ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗಾಗಿ ಮತ್ತೆ ಒಗ್ಗಟ್ಟು ಪ್ರದರ್ಶಿಸೋಣ: ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ

ರಾಜ್ಯೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ
Last Updated 1 ನವೆಂಬರ್ 2020, 13:18 IST
ಅಕ್ಷರ ಗಾತ್ರ

ಕಲಬುರ್ಗಿ: ‘ಲಕ್ಷಾಂತರ ಕನ್ನಡಿಗರು ಸೇರಿಕೊಂಡು ಹೋರಾಟಿ ಅಖಂಡ ಕರ್ನಾಟಕ ಕಟ್ಟಿದ್ದಾರೆ. ‌ಅವರ ಹೋರಾಟ ಸಾರ್ಥಕ ಮಾಡಬೇಕಾದರೆ ನಾವಿಂದು,‌ ರಾಜ್ಯ ಸರ್ವತೋಮುಖ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು’ ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಕರೆ ನೀಡಿದರು.

ಇಲ್ಲಿನ ನಗರೇಶ್ವರ ಪ್ರೌಢಶಾಲೆಯಲ್ಲಿ ನಡೆದ 65ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

‘ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯೋಣ’ ಎಂದೂ ಅವರು ತಮ್ಮ ಭಾಷಣದಲ್ಲಿ ಆಶಯ ಹೊರಹಾಕಿದರು.

‘ಮೌರ್ಯರು, ಕದಂಬರು, ಹೊಯ್ಸಳರು, ವಿಜಯನಗರದ ಅರಸರು, ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರಿನ ಒಡೆಯರು ಮುಂತಾದ ಅನೇಕ ರಾಜಮನೆತನಗಳು ಈ ನಾಡನ್ನು ಆಳಿವೆ. ಈ ಮನೆತನಗಳ ಕೊಡುಗೆ ನಾಡಿಗೆ ಅಪಾರವಾಗಿದೆ. ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಷರೀಫ್ ಅವರಂಥ ಸಂತ ಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರು ಸೇರಿದಂತೆ ಶರಣರು, ವಚನಕಾರರು, ಬಾಳಿ ಬದುಕಿದ ನೆಲ ನಮ್ಮದು’ ಎಂದು ಜಿಲ್ಲಾಧಿಕಾರಿ ಅಭಿಮಾನ ಮೆರೆದರು.‌

ಶರಣರನ್ನು ನೆನೆದ ಡಿ.ಸಿ: ‘ಭಕ್ತಿ, ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸದ ಜಗತ್ತಿನ ಅಪೂರ್ವ ಚಳವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಕಲ್ಯಾಣ ಕರ್ನಾಟಕ ಇದಾಗಿದೆ’ ಎಂದು ಜೋತ್ಸ್ನಾ ಅವರು ತಮ್ಮ ರಾಜ್ಯೋತ್ಸವ ಭಾಷಣದಲ್ಲಿ ಸ್ಮರಿಸಿದರು.

‘ಕವಿರಾಜ ಮಾರ್ಗ’ ಎಂಬ ಕನ್ನಡಕ್ಕೆ ಮೊಟ್ಟ ಮೊದಲ ಕನ್ನಡದ ಗ್ರಂಥ ನೀಡಿದ್ದು ನೃಪತುಂಗನ ನಾಡು ಕಲಬುರ್ಗಿ ಜಿಲ್ಲೆ ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಕವಿ ಅಮೋಘವರ್ಷ ನೃಪತುಂಗನು ‘ಕಾವೇರಿಯಿಂದ ಗೋದಾವರಿವರೆಗೆ’ ಕನ್ನಡ ನಾಡು ವಿಸ್ತರಿಸಿದೆ ಎಂಬ ಐತಿಹಾಸಿಕ ಸತ್ಯ ಹೇಳುವ ಮೂಲಕ ಕನ್ನಡಿಗರ ಸಾರ್ವಭೌಮ ಆಡಳಿತ ಹೇಗಿತ್ತು’ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ’ ಎಂದರು.

‘ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಅ.ನ.ಕೃಷ್ಣರಾಯರು, ಆಲೂರು ವೆಂಕಟರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಬಳ್ಳಾರಿ ಸಿದ್ದಮ್ಮ, ಪಾಟೀಲ ಪುಟ್ಟಪ್ಪ ಮುಂತಾದವರನ್ನು, ಅಸಂಖ್ಯಾತ ಲೇಖಕ-ಲೇಖಕಿಯರನ್ನು, ಸಂಘ ಸಂಸ್ಥೆಗಳನ್ನು, ಪತ್ರಿಕೋದ್ಯಮಿಗಳನ್ನು, ಕನ್ನಡ ಕಟ್ಟಾಳುಗಳನ್ನು ಸ್ಮರಿಸುವುದು ಇಂದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದರು.

ಇದಕ್ಕೂ ಮುನ್ನ ಜಿಲ್ಲೆಯ ವಿವಿಧ ಸರ್ಕಾರಿ ಪ್ರೌಢಶಾಲೆಯ ಶಾಲೆಯ ಸಂಗೀತ ಶಿಕ್ಷಕರು, ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಪೊಲೀಸ್ ಪೆರೇಡ್ ಕಮಾಂಡರ್ ಹಣಮಂತ ಹಾಗೂ ತಂಡದವರು ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ, ಶಾಸಕರಾದ ಖನೀಜ್ ಫಾತೀಮಾ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಪ್ರಾದೇಶಿಕ ಆಯುಕ್ ಡಾ.ಎನ್.ವಿ. ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪಿ.ರಾಜಾ, ಡಿಸಿಪಿ ಡೆಕ್ಕಾ ಕಿಶೋರಬಾಬು, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಹಾಗೂ ಗಣ್ಯರು ಇದ್ದರು.‌‌

ಕಾರಾಗೃಹದಲ್ಲಿ ರಾಜ್ಯೋತ್ಸವ
ಕಲಬುರ್ಗಿ:
65ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಭಾನುವಾರ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೇಂದ್ರ ಕಾರಾಗೃಹದ ಪ್ರಭಾರಿ ಅಧೀಕ್ಷಕರಾದ ವಿ. ಕೃಷ್ಣಮೂರ್ತಿ ಅವರು ನಾಡ ದೇವತೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.

ನಂತರ ಅವರು ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು. ನಮ್ಮ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ಕೊಟ್ಟು, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಪಾರದರ್ಶಕವಾಗಿ ಬಳಸಬೇಕು’ ಹೇಳಿದರು.

ರಾಜ್ಯೋತ್ಸವ ಅಂಗವಾಗಿ ಕಾರಾಗೃಹದ ಬಂದಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೈದ್ಯಾಧಿಕಾರಿ ಡಾ.ಅಣ್ಣಾರಾವ ಪಾಟೀಲ, ಜೈಲರ್‌ಗಳಾದ ಸೈನಾಜೆ ಎಂ. ನಿಗೇವಾನ್, ಗೋಪಾಲಕೃಷ್ಣ ಕುಲಕರ್ಣಿ, ಅರ್ಜುನ್ ಸಿಂಗ್ ಚವ್ಹಾಣ, ಸಿಬ್ಬಂದಿ ಹಾಗೂ ಬಂದಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT