ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪ್ಪ ಕರ್ನಾಟಕದ ಭಗತ್‌ಸಿಂಗ್

ಕವಿವಿ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಶೆಟ್ಟರ ಹೇಳಿಕೆ
Last Updated 2 ಏಪ್ರಿಲ್ 2018, 10:56 IST
ಅಕ್ಷರ ಗಾತ್ರ

ಹಾವೇರಿ: ‘ದಂಡಿ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ ಪಾಲ್ಗೊಂಡ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವ ಅವರು ಕರ್ನಾಟಕದ ಭಗತಸಿಂಗ್’ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಶೆಟ್ಟರ ಹೇಳಿದರು.ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ನಗರದ ರಾಣೆಬೆನ್ನೂರು ರಸ್ತೆಯ ಹುತಾತ್ಮರ ವೀರಸೌಧದಲ್ಲಿ ಭಾನುವಾರ ನಡೆದ ‘ತ್ರಿವಳಿ ಹುತಾತ್ಮರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಹುತಾತ್ಮ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳರ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣ ಹೊಂದಿದ ಮಹಾನ್ ನಾಯಕರು. ಮೈಲಾರ ಮಹದೇವಪ್ಪ ಅವರು 1934ರಲ್ಲಿ ಹಿಂಡಲಗಾ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಅವರು ಮೋಟೆಬೆನ್ನೂರಿಗೆ ಅವರ ಮನೆಗೆ ಭೇಟಿ ನೀಡಿದ್ದರು. ಅಖಂಡ ಧಾರವಾಡ ಜಿಲ್ಲೆಯಲ್ಲಿ ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ, ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡ್ರ, ಹಳ್ಳೆಪ್ಪ ಗುದ್ಲಿಕೇರಿ ಸೇರಿದಂತೆ ಅನೇಕ ಹೋರಾಟಗಾರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು’ ಎಂದರು.

‘ಮೈಲಾರ ಮಹದೇವಪ್ಪ ಅವರು ಗಾಂಧೀಜಿ ಅವರ ಅಹಿಂಸಾ ತತ್ವಗಳನ್ನು ಅಳವಡಿಸಿಕೊಂಡಿದ್ದರು. ರಾಷ್ಟ್ರಕ್ಕಾಗಿ ನಿಸ್ವಾರ್ಥದಿಂದ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ’ ಎಂದರು. ಸ್ವಾತಂತ್ರ್ಯ ಹೋರಾಟಗಾರ ಭೀಮಪ್ಪ ಮಾತನಾಡಿ, ‘ಗಾಂಧೀಜಿ, ಲಾಲ್‌ಬಹದ್ದೂರ ಶಾಸ್ತ್ರಿ ಸೇರಿ ಅನೇಕರು ತಮ್ಮ ಖಾಸಗಿ ಬದುಕನ್ನು ಮರೆತು ದೇಶಕ್ಕಾಗಿ ನಿಸ್ವಾರ್ಥ ಮನೋಭಾವದಿಂದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ’ ಎಂದರು.ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ಈಸೂರಿನ 107 ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎನ್.ಎಸ್.ಹುಚ್ಚರಾಯಪ್ಪ ಅವರನ್ನು ಸನ್ಮಾನಿಸಲಾಯಿತು.

ಜ್ಯೋತಿ ಯಾತ್ರೆ: ತ್ರಿವಳಿ ಹುತಾತ್ಮರ ದಿನಾಚರಣೆಯ ಹಿನ್ನೆಲೆಯಲ್ಲಿ ಅವರ ಜನ್ಮಸ್ಥಳದಿಂದ ಜ್ಯೋತಿ ಯಾತ್ರೆ ನಡೆಯಿತು.ದಂಡಿ ಚಿತ್ರಗಳ ಪ್ರದರ್ಶನ: ಹರಿಹರದ ಕಲಾವಿದ ಜಿ.ಜೆ.ಮೆಹಂದಳೆ ಅವರು 25X16 ಅಳತೆಯ ಕ್ಯಾನವಾಸ್‌ ಮೇಲೆ ಹುತಾತ್ಮ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳರ ಅವರು ಚಿತ್ರವನ್ನು ಬಿಡಿಸಿದ್ದು ಹಾಗೂ ದಂಡಿಯಾತ್ರೆ ಚಿತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಆಕರ್ಷಕವಾಗಿತ್ತು.

ತಾಲ್ಲೂಕಿನ ನೆಗಳೂರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಪರಮೇಶ ಹರಕಂಗಿ, ಸಿದ್ದಪ್ಪ, ಕೆ.ಜಿ.ಕುಲಕರ್ಣಿ ಹಾಗೂ ಮೈಲಾರ ಮಹದೇವಪ್ಪನವರ ಮೊಮ್ಮಗ ಮಹದೇವಪ್ಪ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಗಂಗಾಧರ ನಂದಿ, ಹುತಾತ್ಮ ಮೈಲಾರ ಮಹದೇವಪ್ಪ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ವಿ.ಎನ್.ತಿಪ್ಪನಗೌಡ್ರ, ಆವರಗೇರಿ ರುದ್ರಮುನಿ, ಈರಣ್ಣ, ವಿರೂಪಾಕ್ಷಯ್ಯ ಹಿರೇಮಠ, ಮಲ್ಲಿಕಾರ್ಜುನ ಬಳ್ಳಾರಿ ಇದ್ದರು.

**

ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಯೋಧರ ಕೊಡುಗೆ ಅಪಾರ – 
ಡಾ.ಶಿವಾನಂದ ಶೆಟ್ಟರ, ಕವಿವಿ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT