ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಿಗಳಿಗೆ ಶೀಘ್ರ ಶಿಕ್ಷೆಯಾಗಲಿ

ದೆಹಲಿಯಲ್ಲಿ ಯುವತಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ, ಪ್ರಬುದ್ಧ ಸಾಂಸ್ಕೃತಿಕ ವೇದಿಕೆಯ ಪ್ರತಿಭಟನೆ
Last Updated 11 ಸೆಪ್ಟೆಂಬರ್ 2021, 14:53 IST
ಅಕ್ಷರ ಗಾತ್ರ

ಕಲಬುರ್ಗಿ: ದೆಹಲಿಯ ಸಿವಿಲ್‌ ಡಿಫೆನ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಶೀಘ್ರ ಉಗ್ರ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿ, ಇಲ್ಲಿನ ಪ್ರಬುದ್ಧ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.‌

ಇಲ್ಲಿನ ಹೀರಾಪುರ ವೃತ್ತದ ಬಳಿ ಸೇರಿದ ಸಂಘಟನೆಯ ಮುಖಂಡರು ಕೆಲಕಾಲ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

‘ದೇಶದ ರಾಜಧಾನಿಯಲ್ಲೇ ಯುವತಿ, ಮಹಿಳೆಯರಿಗೆ ರಕ್ಷಣೆ ಇಲ್ಲ. ಇಂಥ ಹೇಯ ಅತ್ಯಾಚಾರಗಳು, ವಿಕೃತ ಕೃತ್ಯಗಳು, ಹತ್ಯೆಗಳು ದೇಶದ ಉದ್ದಗಲಕ್ಕೂ ಪದೇಪದೇ ನಡೆಯುತ್ತಲೇ ಇವೆ. ಈ ಬಾರಿ ಪೊಲೀಸ್‌ ಅಧಿಕಾರಿಯ ಮೇಲೆಯೇ ಅತ್ಯಚಾರ ನಡೆಸಲಾಗಿದೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ನಿರೀಕ್ಷೆ ಮಾಡಲೂ ಸಾಧ್ಯವಿಲ್ಲದ ವಾತಾವರಣ ಉಂಟಾಗಿದೆ. ಇದಕ್ಕೆಲ್ಲ ಸರ್ಕಾರದ ಸಡಿಲ ನೀತಿಗಳೇ ಕಾರಣ’ ಎಂದು ಆಕ್ರೋಶ ಹೊರಹಾಕಿದರು.

ದುರುಳರು 21 ವರ್ಷದ ಯುವತಿಯನ್ನು ಅಪಹರಿಸಿ 50 ಬಾರಿ ಅತ್ಯಾಚಾರ ಎಸಗಿದ್ದಾರೆ. ಸ್ತನಗಳನ್ನು ಕತ್ತರಿಸಿ ಚಿತ್ರಹಿಂಸೆ ನೀಡಿದ್ದಾರೆ. ಇಷ್ಟೆಲ್ಲ ಸಾಕ್ಷ್ಯಗಳು ಖಚಿತವಾದ ಮೇಲೂ ಆರೋಪಿಗಳನ್ನು ಬಂಧಿಸಿಲ್ಲ. ಈ ಬಗ್ಗೆ ಪ್ರಧಾನಿ ಆಗಲೀ, ಕೇಂದ್ರ ಸರ್ಕಾರದ ಯಾವೊಬ್ಬ ಸಚಿವನಾಗಲೀ ಪ್ರತಿಕ್ರಿಯೆ ನೀಡಿಲ್ಲ. ಇವರು ಮೌನವಾಗಿರುವುದಕ್ಕೆ ಕಾರಣವೇನು? ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಕೇಂದ್ರ ಸರ್ಕಾರವನ್ನು ರಕ್ಷಿಸುವ ಹುನ್ನಾರದಲ್ಲಿ ಕೆಲವು ಮಾಧ್ಯಮಗಳೂ ಪ್ರಕರಣದ ದಾರಿ ತಪ್ಪಿಸುತ್ತಿವೆ. ಮಾತ್ರವಲ್ಲ; ಭ್ರಷ್ಟಾಚಾರದೊಂದಿಗೆ ತಳಕು ಹಾಕಿಕೊಂಡಿರುವ ಈ ಪ್ರಕರಣದಲ್ಲಿ ಕೆಲವು ಪೊಲೀಸ್‌ ಅಧಿಕಾರಿಗಳೂ ಪ್ರಕರಣ ಮುಚ್ಚಿಹಾಕುವ ಕೆಲಸ ಮಾಡುತ್ತಿರುವ ಅನುಮಾನಗಳಿವೆ. ಇದೆಲ್ಲದರ ಮೇಲೆ ನಿಯಂತ್ರಣ ಹೇರಬೇಕು. ಯುವತಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದೂ ಆಗ್ರಹಿಸಿದರು.

ದೇಶದಲ್ಲಿ ಪ್ರತಿ 15 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಸಂಸ್ಥೆಗಳೇ ದಾಖಲೆ ನೀಡಿವೆ. ಆದರೂ ಇದರ ನಿಯಂತ್ರಣಕ್ಕೆ ಸರ್ಕಾರ ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ನ್ಯಾಯಾಲಯದಲ್ಲೂ ನ್ಯಾಯ ಸಿಗುವುದು ತುಂಬ ವಿಳಂಬವಾಗುತ್ತಿದೆ. ಇದರು ಸಂತ್ರಸ್ತರನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸುತ್ತಿದೆ ಎಂದೂ ಮನವಿಯಲ್ಲಿ ತಿಳಿಸಿದ್ದಾರೆ.

ಅತ್ಯಾಚಾರಿಗಳಿಗೆ ಶೀಘ್ರ ಶಿಕ್ಷೆ ಕೊಡಿಸುವಂಥ ಕಾನೂನು ಜಾರಿ ಮಾಡಬೇಕು. ಮಹಿಳೆಯರ ಹಕ್ಕುಗಳ ರಕ್ಷಣೆಗೆ ಕೇಂದ್ರ ವಿಶೇಷ ಕಾನೂನು ರೂಪಿಸಬೇಕು. ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಬೇಕು. ಸಂತ್ರಸ್ತೆ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದರು.

ಮುಖಂಡರಾದ ಅಲ್ಲಮಪ್ರಭು ನಿಂಬರ್ಗಾ, ಅನೀಲ ತೆಗ್ಗೆ, ಪ್ರಕಾಶ ಔರಾದಕರ್, ಸೋಮಶೇಖರ ಮೇಲ್ಮನಿ, ಅಜೀಂ ಪಟೇಲ್, ಅಸದ್ ಅನ್ಸಾರಿ, ಭೀಮಾಶಂಕರ ದುದನಿ, ಶಿವಕುಮಾರ ಮದ್ರಿ, ರಾಣೋಜಿ, ಬಸವರಾಜ ಸಾಮ್ರಾಟ್, ಸಂತೋಷ ನೂಲಾ, ರತ್ನಾ ನಿಂಬಾಳ್ಕರ್, ವಿಠಲ ಚಿಕಣಿ, ರಾಹುಲ ಹದನೂರ, ಹಣಮಂತ ಇಟಗಾ ಸೇರಿದಂತೆ ಹೀರಾಪುರದ ಹಲವು ನಿವಾಸಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT