ಗುರುವಾರ , ಜನವರಿ 27, 2022
21 °C
ಹಳಬನಾದಷ್ಟು ಹೊಳೆಯುವ ಕಲಾವಿದ ಕೃತಿ ಬಿಡುಗಡೆ

ಕಲಬುರಗಿ: ‘ಸವಾಲುಗಳನ್ನು ಮೀರಿ ಬೆಳೆದ ಕಲಾವಿದ ಜೋಶಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಸಂಗೀತ, ಸಾಹಿತ್ಯ, ಚಿತ್ರಕಲೆಗಳು ಬದುಕಿನಲ್ಲಿ ಬರುವ ದುಃಖವನ್ನು ಹೋಗಲಾಡಿಸಲು ಇರುವ ಸಾಧನಗಳು’ ಎಂದು ಸಾಹಿತಿ ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು.

ಫ್ರೆಂಡ್ಸ್ ಗ್ರೂಪ್ ಹಾಗೂ ರೋಟರಿ ಕ್ಲಬ್ ವತಿಯಿಂದ ಸೋಮವಾರ ನಗರದ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಗರಾಜ ಕುಂಬಾರ ರಚಿಸಿದ ಕಲಾವಿದ ರಮೇಶ ಜೋಶಿ ಅವರ ಜೀವನ ಆಧಾರಿತ ಕೃತಿ ‘ಹಳಬನಾದಷ್ಟು ಹೊಳೆಯುವ ಕಲಾವಿದ’ ಮತ್ತು ‘ನಾದಪ್ರಿಯನ ನಾದಯಾನ’ ಸಾಕ್ಷಚಿತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಮೇಶ ಜೋಶಿ ಅವರ ಬೆಳವಣಿಗೆಯ ಹಿಂದೆ ಹಲವರ ಪ್ರೋ ತ್ಸಾಹ ಇದೆ. ಅತ್ಯಂತ ಕ್ರಿಯಾಶೀಲ ವಾಗಿರುವ ನಾಗರಾಜ ಕುಂಬಾರ ಅವರು ಜೋಶಿ ಅವರ ಕುರಿತು ಕೃತಿ, ಸಾಕ್ಷಚಿತ್ರ ರಚಿಸಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

‘ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿದ್ದರೂ ರಮೇಶ ಜೋಶಿ ಗಾಯಕರಾಗಿ ಎಲ್ಲರ ಮನ ಗೆದ್ದಿದ್ದಾರೆ‌. ಬಡತನದ ಬವಣೆಯಲ್ಲಿಯೂ ಎಲ್ಲ ಸವಾಲುಗಳನ್ನು ಮೀರಿ ಬೆಳೆದಿದ್ದಾರೆ’ ಎಂದರು.

ಪ್ರಹ್ಲಾದ ಕಡೇಚೂರ ಮಾತನಾಡಿ, ‘ಸತತ ಪ್ರಯತ್ನ, ಛಲದಿಂದ ಸಾಧನೆ ಮಾಡಬಹುದು ಎಂಬುದಕ್ಕೆ ರಮೇಶ ಜೋಶಿ ಅವರೇ ಸಾಕ್ಷಿ’ ಎಂದರು.

‘ಕಲಬುರಗಿಯ ಕಿಶೋರ್‌ಕುಮಾರ್‌ ಎಂದೇ ರಮೇಶ ಅವರು ಖ್ಯಾತರಾಗಿದ್ದಾರೆ. ಅವರ ಕುರಿತು ರಚನೆಯಾಗಿರುವ ಕೃತಿ ನವಿರಾದ ಭಾವ, ಸ್ಥಳೀಯ ಭಾಷಾ ಸೊಗಡಿನಲ್ಲಿ ಮೂಡಿ ಬಂದಿದೆ. ಈ ಕೃತಿಯು ಕಲಾವಿದರ ಬದುಕಿನ ವಾಸ್ತವತೆಯನ್ನು ತಿಳಿಸುತ್ತದೆ’ ಎಂದು ಹೇಳಿದರು.

ರೋಟರಿ ಕ್ಲಬ್ ಅಧ್ಯಕ್ಷ ಶಂಕರ ಕೋಡ್ಲಾ ಮಾತನಾಡಿ, ‘ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಕಲಾವಿದರು, ಸಾಧಕರು ಇದ್ದಾರೆ. ಪ್ರಚಾರದ ಕೊರತೆ ಯಿಂದ ಅವರು ಬೆಳಕಿಗೆ ಬಂದಿಲ್ಲ. ಅಂತಹ ಕಲಾವಿದರ ಬಗ್ಗೆಯೂ ಕೃತಿಗಳು ರಚನೆಯಾಗಲಿ’ ಎಂದರು.

ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಅವರು ಸಾಕ್ಷಚಿತ್ರ ಬಿಡುಗಡೆ ಮಾಡಿದರು. ನಿವೃತ್ತ ಶಿಕ್ಷಕ ಕೇಶವರಾವ ಜಂಗೆ ಕಾರ್ಯಕ್ರಮ ಉದ್ಘಾಟಿಸಿದರು.

ಕಲಾವಿದ ಶಿವಕುಮಾರ ಸ್ವಾಮಿ, ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ಕೆ.ಪಿ.ಗಿರಿಧರ, ಕಲಾವಿದ ನಾಗರಾಜ ಕುಂಬಾರ ಇದ್ದರು. ಡಾ.ಸದಾಶಿವ ಜಿಡಗೆಕರ, ಡಾ.ರಾಜಶೇಖರ ಎಕ್ಕಳ್ಳಿ, ಡಾ.ಎಸ್.ಕೆ.ಕಮಲಾಪುರಕರ, ರಾಘವೇಂದ್ರ ಕುಲಕರ್ಣಿ, ಎಸ್.ಪಿ.ಸುಳ್ಳದ, ಎ.ಎ.ಮಂಠಾಳ ಅವರನ್ನು ಸನ್ಮಾನಿಸಲಾಯಿತು. ‌ರಂಜೀಶಾ ಜಿ.ಕುಲಕರ್ಣಿ ನಿರೂಪಿಸಿದರು.

*

ಪುಸ್ತಕ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ ರಮೇಶ ಜೋಶಿ ಅವರು ತಮ್ಮ ಬಗ್ಗೆಯೇ ಕೃತಿ ರಚನೆಯಾಗುವ ಮಟ್ಟಕ್ಕೆ ಬೆಳೆದು ಸಾಧನೆ ಮಾಡಿದ್ದಾರೆ.
-ಪ್ರೊ.ಶಿವರಾಜ ಪಾಟೀಲ, ರೋಟರಿ ಕ್ಲಬ್ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.