ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೈಲು: ಕಲ್ಯಾಣ ಕರ್ನಾಟಕಕ್ಕೆ ಮತ್ತೆ ಸುಣ್ಣ

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಂದ ತಾರತಮ್ಯ ಆರೋಪ
Last Updated 15 ನವೆಂಬರ್ 2019, 2:24 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿಯಲ್ಲಿ ವಿಭಾಗೀಯ ಕಚೇರಿ ಸ್ಥಾಪಿಸುವ ಪ್ರಯತ್ನಗಳು ಕ್ಷೀಣಿಸುತ್ತಿರುವಂತೆಯೇ ಹೊಸ ರೈಲುಗಳನ್ನು ಓಡಿಸುವ ವಿಚಾರದಲ್ಲಿಯೂ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬರುತ್ತಿವೆ.

ಇವಕ್ಕೆ ಪುಷ್ಟಿ ಕೊಡುವಂತೆ ಕಳೆದ ಐದು ತಿಂಗಳಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಹೊರತುಪಡಿಸಿ ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಜಿಲ್ಲೆಗಳಿಗೆ ಹೊಸ ರೈಲುಗಳನ್ನು ಮಂಜೂರು ಮಾಡಿದೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈಲ್ವೆ ಹೋರಾಟ ಸಮಿತಿ ಸದಸ್ಯರು ರಾಜ್ಯದವರೇ ಆದ ಸಚಿವ ಸುರೇಶ ಅಂಗಡಿ ತಮ್ಮ ಕ್ಷೇತ್ರ ಬೆಳಗಾವಿ ಹಾಗೂ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿಗೆ ಮಾತ್ರ ಹೊಸ ರೈಲುಗಳನ್ನು ತರಲು ಮುತುವರ್ಜಿ ವಹಿಸುತ್ತಿದ್ದಾರೆ. ಆ ಮೂಲಕ ರೈಲ್ವೆ ಸೌಲಭ್ಯ ನೀಡುವಲ್ಲಿಯೂ ಪ್ರಾದೇಶಿಕ ಅಸಮಾನತೆಯನ್ನು ಮಾಡಲಾಗುತ್ತಿದೆ ಎಂದು ಟೀಕಿಸುತ್ತಿದ್ದಾರೆ.

ಐದು ತಿಂಗಳಲ್ಲಿ ನೈರುತ್ಯ ರೈಲ್ವೆಯು ಹುಬ್ಬಳ್ಳಿ–ಚೆನ್ನೈ ಬೈವೀಕ್ಲಿ ಎಕ್ಸ್‌ಪ್ರೆಸ್‌, ವಿಜಯಪುರ–ಯಶವಂತಪುರ ವಿಶೇಷ ರೈಲು, ಬೆಳಗಾವಿ–ಬೆಂಗಳೂರು ಎಕ್ಸ್‌ಪ್ರೆಸ್, ಶಿವಮೊಗ್ಗ–ರೇಣಿಗುಂಟ, ಶಿವಮೊಗ್ಗ–ಚೆನ್ನೈ ಎಕ್ಸ್‌ಪ್ರೆಸ್‌ ರೈಲು, ಶಿವಮೊಗ್ಗ–ಮೈಸೂರು ಜನಸಾಧಾರಣ್ ರೈಲು, ವಿಜಯಪುರ–ಮಂಗಳೂರು ರೈಲು, ಅಂಬೇವಾಡಿ–ಧಾರವಾಡ ಪ್ಯಾಸೆಂಜರ್‌, ಹುಬ್ಬಳ್ಳಿ–ಗಂಗಾವತಿ, ಹರಿಹರ–ಕೊಟ್ಟೂರು ಪ್ಯಾಸೆಂಜರ್ ರೈಲು ಹೊಸಪೇಟೆವರೆಗೆ ವಿಸ್ತರಣೆ, ಹುಬ್ಬಳ್ಳಿ–ಅಶೋಕಪುರಂ ಎಕ್ಸ್‌ಪ್ರೆಸ್ ರೈಲು ಬೆಳಗಾವಿವರೆಗೆ ವಿಸ್ತರಣೆ, ಯಶವಂತಪುರ–ಹರಿಹರ ಇಂಟರ್‌ಸಿಟಿ ರೈಲು ವಾಸ್ಕೊವರೆಗೆ ವಿಸ್ತರಣೆ, ವಾಸ್ಕೊ–ಬೆಳಗಾವಿ ಬೈವೀಕ್ಲಿ ಪ್ಯಾಸೆಂಜರ್, ಮೈಸೂರು–ಬೆಂಗಳೂರು ಮೆಮು, ಬೆಂಗಳೂರು ಸುತ್ತಲಿನ ಡೆಮು ರೈಲುಗಳ ಓಡಾಟವನ್ನು ಹೆಚ್ಚಿಸಲಾಗಿದೆ.

ಆದರೆ, ಇದೇ ಆಸಕ್ತಿಯನ್ನು ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್‌, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತೋರಿಸಿಲ್ಲ ಎಂದು ಆರೋಪಿಸುತ್ತಾರೆ ರೈಲ್ವೆ ಹೋರಾಟಗಾರ ಸುನೀಲ ಕುಲಕರ್ಣಿ.

ಕಲಬುರ್ಗಿ–ಹೈದರಾಬಾದ್‌ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲನ್ನು ಸೇಡಂ, ಚಿತ್ತಾಪುರ ಮಳಖೇಡದಲ್ಲಿ ನಿಲುಗಡೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರೂ ಇನ್ನೂ
ಈಡೇರಿಲ್ಲ.

ಕಲಬುರ್ಗಿಯಲ್ಲಿ ರೈಲ್ವೆ ವಿಭಾಗ ಕಚೇರಿ ಸ್ಥಾಪಿಸಬೇಕು ಎಂಬ ಬೇಡಿಕೆಗೆ ಈವರೆಗೂ ಸ್ಪಂದನೆ ಇಲ್ಲ. ರಾತ್ರಿ ವೇಳೆ ಬೀದರ್ ಅಥವಾ ಕಲಬುರ್ಗಿಯಿಂದ ಯಾದಗಿರಿ, ರಾಯಚೂರು, ಗುಂತಕಲ್, ಧರ್ಮಾವರಂ ಮಾರ್ಗವಾಗಿ ಹೊಸ ರೈಲು ಓಡಿಸಬೇಕು. ವಿಜಯಪುರ–ಮಂಗಳೂರು ರೈಲನ್ನು ಬೀದರ್ ಅಥವಾ ಕಲಬುರ್ಗಿವರೆಗೆ ವಿಸ್ತರಿಸಬೇಕು. ಗಡ್ವಾಲ್‌ ಮಾರ್ಗವಾಗಿ ಹೈದರಾಬಾದ್‌–ರಾಯಚೂರು ಇಂಟರ್‌ಸಿಟಿ ರೈಲು ಆರಂಭಿಸಬೇಕು. ಹೊಸಪೇಟೆ–ಬೆಂಗಳೂರು ಮಧ್ಯೆ ಇಂಟರ್‌ಸಿಟಿ ರೈಲು, ಬೀದರ್–ಕಲಬುರ್ಗಿ ಮಧ್ಯೆ ಹೆಚ್ಚುವರಿ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಇನ್ನೂವರೆಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸೊಲ್ಲಾಪುರದಲ್ಲಿ ದಿನಗಟ್ಟಲೇ ನಿಲ್ಲುವ ಸೊಲ್ಲಾಪುರ–ಮುಂಬೈ ರೈಲು ಸೇರಿದಂತೆ ಹಲವು ರೈಲುಗಳನ್ನು ಕಲಬುರ್ಗಿವರೆಗೆ ವಿಸ್ತರಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ.

ರೈಲ್ವೆ ಇಲಾಖೆಯಿಂದ ನಿರ್ಲಕ್ಷ್ಯ ಮುಂದುವರಿದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಈಗಾಗಲೇ ಟ್ವಿಟ್ಟರ್‌ ಅಭಿಯಾನ ಮಾಡಿದ್ದೇವೆ ಎನ್ನುವುದುರೈಲ್ವೆ ಹೋರಾಟಗಾರಸುನೀಲ ಕುಲಕರ್ಣಿ ಅವರ ಎಚ್ಚರಿಕೆಯ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT