ಗುರುವಾರ , ಜುಲೈ 29, 2021
27 °C
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ನೇತೃತ್ವದಲ್ಲಿ ಮನವಿ ಸಲ್ಲಿಕೆ

ಕಲಬುರ್ಗಿ: ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್‌ಎಸ್‌) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಹಿಳೆಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಲೆ ಹೆಚ್ಚಳ ಖಂಡಿಸಿ ಸಂಘಟನೆ ರಾಷ್ಟ್ರವ್ಯಾಪಿ ನೀಡಿದ್ದ ಕರೆಯ ಅಂಗವಾಗಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಕಾರ್ಯಕರ್ತರು ತೈಲ ಬೆಲೆಯ ಭಾರಿ ಹೆಚ್ಚಳ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಆರ್ಥಿಕ ಬಿಕ್ಕಟ್ಟು ಮತ್ತು ಕೊರೊನಾದಿಂದಾಗಿ ಇಡೀ ಜನಸಮೂಹವೇ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ವೇಳೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದು ಜನಸಾಮಾನ್ಯರ ಬದುಕನ್ನು ಜರ್ಝರಿತಗೊಳಿಸಿದೆ. ಅಡುಗೆ ಅನಿಲ ದರವನ್ನು ಮತ್ತೆ ₹ 25 ಏರಿಕೆ ಮಾಡಲಾಗಿದೆ. ಕೆಲವೇ ತಿಂಗಳ ಅಂತರದಲ್ಲಿ ₹ 240 ಹೆಚ್ಚಳವಾಗಿ ₹ 850ರಷ್ಟಾಗಿದೆ. ಕೋವಿಡ್ ಬಿಕ್ಕಟ್ಟು ಬಳಸಿಕೊಂಡ ಸರ್ಕಾರ, ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನೂ ಸ್ಥಗಿತಗೊಳಿಸಿದೆ’ ಎಂದು ಪ್ರತಿಭಟನಾ ನಿರತರು ದೂರಿದರು.

‘ಪೂರ್ವ ತಯಾರಿಯಿಲ್ಲದ ಲಾಕ್‌ಡೌನ್ ಮಹಿಳೆಯರನ್ನು ಅಸಮಾನತೆ ಹಾಗೂ ಸಂಕಷ್ಟಕ್ಕೆ ತಳ್ಳಿತ್ತು. ಎರಡನೇ ಅಲೆಯ ವೇಳೆ ಸಾವಿರಾರು ಸೋಂಕಿತರು ಚಿಕಿತ್ಸೆ, ಬೆಡ್, ವೈದ್ಯಕೀಯ ಆಮ್ಲಜನಕ ಸಿಗದೆ ಮೃತಪಟ್ಟರು. ಅನೇಕ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾದರು. 2ನೇ ಅಲೆಯಲ್ಲಿ ಎಸಗಿದ್ದ ತಪ್ಪುಗಳಿಂದ ಸರ್ಕಾರ ಎಚ್ಚೆತ್ತುಕೊಂಡು ಸೋಂಕು ಎದುರಿಸಲು ಯುದ್ಧೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲರಿಗೂ ಉಚಿತ ಲಸಿಕೆ ನೀಡಿ ಸಂಭವನೀಯ 3ನೇ ಅಲೆಗೆ ಸಜ್ಜಾಗಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ಸಮಸ್ಯೆಗಳ ಪರ ಧ್ವನಿ ಎತ್ತುವವರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಸುಳ್ಳು ಆರೋಪ ಹೊರಿಸಿ ಹಲವಾರು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಬಂಧಿಸಿಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ, ಜಿಲ್ಲಾ ಸಮಿತಿ ಸದಸ್ಯರಾದ ರೂಪಾ, ಸಾಬಮ್ಮ, ಮುಖಂಡರಾದ ಗುಂಡಮ್ಮ, ನೂರ್‌ಜಹಾನ್, ಕಮಲಾಬಾಯಿ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು