ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಗಾಂಧಿ ದೇಶ ದ್ರೋಹದ ಕೆಲಸ ಮಾಡಿದ್ದಾರೆ: ಸಿ.ಟಿ ರವಿ

Last Updated 14 ಮಾರ್ಚ್ 2023, 10:29 IST
ಅಕ್ಷರ ಗಾತ್ರ

ಕಲಬುರಗಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಹೊರಗಡೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿ, ಚಲೇ ಜಾವ್ ಚಳವಳಿಯ ಮೂಲಕ ಯಾರನ್ನು ದೇಶ ಬಿಟ್ಟು ಓಡಿಸಿದ್ದೇವೋ ಅವರನ್ನು ಮಧ್ಯ ಪ್ರವೇಶಿಸುವಂತೆ ಆಹ್ವಾನಿಸಿದ್ದಾರೆ. ಇದು ದೇಶ ದ್ರೋಹಕ್ಕೆ ಸಮನಾದ ಕೆಲಸ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮಲ್ಲಿ ವೈಚಾರಿಕ ಭಿನ್ನತೆ ಮತ್ತು ಬಹುರಾಜಕೀಯ ಪಕ್ಷಗಳ ವ್ಯವಸ್ಥೆ ಇದ್ದಾಗಲೂ ಯಶಸ್ವಿಯಾಗಿ ಸಮಿಶ್ರ ಸರ್ಕಾರಗಳನ್ನು ನಡೆಸಿದ ಸಾಕಷ್ಟು ಉದಾಹರಣೆಗಳಿವೆ. ಇಂತಹ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ದೇಶದ ಹೊರಗಡೆ ಹೋದಾಗ ಪ್ರಶಂಸಿಸಬೇಕು. ದುರ್ದೈವದ ಸಂಗತಿ ಎಂದರೆ, ದೇಶದ ಅತ್ಯಂತ ಹಿರಿಯ ಪಕ್ಷದ ನಾಯಕರೊಬ್ಬರು ಇಂಗ್ಲೆಂಡ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಕುರಿತು ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹಾಸ್ಯ ಮಾಡುವಂತೆ ಮಾತನಾಡಿದ್ದು ಖಂಡನೀಯ. ಕೂಡಲೇ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು’ ಎಂದರು.

‘ಪ್ರಸ್ತುತ ದಿನಗಳಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಲ್ಲ. ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಂಡಿಲ್ಲ, ವಿಪಕ್ಷದ ನಾಯಕರನ್ನು ಬಂಧಿಸಿ ಜೈಲಿಗೆ ಹಾಕಿಲ್ಲ. ಆದರೂ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುವ ಮಾತುಗಳನ್ನು ಹೇಳಿ, ಮಧ್ಯ ಪ್ರವೇಶಕ್ಕೆ ವಿದೇಶಿ ಶಕ್ತಿಯ ನೆರವು ಕೇಳಿದ್ದು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್‌ಗೆ ಇರುವಂತಹ ನಂಬಿಕೆ ಎಂತಹದ್ದು ಎಂಬುದನ್ನು ತೋರಿಸುತ್ತದೆ. ತನ್ನ ಕುಟುಂಬದ ಕೈಯಲ್ಲಿ ಅಧಿಕಾರ ಇದ್ದರೆ ಮಾತ್ರ ಪ್ರಜಾಪ್ರಭುತ್ವ, ಜನಸಾಮಾನ್ಯರು ಅಧಿಕಾರ ಹಿಡಿದರೆ ಅದು ಅಸಹಿಷ್ಣುತೆ ಆಗುತ್ತದೆ ಎಂಬುದು ಕಾಂಗ್ರೆಸ್ ನಂಬಿಕೆ’ ಎಂದು ಅವರು ಟೀಕಿಸಿದರು.

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ರಾಜ್ಯಗಳಿಗೆ ತೆರಳುತ್ತಾರೆ. ಮೋದಿ ಅವರು ತಮಿಳುನಾಡಿಗೆ ಹತ್ತು ಬಾರಿ ಭೇಟಿ ನೀಡಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಹೆಚ್ಚು ಪ್ರೀತಿ ಇದೆ. ಚುನಾವಣೆ ಇರುವುದರಿಂದ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಕ್ಕೆ ಬರುತ್ತಿದ್ದಾರೆ. ಇದರಿಂದ ಬಿಜೆಪಿಗೆ ಶೇ 5ರಷ್ಟು ಮತಗಳು ಹೆಚ್ಚಾಗಬಹುದು ಎಂಬ ವಿಶ್ವಾಸ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಅಂತಹ ಯಾವುದೇ ನಾಯಕರು ಇಲ್ಲ. ಅವರ ನಾಯಕರು ಬಂದು ಏನಾದರು ಮಾತನಾಡಿದರೆ, ಬರುವ ಮತಗಳು ಬೇರೆಡೆ ಹೋಗತ್ತವೆ ಎಂದು ಭಯ ಪಡುತ್ತಿದ್ದಾರೆ. ಅವರಲ್ಲಿ ನಾಯಕರು ಇಲ್ಲದ ಕಾರಣ ಇನ್ನೊಬ್ಬರನ್ನು ಟೀಕಿಸುತ್ತಾರೆ’ ಎಂದು ವ್ಯಂಗ್ಯವಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ್ ಜಿ.ನಮೋಶಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT