ಸಾವಿಗೀಡಾದ ರೈತರಿಗೆ ಶ್ರದ್ಧಾಂಜಲಿ ಸಭೆ

ಕಲಬುರ್ಗಿ: ಕೇಂದ್ರದ ಮೂರು ಕೃಷಿ ನೀತಿಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಸಾವಿಗೀಡಾದ 30ಕ್ಕೂ ಅಧಿಕ ರೈತರ ಗೌರವಾರ್ಥ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್)ಯಿಂದ ಜಿಲ್ಲೆಯಲ್ಲಿ 40ಕ್ಕೂ ಅಧಿಕ ಗ್ರಾಮಗಳಲ್ಲಿ ಶ್ರದ್ಧಾಂಜಲಿ ಸಭೆಗಳನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ ರೈತರು ಸಂತಾಪವನ್ನು ಸೂಚಿಸಿದರು. ಇದೇ ಸಂದರ್ಭದಲ್ಲಿ ‘ರೈತರ ಪ್ರತಿಜ್ಞೆ’ಯನ್ನು ಮಾಡಿ ರೈತರ ಆಂದೋಲನವನ್ನು ಬಲಪಡಿಸುವುದಾಗಿ ಮತ್ತು ಮುಂದುವರೆಸುವುದಾಗಿ ಸಂಕಲ್ಪ ತೊಡಲಾಯಿತು.
ಆರ್‌ಕೆಎಸ್ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ. ಮಾತನಾಡಿ, ‘ಈ ಹೋರಾಟದಲ್ಲಿ ದೆಹಲಿಯ ಕೊರೆಯುವ ಚಳಿಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಬಿಡಾರ ಹೂಡಿರುವ ಉತ್ತರ ಭಾರತದ ಸುಮಾರು ಎರಡು ಕೋಟಿಗೂ ಅಧಿಕ ರೈತರು ಕೇಂದ್ರ ಸರ್ಕಾರದ ಕರಾಳ ರೈತ ವಿರೋಧಿ ಮಸೂದೆಗಳ ವಿರುದ್ಧ ಧಿರೋದಾತ್ತವಾಗಿ ಹೋರಾಡುತ್ತಿದ್ದಾರೆ. ಈ ಹೋರಾಟವನ್ನು ಮುರಿಯಲು ಒಂದೆಡೆ ಕೇಂದ್ರ ಸರ್ಕಾರವು ಹರಸಾಹಸವನ್ನು ಮಾಡುತ್ತಾ ಎಲ್ಲಾ ಪ್ರಜಾತಾಂತ್ರಿಕ ರೂಢಿಗಳನ್ನು ಮಣ್ಣು ಮಾಡಿ ರೈತರ ಮೇಲೆ ದೌರ್ಜನ್ಯವೆಸುತ್ತಿದೆ’ ಎಂದು ಟೀಕಿಸಿದರು.
‘ಸರ್ಕಾರವು ರೈತ ನಾಯಕರೊಂದಿಗೆ 6–7 ಸುತ್ತಿನ ಮಾತುಕತೆಯ ನಂತರ ತನ್ನ ಬಂಡವಾಳಶಾಹಿಗಳ ಪರವಾದ ನಿಷ್ಠೆಯನ್ನು ಮುಂದುವರೆಸುತ್ತಾ ರೈತರೊಂದಿಗಿನ ಮೊಂಡುತನವನ್ನು ಪ್ರದರ್ಶಿಸಿದೆ. ಅಲ್ಲದೇ ದೇಶಪ್ರೇಮಿ ರೈತರಿಗೆ ಕಳಂಕ ಹಚ್ಚುವ ಅನೈತಿಕ ಕೆಲಸವನ್ನು ಮಾಡುತ್ತಿದೆ. ಆದರೂ ಧೀರ ರೈತ ಹೋರಾಟಗಾರರು ಸರ್ಕಾರದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿ ತಮ್ಮ ಐಕ್ಯತೆಯನ್ನು ಹಾಗೂ ತಮ್ಮ ಪ್ರಬಲ ವಿರೋಧವನ್ನು ಪ್ರದರ್ಶಿಸುತ್ತಿದ್ದಾರೆ. ಈ ಕರಾಳ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸುವವರೆಗೂ ನಾವು ಯಾವ ಬೆಲೆಯನ್ನು ಕೊಟ್ಟಾದರೂ ಹೋರಾಡುತ್ತೇವೆ. ಸಾವನ್ನೂ ಎದುರಿಸುತ್ತೇವೆ’ ಎಂದು ದೆಹಲಿಯಲ್ಲಿ ರೈತರು ತಮ್ಮ ದೃಢಸಂಕಲ್ಪವನ್ನು ಎತ್ತಿ ಹಿಡಿದಿದ್ದಾರೆ’ ಎಂದರು.
ಮುಖಂಡರಾದ ಎಸ್.ಎಂ.ಶರ್ಮಾ, ವಿ.ಜಿ.ದೇಸಾಯಿ, ಗೌರಮ್ಮ ಸಿ.ಕೆ. ಇತರರು ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.