ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಸಂಸದ ಅಸಾದುದ್ದೀನ್‌ ಓವೈಸಿ ಮನೆ ಮೇಲೆ ದಾಳಿ, ಪ್ರತಿಭಟನೆ

ಕಿಡಿಗೇಡಿಗಳನ್ನು ಶಿಕ್ಷೆಗೆ ಗುರಿಪಡಿಸಲು ಆಗ್ರಹ, ರಾಷ್ಟ್ರಪತಿ, ಗೃಹಸಚಿವರಿಗೆ ಮನವಿ ರವಾನೆ
Last Updated 25 ಸೆಪ್ಟೆಂಬರ್ 2021, 6:59 IST
ಅಕ್ಷರ ಗಾತ್ರ

ಕಲಬುರ್ಗಿ: ‘ನವದೆಹಲಿಯಲ್ಲಿರುವ ಸಂಸದ ಅಸಾದುದ್ದೀನ್‌ ಓವೈಸಿ ಅವರ ಮನೆ ಮೇಲೆ ದಾಳಿ ಮಾಡಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್‌ ಇಂಡಿಯಾ ಮಜಲೀಸ್‌ ಇ– ಇತ್ತೇಹಾದುಲ್‌ ಮುಸ್ಲಿಮೀನ್‌ ಸಂಘಟನೆಯ ಜಿಲ್ಲಾ ಯುವ ಘಟಕದ ಕಾರ್ಯಕರ್ತತು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಹಾಗೂ ರಾಷ್ಟ್ರಪತಿ ರಮಾನಾಥ್‌ ಕೋವಿಂದ್‌ ಅವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ನೀಡಲಾಯಿತು.

‘ಎಐಎಂಐಎಂ ಪಕ್ಷದ ನೇತಾರರೂ ಆದ ಅಸಾದುದ್ದೀನ್‌ ಓವೈಸಿ ಅವರಿಗೆ ಹಿಂದಿನಿಂದಲೂ ಬೆದರಿಕೆ ಒಡ್ಡಲಾಗುತ್ತಿದೆ. ಮುಸ್ಲೀಮರ ಧ್ವನಿಯಾಗಿ ನಿಂತ ಅವರನ್ನು ಮುಗಿಸಲು ಹುನ್ನಾರ ನಡೆದಿದೆ. ದೆಹಲಿಯಲ್ಲಿರುವ ಅವರ ನಿವಾಸ ಹಾಗೂ ಕಚೇರಿ ಮೇಲೆ ಪದೇಪದೇ ದಾಳಿಗಳು ನಡೆಯುತ್ತಿವೆ. ಇದೆಲ್ಲ ಕೋಮು ಗಲಭೆ ಹರಡುವ ಉದ್ದೇಶದಿಂದಲೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಡೆಸುತ್ತಿರುವ ಹುನ್ನಾರ’ ಎಂದೂ ಅವರು ಮನವಿಯಲ್ಲಿ ಆರೋಪಿಸಿದ್ದಾರೆ.

‘ಪೊಲೀಸರು ಈಗಾಗಲೇ ಕೆಲವು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಆದರೆ, ಅವರ ಮೇಲೆ ಯಾವುದೇ ಕೇಸ್‌ ಮಾಡಿಲ್ಲ. ಈ ಹಿಂದೆ ಕೂಡ ಇಂಥದ್ದೇ ಮಾರಣಾಂತಿಕ ದಾಳಿಗಳು ನಡೆದಿವೆ. ಆಗಲೂ ಕೇವಲ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ಧೋರಣೆ ಖಂಡನೀಯ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು. ಅವರ ಮೇಲೆ ಗಲಭೆ, ದೊಂಬಿ, ಜೀವಭಯ ಒಡ್ಡಿದ ಪ್ರಕರಣಗಳು ದಾಖಲಾಗಬೇಕು’ ಎಂದೂ ಒತ್ತಾಯಿಸಿದ್ದಾರೆ.

‘ಉತ್ತರಪ್ರದೇಶದ ಮೌಲಾನಾ ಖಲೀಂ ಸಿದ್ದಿಕಿ ಅವರನ್ನು ಪೊಲೀಸರು ವಿನಾಕಾರಣ ಬಂಧಿಸಿದ್ದಾರೆ. ಮುಸ್ಲಿಂ ಧರ್ಮಗುರುಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ. ಈ ರೀತಿ ಸುಳ್ಳು ಕೇಸ್‌ ದಾಖಲಿಸುವುದನ್ನು ಉತ್ತರಪ್ರದೇಶ ಸರ್ಕಾರ ಕೈಬಿಡಬೇಕು’ ಎಂದೂ ಆಗ್ರಹಿಸಿದ್ದಾರೆ.

ಸಂಘಟನೆಯ ಯುವ ಘಟಕದ ಅಧ್ಯಕ್ಷ ಮೊಹಮದ್‌ ಅಜೀಮ್‌, ಮೈನುದ್ದೀನ್, ಓಮರ್‌ ಫಾರೂಖ್, ಶಂಶುದ್ದೀನ್‌ ಖತೀಬ್, ಆಝಮ್‌ ಪಟೇಲ್, ಅಹ್ಮದ್, ನೂರ್, ಮಜೀದ್ ಖುರೇಶಿ, ಫಯಾಜ್, ಅಜೀಮ್‌ ಶೇಖ್, ಅಜರ್ ಮುಬಾರಕ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT