ಭಾನುವಾರ, ಜನವರಿ 24, 2021
17 °C
ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರಿಂದ ಕಲಬುರ್ಗಿಯಲ್ಲಿ ಪ್ರತಿಭಟನೆ

ತೊಗರಿಗೆ ₹ 8 ಸಾವಿರ ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ರೈತರ ಬೆಳೆ ನಷ್ಟವಾಗಿದ್ದು, ಅಳುದುಳಿದ ತೊಗರಿಯಲ್ಲೇ ಬದುಕು ಕಟ್ಟಿಕೊಳ್ಳಬೇಕಿದೆ. ಆದ್ದರಿಂದ ತೊಗರಿಗೆ ₹ 8 ಸಾವಿರ ಕ್ವಿಂಟಲ್‌ನಂತೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮೂರು ತಿಂಗಳ ಬೆಳೆಯಾದ ಹೆಸರು ಬೆಳೆಗೆ ಸರ್ಕಾರ ₹ 7050 ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ಆರು ತಿಂಗಳ ಬೆಳೆಯಾದ ತೊಗರಿಗೆ ಕೇಂದ್ರ ಸರ್ಕಾರ ₹ 6 ಸಾವಿರ ನಿಗದಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ಡಾ. ಎಂ.ಎಸ್‌. ಸ್ವಾಮಿನಾಥನ್ ವರದಿ ಶಿಫಾರಸಿನಂತೆ ಕನಿಷ್ಠ ₹ 8750 ನಿಗದಿ ಮಾಡಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ತೊಗರಿ ಖರೀದಿ ಕೇಂದ್ರದಲ್ಲಿ ರೈತರು ತೊಗರಿ ಹಾಕಿದ ರಸೀದಿ ಮೇಲೆ ರೈತರಿಗೆ ತುರ್ತಾಗಿ ಹಣ ಸಿಗುವಂತಾಗಲು ಬ್ಯಾಂಕ್ ಮೂಲಕ ಶೇ 80ರಷ್ಟು ತ್ವರಿತವಾಗಿ ಸಾಲ ವಿತರಿಸುವಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಇದರಿಂದ ಕೇಂದ್ರದಿಂದ ಹಣ ಬರುವವರೆಗೂ ಕಾಯುವುದು ತಪ್ಪುತ್ತದೆ. ಕಷ್ಟದಲ್ಲಿರುವ ರೈತರ ಕೈಗೆ ಹಣ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಇಲಾಖೆ ವರದಿಯಂತೆ ಅಪೌಷ್ಠಿಕತೆ ಹೆಚ್ಚಾಗಿದೆ. ಆದ್ದರಿಂದ ಕುಟುಂಬದ ಒಬ್ಬ ಸದಸ್ಯರಿಗೆ ಒಂದು ಕೆ.ಜಿ.ಯಂತೆ ತೊಗರಿ ಬೇಳೆಯನ್ನು ಪಡಿತರದ ಮೂಲಕ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಎಂ.ಬಿ. ಸಜ್ಜನ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ರಾಜ್ಯ ಉಪಾಧ್ಯಕ್ಷೆ ಗೌರಮ್ಮ ಪಾಟೀಲ, ಮಲ್ಲಣ್ಣಗೌಡ ಬನ್ನೂರ, ಪಾಂಡುರಂಗ ಮಾವಿನಕರ, ಶಾಂತಪ್ಪ ಪಾಟೀಲ, ಸುಧಾಮ ಧನ್ನಿ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.