ಭಾನುವಾರ, ಏಪ್ರಿಲ್ 2, 2023
31 °C
ಏಪ್ರಿಲ್‌ನಿಂದ ಇಲ್ಲಿಯವರೆಗೆ 5 ಕೋಟಿ ಮಾನವ ದಿನ ಸೃಷ್ಟಿ: ಸಚಿವ ಈಶ್ವರಪ್ಪ

ನರೇಗಾ: ಕರ್ನಾಟಕಕ್ಕೆ ಮೊದಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: 'ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಳೆದ ವರ್ಷ 13 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ನರೇಗಾದಡಿ ಅತಿ ಹೆಚ್ಚು ಉದ್ಯೋಗ ನೀಡಿದ ರಾಜ್ಯಗಳ ಪೈಕಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ‘ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹರ್ಷ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘13 ಕೋಟಿ ಮಾನವ ದಿನಗಳು ಮುಗಿದ ಬಳಿಕ ಮತ್ತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಮತ್ತೆ ಹೆಚ್ಚುವರಿ ಮಾನವ ದಿನಗಳ ಸೃಷ್ಟಿಗೆ ₹ 800 ಕೋಟಿ ಬಿಡುಗಡೆ ಮಾಡಿದರು. ಪ್ರಸಕ್ತ ವರ್ಷದ‌ಲ್ಲಿಯೂ ರಾಜ್ಯ ಉತ್ತಮ ಸಾಧನೆ ಮಾಡುತ್ತಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ 5 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ’ ಎಂದು ವಿವರಿಸಿದರು.

‘ಮೊದಲು ನರೇಗಾದಡಿ ಕೆಲಸ ಮಾಡಿದ ಕಾರ್ಮಿಕರಿಗೆ ಆರು ತಿಂಗಳಾದರೂ ವೇತನ ಪಾವತಿಯಾಗುತ್ತಿರಲಿಲ್ಲ. ಆದರೆ, ಈಗ 15 ದಿನಗಳಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೇ ಹಣ ಜಮಾ ಆಗುತ್ತಿದೆ. ಇದನ್ನು ಅಧಿಕಾರಿಗಳಿಂದ ಮಾಹಿತಿ ಖಚಿತಪಡಿಸಿಕೊಂಡ ಬಳಿಕವೇ ಹೇಳುತ್ತಿದ್ದೇನೆ’ ಎಂದರು.

‘ಒಬ್ಬರಿಗೆ ವರ್ಷದಲ್ಲಿ 200 ದಿನಗಳವರೆಗೆ ಉದ್ಯೋಗ ನೀಡಬೇಕು ಎಂಬ ಪ್ರಸ್ತಾವವಿದೆ. ಜೊತೆಗೆ, ಕೂಲಿ ಹಣವನ್ನೂ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

ಜಂಟಿ ಸದನ ಸಮಿತಿ: ಗ್ರಾಮೀಣ ಪ್ರದೇಶದಲ್ಲಿ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ವಿಭಾಗದಿಂದ ಅಳವಡಿಸಲಾದ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ ಎಂಬ ಮಾಹಿತಿ ಇದೆ. ಘಟಕಗಳ ನಿರ್ವಹಣೆಯ ಹೊಣೆ ಹೊತ್ತುಕೊಂಡ ಸಂಸ್ಥೆಗಳೂ ತಮ್ಮ ಕೆಲಸ ನಿಭಾಯಿಸಿಲ್ಲ. ಇದರ ಬಗ್ಗೆ ತನಿಖೆ ನಡೆಸಲು ಅಧಿವೇಶನ ಆರಂಭವಾದ ಬಳಿಕ ಜಂಟಿ ಸದನ ಸಮಿತಿಯನ್ನು ರಚಿಸಲಾಗುವುದು’ ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು