ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನವಮಿ: ಏಪ್ರಿಲ್‌ 10ರಂದು ಶೋಭಾಯಾತ್ರೆ

Last Updated 8 ಏಪ್ರಿಲ್ 2022, 12:38 IST
ಅಕ್ಷರ ಗಾತ್ರ

ಕಲಬುರಗಿ: ‘ಈ ಬಾರಿ ರಾಮನವಮಿ ಅಂಗವಾಗಿ ರಾಮನವಮಿ ಉತ್ಸವ ಸಮಿತಿ ವತಿಯಿಂದ ಏಪ್ರಿಲ್‌ 10ರಂದು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಶ್ರೀರಾಮನ 15 ಅಡಿ ಎತ್ತರದ ಮೂರ್ತಿ ಹಾಗೂ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಕಳುಹಿಸುವ ಬೆಳ್ಳಿಯ ಇಟ್ಟಿಗೆಯ ಮೆರವಣಿಗೆ ಕೂಡ ನಡೆಯಲಿದೆ’ ಎಂದು ಸಮಿತಿ ಅಧ್ಯಕ್ಷ ರಾಜು ಭವಾನಿ ತಿಳಿಸಿದರು.

‘ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ನಗರೇಶ್ವರ ಶಾಲೆಯಿಂದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಹುಮನಾಬಾದ್ ಬೇಸ್, ಚೌಕ್‌ ಪೊಲೀಸ್ ಠಾಣೆ ಸರ್ಕಲ್, ಸೂಪರ್‌ ಮಾರ್ಕೆಟ್ ಮಾರ್ಗವಾಗಿ ಸಂಚರಿಸಿ ಜಗತ್‌ ವೃತ್ತದಲ್ಲಿ ಬಂದು ಇದು ಸಮಾಪನಗೊಳ್ಳಲಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿ ಎಂಟನೇ ಶೋಭಾಯಾತ್ರೆ ನಡೆಯಲಿದೆ. ಯಾತ್ರೆಯ ನಂತರ ಯಾವುದೇ ವೇದಿಕೆ ಕಾರ್ಯಕ್ರಮ ಆಯೋಜಿಸಿಲ್ಲ. ಹೀಗಾಗಿ, ಸುಮಾರು 30 ಸಾವಿರ ಜನರನ್ನು ಸೇರಿಸಿ ಯಾತ್ರೆಯನ್ನೇ ಅದ್ಧೂರಿಯಾಗಿ ಮಾಡಲು ಉದ್ದೇಶಿಸಲಾಗಿದೆ. ಮೆರವಣಿಗೆಯಲ್ಲಿ ಆರು ಕೆ.ಜಿ. ತೂಕ ಬೆಳ್ಳಿಯ ಇಟ್ಟಿಗೆ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ರಾಮಮಂದಿರ ನಿರ್ಮಾಣಕ್ಕೆ ಕಳುಹಿಸುವ ಪೂರ್ವದಲ್ಲಿ ಭಕ್ತರಿಗೆ ದರ್ಶನ ಮಾಡಿಸಬೇಕು ಎಂಬುದು ನಮ್ಮ ಉದ್ದೇಶ. ಈ ಇಟ್ಟಿಗೆಯನ್ನು 2020ರ ಆಗಸ್ಟ್‌ 5ರಂದು (ರಾಮಜನ್ಮ ಭೂಮಿಯಲ್ಲಿ ಪೂಜೆ ನಡೆದ ದಿನ) ಸಿದ್ಧಪಡಿಸಲಾಗಿದೆ. ಆದರೆ, ಎರಡು ವರ್ಷಗಳಿಂದ ಕೋವಿಡ್‌ ಇದ್ದ ಕಾರಣ ಮೆರವಣಿಗೆ, ದರ್ಶನ ಸಾಧ್ಯವಾಗಲಿಲ್ಲ’ ಎಂದರು.

‘ನಗರದ ವಿವಿಧ ಹಿಂದೂ ಸಂಘಟನೆಗಳೂ ರಾಮನವಮಿ ಅಂಗವಾಗಿ ಮೆರವಣಿಗೆ ಆಯೋಜಿಸಿವೆ. ಎಲ್ಲ ಮೆರವಣಿಗೆಗಳೂ ಕೇಂದ್ರ ಸಮಿತಿಯನ್ನೇ ಬಂದು ಸೇರಲಿವೆ. ವಿವಿಧ ವಾದ್ಯಮೇಳಗಳು ಮೇಳೈಸಲಿವೆ. ವಿಶೇಷವಾಗಿ, ಕೋವಿಡ್‌ ಸಂಕಷ್ಟದಲ್ಲಿ ಜನಸೇವೆ ಮಾಡಿದ ಪತಂಜಲಿ ಯೋಗ ತಂಡದ ಮಹಿಳೆಯರನ್ನು ಸನ್ಮಾನಿಸಿ, ಮೆರವಣಿಗೆ ಮಾಡಲಾಗುವುದು’ ಎಂದು ತಿಳಿಸಿದರು.

‘ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ದಾಕ್ಷಾಯಿಣಿ ಎಸ್‌. ಅಪ್ಪ, ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸುವರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಲ್ಲೆಯ ವಿವಿಧ ಮಠಾಧೀಶರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮೆರವಣಿಗೆಯಲ್ಲಿ ನೀರು, ತಂಪು ಪಾನೀಯ ವಿತರಣೆ, ಅನ್ನದಾಸೋಹ ಕೂಡ ನೀಡಲಾಗುವುದು’ ಎಂದು ಅವರು ಹೇಳಿದರು.

ಸಮಿತಿ ಮುಖಂಡರಾದ ಲಕ್ಷ್ಮಿಕಾಂತ ಸ್ವಾದಿ, ದೀಪಕ ಬಲದಾವಾ, ಶಿವಾ ಗುತ್ತೇದಾರ, ಪಿಂಟು ಸಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT