ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹ

ಕನ್ನಡಪರ ಸಂಘಟನೆಗಳ ಪ್ರತಿಭಟನೆ, ದೀರ್ಘದಂಡ ನಮಸ್ಕಾರ
Published 2 ಜುಲೈ 2024, 5:01 IST
Last Updated 2 ಜುಲೈ 2024, 5:01 IST
ಅಕ್ಷರ ಗಾತ್ರ

ಕಲಬುರಗಿ: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸರ್ಕಾರ ಸಮಗ್ರ ಕಾಯ್ದೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಹಾಗೂ ನಮ್ಮ ಕರ್ನಾಟಕ ಸೇವೆ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆಯ ಅನ್ವಯ ರಾಜ್ಯ ಸರ್ಕಾರ ಕಠಿಣ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸಬೇಕು. ಖಾಸಗಿ ಸಂಸ್ಥೆಗಳ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಶೇ 100ರಷ್ಟು ಮೀಸಲಾತಿ, ಉಳಿದ ಹುದ್ದೆಗಳಲ್ಲಿ ಶೇ 80ರಷ್ಟು ಮೀಸಲಾತಿಯನ್ನು ಕನ್ನಡಗರಿಗೆ ನೀಡಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತರು.

ಕನ್ನಡಿಗರಿಗೆ ಉದ್ಯೋಗ ನೀಡದ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸಿ ಭೂಮಿ ಹಂಚಿಕೆ ಮಾಡಿದ್ದರೆ ವಾಪಸ್ ಪಡೆಯಬೇಕು. ಸರ್ಕಾರದಿಂದ ಸವಲತ್ತುಗಳನ್ನು ನೀಡಿದ್ದರೆ ಹಿಂದಕ್ಕೆ ಪಡೆದು ದಂಡ ವಿಧಿಸಿ ಕ್ರಿಮಿನಲ್ ಮೊಕದ್ದೆಮೆ ಹೂಡಬೇಕು. ಸರೋಜನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಪುನೀತರಾಜ ಸಿ.ಕವಡೆ, ಪ್ರಮುಖರಾದ ಮಹೇಶ ಎಸ್.ಕಾಶಿ, ನೀಲಕಂಠರಾವ ಪಾಟೀಲ, ಈರಣ್ಣ ಆಳಂದ, ದೇವಿಂದ್ರ ಮಯೂರ, ದೇವಿಂದ್ರಪ್ಪಗೌಡ ಪಾಟೀಲ, ಯಲ್ಲಾಲಿಂಗ ಹಯ್ಯಾಳಕರ್, ಸಂಗಮ ಬೋರೊಟಿ, ಯಲ್ಲಪ್ಪ ಬಂಕಲಗಿ, ನಿರ್ಮಲಾ ತಳವಾರ, ನಿಸಾರ್ ಅಹಮದ್ ಖಾನ್, ಕಲ್ಯಾಣಿ ತಳವಾರ, ಶಂಕರಗೌಡ ಯಡ್ರಾಮಿ, ಶಬ್ಬಿರ್ ಸಾಬ್, ಸುರೇಶ ಹೊಸಮನಿ, ನಂದಕುಮಾರ ಸೇಡಂ, ಪ್ರಭುಲಿಂಗ ಯಳವಂತಗಿ ಉಪಸ್ಥಿತರಿದ್ದರು.

ದೀರ್ಘದಂಡ ನಮಸ್ಕಾರ: ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಕಾರ್ಯಕರ್ತರೊಬ್ಬರು ದೀರ್ಘದಂಡ ನಮಸ್ಕಾರ ಹಾಕಿದರು.

ರಾಜ್ಯ ಸರ್ಕಾರಿ ಸಂಸ್ಥೆ, ಸಾರ್ವಜನಿಕ ವಲಯದ ಘಟಕಗಳಲ್ಲಿ ಶೇ 100 ರಷ್ಟು ಕನ್ನಡಿಗರಿಗೆ ಮೀಸಲಿಡಬೇಕು. ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚನೆ ಮಾಡಿದ್ದ ಸರೋಜಿನಿ ಮಹಿಷಿ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ. ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೇನೆ ಜಿಲ್ಲಾಧ್ಯಕ್ಷ ಆನಂದ ಎಸ್‌.ದೊಡ್ಡಮನಿ, ಪದಾಧಿಕಾರಿಗಳಾದ ಸಿದ್ದಲಿಂಗ ರಾಠೋಡ, ಅಪ್ಪು ಕ್ಷತ್ರಿಯ, ಅಶೋಕ ಭೀಮಳ್ಳಿ, ಶಿವಲಿಂಗ ಹಳ್ಳಿ ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT