ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

Published 7 ಮಾರ್ಚ್ 2024, 16:15 IST
Last Updated 7 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ಕಲಬುರಗಿ: ಅಫಜಲಪೂರ ತಾಲ್ಲೂಕಿನಲ್ಲಿ ಭೀಮೆಯ ಒಡಲು ಬತ್ತಿ ಹೋಗಿದ್ದರಿಂದ ಹಲವು ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. 

ಅಫಜಲಪುರ ಸಮೀಪದ ಚಿಂಚೋಳಿ ಗ್ರಾಮದಲ್ಲಿ ಐದು ಸಾವಿರ ಜನಸಂಖ್ಯೆ ಇದ್ದು, ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗಿದೆ. ಜಲಮೂಲಗಳು ಬತ್ತಿ ಹೋಗಿದ್ದು, ಜಲಜೀವನ್ ಮಿಷನ್ ಕಾಮಗಾರಿ ಮುಗಿದು ನಾಲ್ಕು ತಿಂಗಳು ಕಳೆದರೂ ನೀರು ಪೂರೈಕೆಯಾಗಿಲ್ಲ. ಪಕ್ಕದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ಜೆಜೆಎಂ ನಲ್ಲಿಯಲ್ಲಿ ನೀರು ಬರುತ್ತಿದೆ. ತಕ್ಷಣ ನಮ್ಮಲ್ಲೂ ಪ್ರಾರಂಭಿಸಬೇಕು ಎಂದು ಚಿಂಚೋಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ನಿತ್ಯ ಒಂದಲ್ಲ ಒಂದು ಪಂಚಾಯಿತಿಯ ಹಳ್ಳಿಗಳಿಗೆ ಭೇಟಿ ನೀಡಬೇಕು. ತಾಲ್ಲೂಕಿನಲ್ಲಿ ಸರ್ಕಾರದ 65 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ 33 ಮಾತ್ರ ಚಾಲ್ತಿಯಲ್ಲಿವೆ. ಉಳಿದ 32 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಅಧಿಕಾರಿ ಬಾಬುರಾವ ಜ್ಯೋತಿ ತಿಳಿಸಿದರು.

‘ಸ್ಥಳೀಯರಿಂದ ಗ್ರಾಮ ಪಂಚಾಯಿತಿಗಳ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಪಿಡಿಒಗಳಾಗಲಿ, ಜನಪ್ರತಿನಿಧಿಗಳಾಗಲಿ, ಅವರತ್ತ ತಿರುಗಿಯೂ ನೋಡುತ್ತಿಲ್ಲ‘ ಎಂದು ಗ್ರಾಮಸ್ಥ ನಾನಾಗೌಡ ಪಾಟೀಲ ಬೇಸರಿಸಿದರು.

ಬರಗಾಲದಿಂದ ಅಂತರ್ಜಲ ಪಾತಾಳಕ್ಕೆ ಹೋಗಿದ್ದು 800ರಿಂದ 1 ಸಾವಿರ ಅಡಿ ಆಳದವರೆಗೆ ಕೊರೆದರೂ ಒಂದು ಹನಿ ನೀರು ಬರುತ್ತಿಲ್ಲ. ಹೀಗಾಗಿ ಸುತ್ತಮುತ್ತಲಿನ ತೋಟಗಳಲ್ಲಿನ ಬಾವಿಗಳಿಂದ ಸರ್ಕಾರ ನೀರು ಖರೀದಿಸಿ ಜನರ ನೀರಿನ ಬವಣೆ ನೀಗಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಭೀಮಾ ನದಿ ಬತ್ತಿರುವುದರಿಂದ ಮಹಾರಾಷ್ಟ್ರದಿಂದ ಉಜನಿ ಡ್ಯಾಂನಿಂದ ನೀರು ಬಿಡಿಸುವಂತೆ ಸರ್ಕಾರಕ್ಕೆ ಶಾಸಕರು ಒತ್ತಾಯ ಮಾಡಬೇಕು. ಇಲ್ಲದಿದ್ದರೆ ನದಿ ತಟದ ಗ್ರಾಮಗಳು ತೊಂದರೆಗೊಳಗಾಗುತ್ತವೆ ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿಲ್ಲ. ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮವಾಗಬೇಕು ಎನ್ನುತ್ತಾರೆ ಚಿಂಚೋಳಿ ಗ್ರಾಮದ ಸಾಮಾಜಿಕ ಹೋರಾಟಗಾರ ಲಕ್ಷ್ಮಿಪುತ್ರ ಚಿನಮಳ್ಳಿ.

ಅಫಜಲಪುರದ ಚಿಂಚೋಳಿ ಗ್ರಾಮದಿಂದ 10 ಕಿ.ಮೀ. ದೂರ ಹೋಗಿ ಶುದ್ಧ ಕುಡಿಯವ ನೀರಿನ ಒಂದು ಕ್ಯಾನ್‌ ನೀರು ತರುವ ಪರಿಸ್ಥಿತಿ ಇದೆ. ಸಮಾರಂಭ ಮಾಡಬೇಕಾದರೆ ತಾಲ್ಲೂಕು ಕೇಂದ್ರದಿಂದ ಹಣ ಖರ್ಚು ಮಾಡಿ ನೀರು ತರಿಸುತ್ತೇವೆ
ಗೊಲ್ಲಾಳ ತೇಲಿ ಚಿಂಚೋಳಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT