ಕಮಲಾಪುರ: ‘ಕಳೆದ ಬಾರಿ ನೂರೆಂಟು ಹಗರಣ ಮಾಡಿದ ಬಿಜೆಪಿ, ಜೆಡಿಎಸ್‌ನ ಭ್ರಷ್ಟರಿಂದ ಇಂದು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಯುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಲೇವಡಿ ಮಾಡಿದರು.
ಪಟ್ಟಣದ ಕೋಹಿನೂರ ಕಲ್ಯಾಣ ಮಂಟಪದಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ವತಿಯಿಂದ ಬುಧವಾರ ಆಯೋಜಿಸಿದ್ದ ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿಯವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬಿಜೆಪಿಯ ಭ್ರಷ್ಟಾಚಾರಕ್ಕೆ ಬೇಸತ್ತು ಜನ ಕಾಂಗ್ರೆಸ್‌ಗೆ ಅಭೂತ ಪೂರ್ವ ಬೆಂಬಲ ಸೂಚಿಸಿದ್ದಾರೆ. 136 ಶಾಸಕರಿರುವ ಸರ್ಕಾರವನ್ನು ಅತಂತ್ರಗೊಳಿಸುವ ಕುತಂತ್ರ ನಡೆಸಿದ್ದಾರೆ. ನೀವು ಪಾದಯಾತ್ರೆ ಮಾಡಬೇಕಿರವುದು ಮೈಸೂರಿಗಲ್ಲ; ದೆಹಲಿಗೆ. ಕೇಂದ್ರದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪಾದಯಾತ್ರೆ ಮಾಡಿ’ ಎಂದರು.
‘ಅಧಿಕಾರದಲ್ಲಿರುವವರು ಏಕೆ ಜಾನಾಂದೋಲನ ಮಾಡುತ್ತಿರಿ ಎಂದು ಕೆಲವರು ಕೇಳುತ್ತಾರೆ. ರಾಜ್ಯಪಾಲರ ಹುದ್ದೆ ದುರುಪಯೋಗಪಡಿಸಿಕೊಂಡಾಗ, ರಾಜಭವನವನ್ನು ಪಕ್ಷದ ಕಚೇರಿ ಮಾಡಿಕೊಂಡಾಗ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ, ಸಂವಿಧಾನ ಕಗ್ಗೊಲೆಯಾದಾಗ, ರಾಜ್ಯದ ಸಂಪನ್ಮೂಲ ಉಳಿಸಲು ನಾವು ಜನಾಂದೋಲನ ಮಾಡುತ್ತೇವೆ. ವಿಜಯೇಂದ್ರ, ನಿಖಿಲ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯಕ್ಕಾಗಿ ಈ ಪಾದಯಾತ್ರೆ ನಡೆದಿದೆ, ಜನರ ಹಿತಕ್ಕಾಗಿ ಅಲ್ಲ’ ಎಂದರು.
ಸಂಸದ ರಾಧಾಕೃಷ್ಣ ಮಾತನಾಡಿ, ‘ನನಗೆ ಹೆಚ್ಚು ಮತ ನೀಡಿ ಗೆಲುವಿಗೆ ಕಾರಣರಾಗಿದ್ದೀರಿ. ಈ ಕೇತ್ರದಲ್ಲಿ ನಮ್ಮ ಶಾಸಕರಿಲ್ಲ. ನಿಮ್ಮ ಕೆಲಸಗಳೇನಿದ್ದರೂ ನೇರವಾಗಿ ನಮ್ಮ ಬಳಿಗೆ ಬನ್ನಿ’ ಎಂದರು.
ಸಚಿವ ಶರಣಪ್ರಕಾಶ ಪಾಟೀಲ, ಶಾಸಕ ಬಿ.ಆರ್.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಮಾತನಾಡಿದರು.
ದೇವಿಂದ್ರಪ್ಪ ಮರತೂರ, ಎಂ.ಎ.ರಶೀದ, ಶಿವಾನಂದ ಪಾಟೀಲ ಮರತೂರ, ಮಲ್ಲಿನಾಥ ಪಾಟೀಲ, ಸೋಮಶೇಖರ ಗೋನಾಯಕ, ಅಮರನಾಥ ತಡಕಲ್, ಶಾಮ ನಾಟೀಕಾರ, ಗುರುರಾಜ ಮಾಟೂರ, ಚಂದ್ರಿಕಾ ಪರಮೇಶ್ವರ, ರಾಜಕುಮಾರ ಕಪನೂರ, ಮಜರ ಅಲಮಖಾನ, ಚಂದ್ರಿಕಾ ಪರಮೇಶ್ವರ, ಗುರುರಾಜ ಪಾಟೀಲ ಹಾಜರಿದ್ದರು.
Cut-off box - ‘ಕೆಕೆಆರ್‌ಡಿಬಿಗೆ ಕೇಂದ್ರದ ಅನುದಾನಕ್ಕಾಗಿ ಹೋರಾಟ’ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ 371 (ಜೆ) ಅಡಿಯಲ್ಲಿ ರಾಜ್ಯದಿಂದ ₹5000 ಕೋಟಿ ಒದಗಿಸಲಾಗುತ್ತಿದೆ. ಅದರಂತೆ ಕೇಂದ್ರ ಸರ್ಕಾರ ಸಹ ಈ ಭಾಗದ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಐವರು ಸಂಸದರು ಸೇರಿ ಹೋರಾಟ ನಡೆಸಲು ನಿಶ್ಚಯಿಸಿದ್ದಾರೆ. ಮಹಾರಾಷ್ಟ್ರ ಮಾದರಿಯಂತೆ ನಮಗೂ ಅನುದಾನ ಬೇಕು ಎಂದು ಒತ್ತಾಯಿಸಲು ಕಲಬುರಗಿ ಸಂಸದ ರಾಧಾಕೃಷ್ಣ ನೇತೃತ್ವದಲ್ಲಿ ಹೋರಾಟ ನಡೆಯಲಿದೆ’ ಎಂದು ಪ್ರಿಯಾಂಕ ಖರ್ಗೆ ತಿಳಿಸಿದರು. ‘ಸಂಸದರಾದ ತಕ್ಷಣದಿಂದಲೇ ಕಲಬುರಗಿ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ರೈಲ್ವೆ ಡಿವಿಸನ್ ಸ್ಥಾಪನೆ ಹೆದ್ದಾರಿ ಕಾಮಗಾರಿ ತ್ವರಿತಗೊಳಿಸುವುದು ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಮೂಲ ಸೌಕರ್ಯ ಒದಗಿಸುವ ಕುರಿತು ಸಂಬಂಧಪಟ್ಟ ಮಂತ್ರಗಳೊಂದಿಗೆ ಚರ್ಚಿಸಿದ್ದಾರೆ’ ಎಂದರು.
Cut-off box - ಜಿ.ಪಂ ತಾಪಂ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ ‘ಲೋಕಸಭೆ ಚನಾವಣೆಯಂತೆ ಮುಂಬರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಗ್ರಾಮೀಣ ಮತಕ್ಷೇತ್ರದ ಮುಖಂಡರು ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಪ್ರಿಯಾಂಕ ಖರ್ಗೆ ತಿಳಿಸಿದರು. ‘ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಇಲ್ಲಿ ಬಿಜೆಪಿ ಜೆಡಿಎಸ್ ನಿಲ್ಲುವುದೇ ಇಲ್ಲ. ನೀವು ಒಗ್ಗಟ್ಟಾಗದೆ ಕಾರ್ಯಕರ್ತರು ಉಳಿಯಲ್ಲ. ಕಾರ್ಯಕರ್ತರಿಲ್ಲದೆ ನಾಯಕಾರಗಲು ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ನಿಮಗೆ ಏನೆಲ್ಲ ಅನುಕೂಲ ಬೇಕು ನಾನು ಮಾಡಿಕೊಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.