ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರದಲ್ಲಿ ಕಾನೂನು, ಸುವ್ಯವಸ್ಥೆ ಕುಸಿತ: ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಆರೋಪ

Last Updated 10 ಡಿಸೆಂಬರ್ 2019, 12:34 IST
ಅಕ್ಷರ ಗಾತ್ರ

ಸುರಪುರ: ‘ಸುರಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಲೆ, ದೌರ್ಜನ್ಯ, ದಬ್ಬಾಳಿಕೆ, ಗುಂಡಾಗಿರಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ರಕ್ಷಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ’ ಎಂದು ದೂರಿದರು.

‘ತಾಲೂಕಿನ ಮಾರ್ನಾಳ್ ಕ್ರಾಸ್-1 ಕುರೇಕನಾಳ್-1, ಬರದೇವನಾಳ 2, ಹೊರಟ್ಟಿ ಗ್ರಾಮದಲ್ಲಿ ಮೃತದೇಹ ಪತ್ತೆ, ನಾಲ್ವತವಾಡದಲ್ಲಿ ಒಂದು ಕೊಲೆ ಘಟನೆ ನಡೆದಿವೆ. ಈ ಪ್ರಕರಣಗಳಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಕೌಂಟರ್ ಕೇಸ್ ಪಡೆದು ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ’ ಎಂದರು.

‘ಬೊಮ್ಮನಹಳ್ಳಿ, ಲಕ್ಷ್ಮೀಪುರದಲ್ಲಿ ಮಾರಾಣಾಂತಿಕ ಹಲ್ಲೆಗಳ ಘಟನೆಗಳು ನಡೆದು ಎರಡು ವರ್ಷ ಕಳೆದರೂ ಇದುವರೆಗೂ ಯಾರನ್ನೂ ಬಂಧಿಸಿಲ್ಲ’ ಎಂದು ದೂರಿದರು.

‘ಕಳೆದ ನವೆಂಬರ್ 23ರಂದು ನನ್ನ ಜನ್ಮ ದಿನದ ಅಂಗವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಕೊಡೇಕಲ್ ಗ್ರಾಮದಲ್ಲಿ ನನ್ನ ಭಾವಚಿತ್ರದ ಕಟೌಟ್‍ಗಳನ್ನು ಕಟ್ಟುತ್ತಿದ್ದರು. ಈ ವೇಳೆ ಶಾಸಕ ರಾಜೂಗೌಡ ಸಹೋದರ 15-20 ಜನರ ಗುಂಪು ಕಟ್ಟಿಕೊಂಡು ನನ್ನ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ’ ಎಂದು ಹೇಳಿದರು.

‘3 ಬೈಕ್‍ಗಳನ್ನ ಧ್ವಂಸಗೊಳಿಸಿ ಸುಟ್ಟು ಹಾಕಿದ್ದಾರೆ. ಈ ಕುರಿತು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇಷ್ಟು ದಿನಗಳಾದರೂ ಪೊಲೀಸರು ಯಾವೊಬ್ಬ ಆರೋಪಿಯನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉದ್ದೇಶಪೂ ರ್ವಕವಾಗಿ ಸುಳ್ಳು ಕೌಂಟರ್ ಕೇಸ್ ದಾಖಲಿಸಿಕೊಂಡಿ ದ್ದು ನನ್ನ ಮಗ ರಾಜಾ ವೇಣುಗೋಪಾಲನ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದಾರೆ. ಇದನ್ನು ಗಮನಿಸಿದರೆ ಪೊಲೀಸರು ಪ್ರಕರಣ ಮುಚ್ಚಿ ಹಾಕುವ ವ್ಯವಸ್ಥಿತ ತಂತ್ರ ರೂಪಿಸಿದ್ದಾರೆ’ ಎಂದು ಕಿಡಿ ಕಾರಿದರು.

‘ಅಲ್ಲಿಯ ಪೊಲೀಸ್ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಘಟನೆ ನಡೆದಿಲ್ಲ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಕೊಡೇಕಲ್‍ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ನಿರಂಕುಶ ಪ್ರಭುತ್ವದ ಆಡಳಿತ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಷ್ಟೆಲ್ಲ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರು ಶಾಸಕನ ಸಹೋದರ ಎಂಬ ಕಾರಣಕ್ಕೆ ಆರೋಪಿಯನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಎಲ್ಲ ಪ್ರಕರಣಗಳ ತನಿಖೆಗೆ ಸ್ಥಳೀಯ ಅಧಿಕಾರಿಯನ್ನು ನೇಮಿಸಿದರೆ ತನಿಖೆ ಪಾರದರ್ಶಕವಾಗಿ ನಡೆಯುವುದಿಲ್ಲ. ಜನರಿಗೆ ನ್ಯಾಯ ಸಿಗುವುದಿಲ್ಲ. ಕಾರಣ ಬೇರೆ ತಾಲ್ಲೂಕಿನ ಅಧಿಕಾರಿಯನ್ನು ನೇಮಿಸಬೇಕು. ಒಂದು ವಾರದಲ್ಲಿ ಆರೋಪಿಗಳನ್ನು ಬಂಧಿಸಬೇಕು. ಪಿಎಸ್‍ಐ ಅಮಾನತು ಗೊಳಿಸಬೇಕು. ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸ್‍ಗಳನ್ನು ಕೈ ಬಿಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ವಿಠ್ಠಲ ಯಾದವ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ರಾಜಾ ವೇಣುಗೋಪಾಲನಾಯಕ, ಮುದಿಗೌಡ ಕುಪ್ಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT