ಕಲಬುರಗಿ: ಅತಿವೃಷ್ಟಿ ಮತ್ತು ನೆಟೆ ರೋಗದಿಂದ ತೊಗರಿ ಬೆಳೆ ಕಳೆದುಕೊಂಡ ಬೆಳೆಗಾರರಿಗೆ ಪರಿಹಾರಧನ, ಮಂಜೂರಾದ ಹೈನುಗಾರಿಕೆಯ ಸಾಲದ ಹಣ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಹಾಗೂ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕಿನ ಪ್ರಧಾನ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಅಲ್ಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತೊಗರಿ ಬೆಳೆ ಕಳೆದುಕೊಂಡ ರೈತರು ಬೆಳೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಮಂಜೂರಾದ ಸಾಲದ ಹಣವನ್ನು ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಪಾವತಿಸುತ್ತಿಲ್ಲ. ಸೇಡಂ ತಾಲ್ಲೂಕಿನಲ್ಲಿ ಮಾತ್ರ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಕೊಡಲಾಗುತ್ತಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಈ ನಡೆ ಖಂಡನೀಯ ಎಂದರು.
2017–18ರ ಸಾಲಿನ ಸಾಲ ಮನ್ನಾ ಪ್ರಯೋಜನೆಯು ರೈತರಿಗೆ ತಲುಪಿಸಬೇಕು. ಹೈನುಗಾರಿಕೆಗೆ ಮಂಜೂರಾದ ಸಾಲವನ್ನು ವಿಳಂಬ ಮಾಡದೆ ಅರ್ಹರಿಗೆ ಕೊಡಬೇಕು. ಜಿಎಸ್‌ಟಿ ಹೊರೆಯನ್ನು ರೈತರ ಮೇಲೆ ಹಾಕುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಸಂಘಗಳಲ್ಲಿ ಸದಸ್ಯತ್ವ ಪಡೆದ ರೈತರಿಗೆ ಹೊಸದಾಗಿ ಸಾಲ ಕೊಡಬೇಕು. ಸಾಲ ಕೊಡುವುದರಲ್ಲಿ ತಾರತಮ್ಯ ಮಾಡುವುದನ್ನು ಕೈ ಬಿಟ್ಟು ನೇರವಾಗಿ ಬೆಳೆ ಸಾಲ ವಿತರಿಸಬೇಕು. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಆದರೂ ಜಿಲ್ಲೆಯಾದ್ಯಂತ ಬೇಕಾಬಿಟ್ಟಿಯಾಗಿ ತಮ್ಮ ಮನಸೋಇಚ್ಛೆಯಂತೆ ಸಾಲ ವಿತರಿಸಲಾಗಿದೆ. ಮಲತಾಯಿ ಧೋರಣೆ ಬದಿಗಿರಿಸಿ, ತಾರತಮ್ಯ ಮಾಡದೆ ಎಲ್ಲ ರೈತರಿಗೆ ಸಮಾನವಾಗಿ ಸಾಲ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಶರಣಬಸಪ್ಪಾ ಮಮಶೆಟ್ಟಿ, ಸಾಯಬಣ್ಣ ಗುಡುಬಾ, ಸುಭಾಷ್ ಜೇವರ್ಗಿ, ದಿಲೀಪ್ ಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ, ಪಾಂಡುರಂಗ ಮಾವಿನಕರ, ಪ್ರಕಾಶ್ ಜಾನೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.