ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ತೀಸ್ತಾ ಬಂಧನ ಖಂಡಿಸಿ ಪ್ರತಿಭಟನೆ

ನರೇಂದ್ರ ಮೋದಿ ಸರ್ಕಾರದಿಂದ ಸೇಡಿನ ರಾಜಕಾರಣ: ಟೀಕೆ
Last Updated 27 ಜೂನ್ 2022, 4:55 IST
ಅಕ್ಷರ ಗಾತ್ರ

ಕಲಬುರಗಿ: ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಅವರನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಬಂಧಿಸಿರುವುದು ನರೇಂದ್ರ ಮೋದಿ ಸರ್ಕಾರದ ಸೇಡಿನ ಕ್ರಮವಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಭಾನುವಾರ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆಗೆ ಧಿಕ್ಕಾರ, ಸೇಡಿನ ಸಂಸ್ಕೃತಿ ನಿಲ್ಲಿಸಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ‘ಭಾರತ ಸರ್ಕಾರವು ತೀಸ್ತಾ ಸೆಟಲ್‌ವಾಡ್ ಹಾಗೂ ಮಾಜಿ ಐ‍ಪಿಎಸ್ ಅಧಿಕಾರಿ ಶ್ರೀಕುಮಾರ್ ಅವರನ್ನು ಬಂಧಿಸುವ ಮೂಲಕ ಲಜ್ಜೆಗೇಡಿತನ ಪ್ರದರ್ಶಿಸಿದೆ. ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯ ಆರೋಪಮುಕ್ತಗೊಳಿಸಿರಬಹುದು. ಆದರೆ, ಅವರು ಮಾಡಿದ ಅನಾಚಾರಗಳು, ಹತ್ಯಾಕಾಂಡಗಳನ್ನು ಜನತೆ ನೋಡಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಆರ್‌ಎಸ್‌ಎಸ್‌ ಬೆಂಬಲಿತವಾಗಿದ್ದು, ಸೇಡಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ. ಪ್ರಜಾಪ್ರಭುತ್ವದ ಸೌಂದರ್ಯ ಪ್ರಶ್ನಿಸುವುದರಲ್ಲಿದೆ. ಇದನ್ನೇ ಹತ್ತಿಕ್ಕಲು ಮೋದಿ ಸರ್ಕಾರ ಹೊರಟಿದೆ. ಭಾರತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಜಾರಿಯಲ್ಲಿದ್ದು, ಯಾರೆಷ್ಟೇ ಪ್ರಯತ್ನಿಸಿದರೂ ದೇಶದ ಪ್ರಜಾಪ್ರಭುತ್ವ ನಾಶಗೊಳಿಸಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಹೋರಾಟಗಾರರ ಬಂಧನ ಮಾಡಿದ್ದಕ್ಕಾಗಿ ಇಡೀ ಜಗತ್ತು ಛೀಮಾರಿ ಹಾಕುತ್ತಿದೆ’ ಎಂದರು.

ಹಿರಿಯ ಸಾಹಿತಿ ಡಾ. ನಟರಾಜ ಬೂದಾಳು, ಸಮುದಾಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ. ಪ್ರಭು ಖಾನಾಪುರೆ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಸುಧಾಮ ಧನ್ನಿ, ಸ್ಲಂ ಜನಾಂದೋಲನ ಸಂಘಟನೆಯ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಜಾಗತಿಕ ಲಿಂಗಾಯತ ಹೋರಾಟ ಸಮಿತಿಯ ರವೀಂದ್ರ ಶಾಬಾದಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ಎಸ್‌ಎಫ್‌ಐನ ರವಿ ಸಿರಸಗಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ನಂದಕುಮಾರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೌನ ಪ್ರತಿಭಟನೆ: ತೀಸ್ತಾ ಸೆಟಲವಾಡ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಮತ್ತು ಫುಲೆ ಸ್ಟಡಿ ಸರ್ಕಲ್ ಸಹಯೋಗದಲ್ಲಿ ಭಾನುವಾರ ಜಗತ್ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಯಿತು.

‘ಭಾರತವು ವಿವಿಧ ಜನಾಂಗ, ಭಾಷೆ, ಸಂಸ್ಕೃತಿ ಹೋಂದಿರುವ ದೇಶ. ಭಾರತ ಸಂವಿಧಾ‌ನವು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಹಕ್ಕನ್ನು ನೀಡಿದೆ. ಆದರೆ ಭಾರತ ಸರ್ಕಾರವು ಪ್ರಶ್ನಿಸುವವರನ್ನು ಬಂಧಿಸುತ್ತ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಸಂವಿಧಾನಕ್ಕೆ ದೇಶದ‌ ಕಾನೂನಿಗೆ ತಲೆ ಬಾಗದೆ ಆರ್‌ಎಸ್ಎಸ್‌ನ ಒಂದು ಘಟಕವಾಗಿ ಕೆಲಸ ಮಾಡುತ್ತ ದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ. ತೀಸ್ತಾ ಸೆಟಲ್ವಾಡ್ ಅವರ ಅಕ್ರಮ ಬಂಧನ ವಿರೋಧಿಸುತ್ತ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕಿ ಅಶ್ವಿನಿ ಮದನಕರ, ಭವಾನಿ ಪ್ರಸಾದ್, ಪೂಜಾ ಸಿಂಗೆ, ಸಾಗರ್ ಎ. ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT