ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
Last Updated 5 ಡಿಸೆಂಬರ್ 2019, 9:39 IST
ಅಕ್ಷರ ಗಾತ್ರ

ಕಲಬುರ್ಗಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗಳಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಒಂದು ಪ್ರಕರಣದಲ್ಲಿ ಅಪರಾಧಿಯು ಸೇಡಂ ತಾಲ್ಲೂಕಿನ ಕಡಚಿರ್ಲಾ ಗ್ರಾಮದವನಾದರೆ, ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಗೊಳಗಾದವನು ಹೈದರಾಬಾದ್‌ ಮೂಲದವನು.

ಮೊದಲ ಪ್ರಕರಣ: ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಹೈದರಾಬಾದ್‌ಗೆ ಕರೆದುಕೊಂಡು ಹೋಗಿ, ಬಾಲಕಿಯ ಇಷ್ಟಕ್ಕೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದು ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಕಡಚಿರ್ಲಾ ಗ್ರಾಮದ ಅಶೋಕ ಆಶಪ್ಪಾ ಎನಿಕ್ಯಾ ಎಂಬಾತನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಸೇಡಂ ತಾಲ್ಲೂಕಿನ ಕಡಚಿರ್ಲಾ ಗ್ರಾಮದ ಅಶೋಕ ನಿತ್ಯವೂ ಬಾಲಕಿಯ ಮನೆ ಎದುರು ಬಂದು ಮದುವೆಯಾಗುತ್ತೇನೆ ಎಂದು ಹೇಳುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದ. 1 ಡಿಸೆಂಬರ್‌ 2016ರಂದು ರಾತ್ರಿ 1ಕ್ಕೆ ಬೈಕ್‌ ಮೇಲೆ ಬಂದ ಅಶೋಕ ಬಲವಂತವಾಗಿ ಬಾಲಕಿಯನ್ನು ಹೈದರಾಬಾದ್‌ಗೆ ಹೊಂದಿಕೊಂಡಿರುವ ವಿಕಾಸನಗರದ ಬಂಡ್ಲಾಗುಡಾ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಮನೆಯೊಂದನ್ನು ಬಾಡಿಗೆಗೆ ಹಿಡಿದು ಅಲ್ಲಿಯೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಬಾಲಕಿಯ ತಂದೆ ಮುಧೋಳ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ತಮ್ಮಾರಾಯ ಆರ್‌. ಪಾಟೀಲ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಾದ–ವಿವಾದ ಆಲಿಸಿದ ನ್ಯಾಯಾಧೀಶ ಗೋಪಾಲ‍ಪ್ಪ ಎಸ್. ಅವರು ಪೋಕ್ಸೊ ಕಾಯ್ದೆಯಡಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ, ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 50 ಸಾವಿರ ದಂಡ, ಮತ್ತೊಂದು ಕಲಂನಡಿ 2 ವರ್ಷ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಜಿಲ್ಲಾ ಕಾನೂನು ನೆರವು ಸಮಿತಿಯಿಂದ ನೊಂದ ಬಾಲಕಿಗೆ ₹ 5 ಲಕ್ಷ ಪರಿಹಾರ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೊ) ಎಲ್‌.ವಿ.ಚಟ್ನಾಳಕರ ವಾದ ಮಂಡಿಸಿದ್ದರು.

ಎರಡನೇ ಪ್ರಕರಣ: ಬಾಲಕಿಯನ್ನ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಹೈದರಾಬಾದ್‌ ಮೂಲದ ವ್ಯಕ್ತಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಹೈದರಾಬಾದ್‌ ಮೂಲದ ರಾಮಚಂದ್ರ ಶಿಕ್ಷೆಗೊಳಗಾದ ಅಪರಾಧಿ. 2018ರಲ್ಲಿ ಮದುವೆಗೆಂದು ಕಲಬುರ್ಗಿಗೆ ಬಂದಿದ್ದ ರಾಮಚಂದ್ರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿದ್ದ.

ಕಲಬುರ್ಗಿಯಿಂದ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಮಹಾರಾಷ್ಟ್ರದ ನಿಲಂಗಾ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದ. ನಿಲಂಗಾ ಬಳಿ ಜಮೀನಿನಲ್ಲಿ ಬಾಲಕಿ ಮೇಲೆಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಅಲ್ಲಿಂದ ಶಿರಡಿ ಹಾಗೂ ತಿರುಪತಿಗೆ ಕರೆದೊಯ್ದು ಕುಟುಂಬಸ್ಥರ ಜತೆ ಸಂಪರ್ಕ ಸಾಧಿಸದಂತೆ ಕೂಡಿಟ್ಟಿದ್ದನು.‌‌

ಈ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲಪ್ಪ.ಎಸ್ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ನೊಂದ ಬಾಲಕಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ ₹ 5 ಲಕ್ಷ ರೂಪಾಯಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT