ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘25 ಸಂಸದರು ಏನು ಮಾಡುತ್ತಿದ್ದೀರಿ: ಪ‍್ರಿಯಾಂಕ್‌

ರಾಜ್ಯದ ಪಾಲಿನ ಆಮ್ಲಜನಕ ಕೊಡಿಸಲು ಪ್ರಯತ್ನಿಸದ ಸಂಸದರು: ಆಕ್ರೋಶ
Last Updated 9 ಮೇ 2021, 4:38 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯದಲ್ಲಿ ಕೋವಿಡ್‌ನಿಂದ ಪ್ರತಿ ದಿನ ನೂರಾರು ಜನರು ಸಾಯುತ್ತಿದ್ದರೂ ರಾಜ್ಯಕ್ಕೆ ಅಗತ್ಯವಾದ ಆಮ್ಲಜನಕವನ್ನು ಕೇಂದ್ರದಿಂದ ಕೊಡಿಸಬೇಕಿದ್ದ ಬಿಜೆಪಿಯ 25 ಸಂಸದರು ಏನು ಮಾಡುತ್ತಿದ್ದಾರೆ. ಕತ್ತೆ ಕಾಯುತ್ತಿದ್ದಾರಾ’ ಎಂದು ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಜನರು ಒಳಿತನ್ನು ಬಯಸಿ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿದ್ದಾರೆ. ಆದರೆ, ಜನರ ಜೀವಗಳು ಹೋಗುತ್ತಿರುವ ವೇಳೆ ರಾಜ್ಯದಲ್ಲೇ ಉತ್ಪಾದನೆಯಾಗುವ ಆಮ್ಲಜನಕವನ್ನು ಇಲ್ಲಿಯೇ ಬಳಕೆಗೆ ಬಿಡಬೇಕಿದ್ದ ಕೇಂದ್ರ ಸರ್ಕಾರ ಅತಿ ಕಡಿಮೆ ಪ್ರಮಾಣ ನಿಗದಿ ಮಾಡಿದೆ’ ಎಂದರು.

‘ಕರ್ನಾಟಕ ಹೈಕೋರ್ಟ್‌ 1200 ಟನ್ ಆಮ್ಲಜನಕ ನೀಡುವಂತೆ ತಾಕೀತು ಮಾಡಿದಾಗಲೂ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಂತಿಮವಾಗಿ ಹೈಕೋರ್ಟ್‌ ನಿರ್ಧಾರ ಸರಿ ಎಂದಿದ್ದರಿಂದ ರಾಜ್ಯದ ಸಾವಿರಾರು ಜನರ ಜೀವ ಉಳಿಯಲಿದೆ’‌ ಎಂದರು.

‘ಲಸಿಕೆ ಕೊರತೆಯಿಂದ ಜಿಲ್ಲೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಅವರು ಲಸಿಕಾ ಉತ್ಸವಕ್ಕೆ ಅದು ಹೇಗೆ ಕರೆ ನೀಡಿದರು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 6,43,232 ಜನರಿಗೆ ಲಸಿಕೆ ನೀಡುವ ಗುರಿಯಿದ್ದು, ಮೊದಲ ಡೋಸ್ 2,10,280 ಮತ್ತು ಎರಡನೇ ಡೋಸ್‌ 45,947 ಜನರಿಗೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈವರೆಗೆ ಶೇ 22ರಷ್ಟು ಮಾತ್ರ ಪ್ರಗತಿಯಾಗಿದೆ. ಕೋವಿನ್‌ ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮುಂದಾದರೆ ಕರ್ನಾಟಕಕ್ಕೆ ಲಸಿಕೆಯೇ ಇಲ್ಲ ಎನ್ನುತ್ತದೆ. ಅದೇ, ಪ್ರಧಾನಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಸಾಕಷ್ಟು ಲಸಿಕೆ ಲಭ್ಯವಿದೆ. ಅವರ ಜೀವಗಳು ಕರ್ನಾಟಕದ ಜನರ ಜೀವನಕ್ಕಿಂತ ಶ್ರೇಷ್ಠವೇ’ ಎಂದು ಪ್ರಶ್ನಿಸಿದರು.

ಅವೈಜ್ಞಾನಿಕ ಮಾನದಂಡ: ‘ಲಸಿಕೆಯನ್ನು ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡುವಲ್ಲಿ ಅವೈಜ್ಞಾನಿಕ ಮಾನದಂಡ ರಾಜ್ಯ ಸರ್ಕಾರ ಅನುಸರಿಸುತ್ತಿದೆ. ದೊಡ್ಡ ಜಿಲ್ಲೆ ಕಲಬುರ್ಗಿಗೆ 2 ಸಾವಿರ ಲಸಿಕೆ ಮತ್ತು ಚಿಕ್ಕ ಜಿಲ್ಲೆ ಯಾದಗಿರಿಗೆ 3500 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ. ಜನಸಂಖ್ಯೆ ಅನುಗುಣವಾಗಿ ಹಂಚಿಕೆ ಮಾಡಬೇಕಿತ್ತು’ ಎಂದರು.

‘ಸೋಮವಾರದಿಂದ ಕಠಿಣ ಲಾಕ್‌ಡೌನ್ ಜಾರಿಯಾಗುವ ಕಾರಣ ಸಾಕಷ್ಟು ವಲಸೆ ಕಾರ್ಮಿಕರು ಗ್ರಾಮಗಳಿಗೆ ಮರಳಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಬೇಕು’ ಎಂದರು.

ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣು ಮೋದಿ, ಈರಣ್ಣ ಝಳಕಿ ಇದ್ದರು.

‘ಜೀವ ಉಳಿಸದ ಸರ್ಕಾರ’
‘ಸರ್ಕಾರಕ್ಕೆ ನಿಮ್ಮ ಜೀವ ಉಳಿಸುವ ಯೋಗ್ಯತೆ ಇಲ್ಲ. ಆದ್ದರಿಂದ ನಿಮ್ಮ ಹಾಗೂ ನಿಮ್ಮ ಕುಟುಂಬ ಸದಸ್ಯರ ಜೀವ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದೇ’ ಎನ್ನುತ್ತಾ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾವುಕರಾದರು.

‘ಮಾಸ್ಕ್ ಇಲ್ಲದೇ ಯಾರೂ ಮನೆಯಿಂದ ಹೊರ ಬರಬೇಡಿ. ಬಟ್ಟೆಯ ಮಾಸ್ಕ್ ಬಳಕೆಯಿಂದ ಹೆಚ್ಚು ಪ್ರಯೋಜನವಿಲ್ಲ. ಎನ್‌ 95 ಮಾದರಿಯ ಮಾಸ್ಕ್ ಬಳಸಿ’ ಎಂದು ಸಲಹೆ ನೀಡಿದರು.

‘ರಾಜ್ಯ ಸರ್ಕಾರಕ್ಕೆ ಜನರ ಜೀವನ ಕಾಯಬೇಕು ಎಂಬ ಕನಿಷ್ಠ ಕಾಳಜಿ ಇಲ್ಲ. ಆಮ್ಲಜನಕ ಸರಿಯಾಗಿ ಕೊಡುತ್ತಿಲ್ಲ. ರೆಮ್‌ಡಿಸಿವಿರ್‌ ಇಂಜೆಕ್ಷನ್ ನೀಡುತ್ತಿಲ್ಲ. ಸಹಾಯಕ ಔಷಧ ನಿಯಂತ್ರಕರು ಕಾಳಸಂತೆಯಲ್ಲಿ ಔಷಧಿ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಬೇಕಿದ್ದರೆ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ನಿಂದ ಎರಡು ಉಚಿತ ಆಂಬುಲೆನ್ಸ್
ಕೋವಿಡ್ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಜಿಲ್ಲಾ ಕಾಂಗ್ರೆಸ್‌ ಎರಡು ಆಂಬುಲೆನ್ಸ್‌ಗಳನ್ನು ನೀಡಿದೆ. ಸೋಮವಾರ ಪಕ್ಷದ ಕಚೇರಿ ಆವರಣದಲ್ಲಿ ಡಾ. ಶರಣಪ್ರಕಾಶ ಪಾಟೀಲ ಮತ್ತು ಪ್ರಿಯಾಂಕ್ ಖರ್ಗೆ ಅವರು ಆಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿದರು. ಲೋಕಾರ್ಪಣೆ ಮಾಡಿದರು.

‘24 ಗಂಟೆಯೂ ಆಂಬುಲೆನ್ಸ್ ಸೇವೆ ಲಭ್ಯವಿರಲಿದ್ದು, ಆಮ್ಲಜನಕ ಸಹಿತ ಐಸಿಯು ವ್ಯವಸ್ಥೆ ಹೊಂದಿದೆ. ಒಟ್ಟು 5 ಆಂಬುಲೆನ್ಸ್‌ಗಳನ್ನು ಜಿಲ್ಲೆಯ ಜನರಿಗೆ ನೀಡುವ ಯೋಚನೆ ಇದೆ. ಅಗತ್ಯವಿರುವವರು ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಆಂಬುಲೆನ್ಸ್ ಸೇವೆ ಪಡೆಯಬಹುದು’ ಎಂದರು.

ದೂರವಾಣಿ ಸಂಖ್ಯೆ: 63629 43441

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT