ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ತೊಗರಿ ಬೆಳೆ ಚೇತರಿಕೆ

ತಾಲ್ಲೂಕಿನ ಕೆಲವೆಡೆ ಮಳೆ; ಹತ್ತಿಗೆ ತಾಮ್ರ ರೋಗ
Last Updated 6 ಅಕ್ಟೋಬರ್ 2019, 14:14 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನಲ್ಲಿ ಇದೀಗ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ಹತ್ತಿ, ತೊಗರಿ ಬೆಳೆಗಳು ಚೇತರಿಸಿಕೊಳ್ಳುತ್ತಿವೆ.

ತಾಲ್ಲೂಕಿನಲ್ಲಿ ಪ್ರಸ್ತುತ ವರ್ಷ ಮುಂಗಾರಿನಲ್ಲಿ ರೈತರು ಹೆಚ್ಚಿನ ಕ್ಷೇತ್ರದಲ್ಲಿ ತೊಗರಿ, ನಂತರದಲ್ಲಿ ಹತ್ತಿಯನ್ನು ಬಿತ್ತನೆ ಮಾಡಿದ್ದಾರೆ. ತೊಗರಿ ಬಿತ್ತನೆಯಾದ ನಂತರ ಆಗಸ್ಟ್‌ನಲ್ಲಿ ಮಳೆ ಕೊರತೆಯಿಂದ ಬೆಳವಣಿಗೆ ಕುಂಠಿತಗೊಂಡಿತ್ತು. ಈಗ ಸುರಿಯುತ್ತಿರುವ ಮಳೆಯು ತೊಗರಿಗೆ ವರದಾನವಾಗಿದ್ದು ಬೆಳೆ ಚೇತರಿಸಿಕೊಂಡು ಹೂ ಬಿಡತೊಡಗಿದೆ. ಅದರ ಜೊತೆಗೆ ಕೀಟ ಬಾಧೆ ಆರಂಭವಾಗಿದೆ. ಹೀಗಾಗಿ ರೈತರು ಅಲ್ಲಲ್ಲಿ ಕೀಟನಾಶಕ ಸಿಂಪಡನೆ ಮಾಡುತ್ತಿದ್ದಾರೆ.

ತಾಮ್ರ ರೋಗ: ಹತ್ತಿ ಬೆಳೆಯಲ್ಲಿ ಒಂದೆಡೆ ತೇವಾಂಶ ಕೊರತೆಯಿಂದ ಹೂವು, ಕಾಯಿ ಉದುರಿ ಹೋಗಿದ್ದರೆ ಇನ್ನೊಂದೆಡೆ ತಾಮ್ರ ರೋಗ ಅಂಟಿಕೊಂಡಿದ್ದರಿಂದ ಬೆಳೆ ಕುಂಠಿತವಾಗಿದೆ.

ಮಳೆ–ಬೆಳೆ ಪರಿಸ್ಥಿತಿ ಕುರಿತು ಸಹಾಯಕ ಕೃಷಿ ನಿರ್ದೇಶಕ ಮೊಹ್ಮದ ಖಾಸೀಮ ಹಾಗೂ ತಾಂತ್ರಿಕ ಅಧಿಕಾರಿ ಸರ್ದಾರ ಭಾಷಾ ನದಾಫ್ ಭಾನುವಾರ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 99142 ಹೆಕ್ಟೇರ್ ಬಿತ್ತನೆಯಾಗಿದೆ. ಆ ಪೈಕಿ 64142 ಹೆಕ್ಟೇರ್‌ನಲ್ಲಿ ತೊಗರಿ ಮತ್ತು 5124 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ’ ಎಂದರು.

‘ಸೆಪ್ಟೆಂಬರ್‌ ತಿಂಗಳಲ್ಲಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ 166.1 ಮಿ.ಮೀ ಆಗಬೇಕಾಗಿತ್ತು. ಆದರೆ ಕೇವಲ 28.55 ಮಿ.ಮೀ ಮಳೆಯಾಗಿದೆ. 137.55 ಮಿ.ಮೀ ಮಳೆ ಕೊರತೆ ಇದೆ’ ಎಂದರು.

‌‘ಆಗಸ್ಟ್‌ ತಿಂಗಳಲ್ಲಿ ವಾಡಿಕೆ ಮಳೆ 391.3 ಮಿ.ಮೀ ಆಗಬೇಕಾಗಿತ್ತು. ಆ ಪೈಕಿ 288.6 ಮಿ.ಮೀ ಮಳೆಯಾಗಿದೆ. ಆಗಸ್ಟ್‌ನಲ್ಲಿ 102.43 ಮಿ.ಮೀ ಮಳೆ ಕಡಿಮೆಯಾಗಿದೆ’ ಎಂದು ತಿಳಿಸಿದರು.

ರೈತರು ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ, ಕುಸುಬಿ, ಅಗಸಿ ಬಿತ್ತುವ ತಯಾರಿಯಲ್ಲಿದ್ದಾರೆ. ಕೃಷಿ ಇಲಾಖೆಯವರು ಸಮಯಕ್ಕೆ ಅನುಸಾರವಾಗಿ ಜೋಳ, ಕಡಲೆ ಬೀಜವನ್ನು ಸಹಾಯ ಧನದಲ್ಲಿ ವಿತರಿಸಬೇಕು’ ಎಂದು ರೈತರು ಒತ್ತಾಯಿಸುತ್ತಿದ್ದಾರೆ.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಕಡಲೆ ಬೀಜ ಮುಗಿದು ಹೋಗಿದ್ದು, ತಕ್ಷಣ ಸರ್ಕಾರ ಪೂರೈಕೆ ಮಾಡಬೇಕು. ಸಹಾಯಧನದಲ್ಲಿ ನೀಡುತ್ತಿರುವ ಕಡಲೆ ಬೀಜ ಮಾರುಕಟ್ಟೆಯಲ್ಲಿ ದೊರೆಯುವ ಕಡಲೆ ಬೀಜ ಬೆಲೆಗೂ ಯಾವುದೇ ವ್ಯತ್ಯಾಸ ಇಲ್ಲ. ಶೇ75ರ ಸಹಾಯ ಧನದಲ್ಲಿ ಕಡಲೆ ಬೀಜ ವಿತರಿಸಬೇಕು’ ಎಂದು ರೈತ ಮುಖಂಡರಾದ ಚಂದರಾಮ ಬಳಗುಂಡೆ, ಚಂದ್ರಶೇಖರ ಕರಜಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT