ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ನುಗ್ಗಿದ ನೀರು; ಇಡೀ ರಾತ್ರಿ ಜಾಗರಣೆ

ಚಿಂಚೋಳಿ ತಾಲ್ಲೂಕಿನ ದೇಗಲಮಡಿ: ಮಳೆಗೆ ನಿದ್ದೆಬಿಟ್ಟ ಸಿದ್ದೇಶ್ವರ ನಗರದ ಜನ
Last Updated 14 ಅಕ್ಟೋಬರ್ 2019, 16:25 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ದೇಗಲಮಡಿಯಲ್ಲಿ ಭಾರಿ ಮಳೆ ಸುರಿದು ಮನೆಗಳಿಗೆ ನೀರು ನುಗ್ಗಿದ್ದರಿಂದ ಗ್ರಾಮದ ಹೊಸ ಬಡಾವಣೆ ಸಿದ್ದೇಶ್ವರ ನಗರ (ಬಡಗ್ಯಾನ ಕಲ್‌)ದ ನಿವಾಸಿಗಳು ಭಾನುವಾರ ರಾತ್ರಿ ನಿದ್ದೆ ಬಿಟ್ಟು ಜಾಗರಣೆ ನಡೆಸಿದರು.

ಸಿದ್ದೇಶ್ವರ ನಗರದ ಮೇಲ್ಭಾಗದಲ್ಲಿ ಭಾರಿ ಮಳೆಯಾಗಿದೆ. ಬಡಗ್ಯಾನಕಲ್‌ ನಾಲೆಯಲ್ಲಿ ನೀರು ಹರಿದುಹೋಗದೆ ಸಿದ್ದೇಶ್ವರ ಬಡಾವಣೆ ಮನೆಗಳಿಗೆ ನುಗ್ಗಿದೆ.

‘ನಿವಾಸಿಗಳು ನಿದ್ದೆಬಿಟ್ಟು ನೀರಿನಲ್ಲಿಯೇ ರಾತ್ರಿ ಕಳೆದಿದ್ದಾರೆ. ದವಸ ಧಾನ್ಯ, ಬಟ್ಟೆ ಬರೆಗಳು ನೀರಿನಲ್ಲಿ ನೆನೆಯದಂತೆ ಕಾಪಾಡುವುದರ ಜತೆಗೆ ನಮ್ಮ ವಯಸ್ಸಾದ ತಂದೆ ತಾಯಿಯನ್ನು ಟೇಬಲ್‌ ಮೇಲೆ ಕೂಡಿಸಿ ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರ ಹಾಕಿದ್ದೇವೆ’ ಎಂದು ಸಂತ್ರಸ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಕಡೆ ಮಕ್ಕಳ ಪುಸ್ತಕ, ಬಟ್ಟೆ ಬರೆಗಳು, ದವಸ ಧಾನ್ಯಗಳು ತೊಯ್ದಿವೆ’ ಎಂದು ಪಂಚನಾಮೆ ನಡೆಸಿದ ಗ್ರಾಮ ಲೆಕ್ಕಾಧಿಕಾರಿ ಆರೀಫ್‌ ತಿಳಿಸಿದ್ದಾರೆ.

ಬಡಗ್ಯಾನಕಲ್‌ ನಾಲೆಯು ಕಳೆಯಿಂದ ತುಂಬಿಕೊಂಡಿದೆ. ಸ್ಥಳೀಯರೊಬ್ಬರು ಹಲವು ವರ್ಷಗಳ ಹಿಂದೆ ಕೆಸುವಿನ ಗಡ್ಡೆ ತಂದು ಬೆಳೆಸಿದ್ದರು. ಈಗ ಅದು ಸುತ್ತಮುತ್ತಲಿನ ಪ್ರದೇಶಕ್ಕೆ ಹಬ್ಬಿ ನಾಲೆ ತುಂಬಾ ಕೆಸು ಬೆಳೆದಿದೆ. ನೀರಿನ ರಭಸಕ್ಕೆ ಕೆಸುವಿನ ಗಿಡಗಳು ಗಡ್ಡೆ ಸಮೇತ ಕಿತ್ತು ಕೊಚ್ಚಿ ಹೋಗಿ ದೇಗಲಮಡಿ ಹಳೆ ಊರು ಮತ್ತು ಹೊಸ ಊರಿನ ಮಧ್ಯೆ ನಿರ್ಮಿಸಿದ ಸೇತುವೆಯ ಕೊಳವೆ ಬಳಿ ನಿಂತುಕೊಂಡು ನೀರು ಹರಿಯದಂತೆ ಹೋಗದಂತೆ ತಡೆದಿವೆ. ನೀರು ಅಲ್ಲಿಯೇ ಸಂಗ್ರಹವಾಗಿ ಬಚ್ಚಲಿನ ಮೋರಿಯ ಮೂಲಕ ಮನೆಗಳಿಗೆ ನುಗ್ಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಿತ್ರಶೇಖರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರಿ ಮಳೆ ಕಾರಣ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಜನರು ಕತ್ತಲಿನಲ್ಲೇ ನಾಲೆಯಲ್ಲಿನ ಕಸಕಡ್ಡಿಗಳನ್ನು ತೆರವುಗೊಳಿಸಿದರು. ನೀರು ಹರಿದುಹೋಗುವಂತೆ ನೋಡಿಕೊಂಡರು’ ಎಂದು ನಾಗಶೆಟ್ಟಿ ಉಡುಮನಳ್ಳಿ ಹೇಳಿದರು.

ಸಿದ್ದಪ್ಪ ಬಸಲಾಪುರ, ಮೊಗಲಪ್ಪ ಕೊರಡಂಪಳ್ಳಿ, ಕಲ್ಲಮ್ಮ ಪರೀಟ್‌, ಸಂತೋಷ ಮುತ್ಯಪನೋರ್‌, ಅಣ್ಣಾರಾವ ಹೆಳವರ ಮತ್ತು ನಾಗಶೆಟ್ಟಿ ಉಡುಮನಳ್ಳಿ ಅವರ ಮನೆಗಳಿಗೆ ನೀರು ನುಗ್ಗಿದೆ.

ಮಳೆ ವಿವರ (ಮಿಲಿ ಮೀಟರ್‌ಗಳಲ್ಲಿ): ತಾಲ್ಲೂಕಿನ ಕುಪನೂರು–59, ಗರಗಪಳ್ಳಿ–57.5, ಮಿರಿಯಾಣ– 57.5, ಚಿಮ್ಮಾಈದಲಾಯಿ –47, ಸುಲೇಪೇಟ–42, ದೇಗಲಮಡಿ–38.5, ಐನೋಳ್ಳಿ–30, ಚಂದನಕೇರಾ–27, ಚಿಂಚೋಳಿ–24, ನಾಗಾಈದಲಾಯಿ–17, ಕೊಳ್ಳೂರು–17, ಅಣವಾರ–23, ಪೋಲಕಪಳ್ಳಿ–18.5, ಚಿಮ್ಮನಚೋಡ–19, ಹಸರಗುಂಡಗಿ–19, ಗಡಿಕೇಶ್ವಾರ್‌–18, ನಿಡಗುಂದಾ–22, ಕೆರೋಳ್ಳಿ–15 ಹಾಗೂ ಕಾಳಗಿ ತಾಲ್ಲೂಕಿನ ಹಲಚೇರಾ– 18, ಮೋಘಾ– 34.5, ಪಸ್ತಪುರ–34.5, ರುಮ್ಮನಗೂಡ–27.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT