸಂವಿಧಾನ ರಚನೆ ಸಂದರ್ಭದಲ್ಲಿ ಅದನ್ನು ವಿರೋಧಿಸಿ 150 ಕಡೆ ಪ್ರತಿಭಟನೆ ನಡೆಸಿದ್ದರು. ಮನುಸ್ಮೃತಿಯೇ ಸಂವಿಧಾನ ಆಗಬೇಕೆಂದು ಪ್ರತಿಪಾದಿಸಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT