ಬುಧವಾರ, ಸೆಪ್ಟೆಂಬರ್ 22, 2021
23 °C
ಸಚಿವ ಮುರುಗೇಶ ನಿರಾಣಿಗೆ ಮನವಿ

ಕಲಬುರ್ಗಿ: ಪ್ರಾದೇಶಿಕ ಆಯುಕ್ತರ ಕಚೇರಿ ರದ್ದತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಕಲಬುರ್ಗಿಯಲ್ಲಿರುವ ಪ್ರಾದೇಶಿಕ ಕಚೇರಿಗಳನ್ನು ರದ್ದು ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಪ್ರಾದೇಶಿಕ ಕಚೇರಿ ರದ್ದು ಮಾಡಕೂಡದು’ ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗದ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಯ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

‘ರಾಜ್ಯದಲ್ಲಿ ಪ್ರಾದೇಶಿಕ ಕಚೇರಿಗಳನ್ನು ರದ್ದುಪಡಿಸಲು ಈಗಾಗಲೇ ಕಂದಯ ಸಚಿವರು ಹೇಳಿಕೆ ನೀಡಿರುವುದು ಆಘಾತಕಾರಿ. ಬೆಂಗಳೂರು, ಮೈಸೂರು ವಿಭಾಗಗಳು ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲೇ ಇರುವುದರಿಂದ ಅಲ್ಲಿಯ ಪ್ರಾದೇಶಿಕ ಕಚೇರಿಗಳು ರದ್ದುಪಡಿಸಿದರೆ ಆ ಭಾಗಕ್ಕೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ, ಬಹು ದೂರವಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಇದರಿಂದ ಬಹಳಷ್ಟು ತೊಂದರೆಯಾಗುವುದು. ಇದನ್ನು ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

‘ಅತ್ಯಂತ ಹಿಂದುಳಿದ ಕಾರಣದಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಮತ್ತು ಪ್ರಾದೇಶಿಕ ಅಸಮಾನತೆ ನಿವಾರಿಸಲು ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಮಾಡಿ, ಜಾರಿಗೆ ತರಲಾಗಿದೆ. ಆಡಳಿತ ಯಂತ್ರವೇ ಕೇಂದ್ರೀಕರಣವಾದಾಗ ಈ ಭಾಗದ ಜನರಿಗೆ ನ್ಯಾಯ ಸಿಗುವುದು ಹೇಗೆ? ಅದರಂತೆ ಮುಖ್ಯಮಂತ್ರಿ ಅವರು ಈಗಾಗಲೇ ಕಲ್ಯಾಣ ಕರ್ನಾಟಕದ ಪ್ರತ್ಯೇಕ ಸಚಿವಾಲಯ ಮಾಡುವುದರ ಬಗ್ಗೆ ಘೋಷಿಸಿದ್ದಾರೆ. ಅದು ಕೂಡ ಅನುಷ್ಠಾನಕ್ಕೆ ಬಂದಿಲ್ಲ. ಅಂಥದರಲ್ಲಿ ವಿಜಯಭಾಸ್ಕರ ಸಮಿತಿಯ ಶಿಫಾರಸಿನಂತೆ ತೆರೆದ ಪ್ರಾದೇಶಿಕ ಆಯುಕ್ತರ ಕಚೇರಿ ಯಾವುದೇ ಕಾರಣಕ್ಕೂ ರದ್ದು ಮಾಡಕೂಡದು’ ಎಂದರು.

ಮನವಿ ಪತ್ರ ಸ್ವೀಕರಿಸಿದ ಸಚಿವ ನಿರಾಣಿ, ‘ವಿಜಯಭಾಸ್ಕರ ಸಮಿತಿಯ ವರದಿಯನ್ನು ಅಧ್ಯಯನ ನಡೆಸಿ, ಯಾವುದೇ ರೀತಿಯ ಅನ್ಯಾಯವಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಶಾಸಕರಾದ ಬಸವರಾಜ ಮತ್ತಿಮೂಡ, ಅವಿನಾಶ ಜಾಧವ ಹಾಗೂ ಸಮಿತಿಯ ಮುಖಂಡರಾದ ಲಿಂಗರಾಜ ಸಿರಗಾಪೂರ, ಡಾ. ಎ.ಎಸ್. ಭದ್ರಶೆಟ್ಟಿ, ಎಚ್.ಎಂ.ಹಾಜಿ, ಆಕಾಶ ರಾಠೋಡ, ಹೇಮಂತ ರಾಠೋಡ, ಶಾಮರಾವ ಪಾಟೀಲ, ರೋಹನಕುಮಾರ ಬೀದರ್‌, ಕಾರ್ತಿಕ ಬೀದರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.