ರೌಡಿಶೀಟರ್‌ಗಳ ಪರೇಡ್; ಎಚ್ಚರಿಕೆ

ಕಲಬುರಗಿ: ನಗರದಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಎಚ್ಚೆತ್ತುಕೊಂಡ ಪೊಲೀಸರು ಶನಿವಾರ ರೌಡಿಗಳ ಪರೇಡ್ ನಡೆಸಿ, ಎಚ್ಚರಿಕೆ ನೀಡಿದರು.
ನಗರ ಪೊಲೀಸ್ ಆಯುಕ್ತಾಲಯದ ಅಧಿಕಾರಿಗಳು ವಿವಿಧ ತಂಡ ಮಾಡಿಕೊಂಡು ರೌಡಿಶೀಟರ್‌ಗಳು ಹಾಗೂ ಪುಡಿರೌಡಿಗಳು ಎಂದು ಗುರುತಿಸಿದವರ ಮನೆಗಳ ಮೇಲೆ ದಾಳಿ ಮಾಡಿದರು. ಎಲ್ಲರನ್ನೂ ಕರೆತಂದು ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಪರೇಡ್ ನಡೆಸಿದರು.
ರೌಡಿಶೀಟರ್‌ಗಳ ಪ್ರಕರಣ, ಹಿನ್ನೆಲೆ ಹಾಗೂ ಸದ್ಯ ಅವರ ಚಟುವಟಿಕೆಗಳ ವಿಚಾರಣೆ ನಡೆಸಿದ ಡಿಸಿಪಿ ಅಡ್ಡೂರು ಶ್ರೀನಿವಾಸಲು, ‘ಯಾವುದೇ ಅಕ್ರಮಗಳಲ್ಲಿ ಭಾಗಿಯಾದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತೀರಿ. ನಿಮಗೆ ಸುಧಾರಿಸಿಕೊಳ್ಳಲು ಉತ್ತಮ ಅವಕಾಶ ನೀಡಿದ್ದೇವೆ. ಈಗಲೇ ಬದಲಾಗಿ ಹೊಸ ಜೀವನ ಆರಂಭಿಸಿ, ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದು ಕಂಡುಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ನಗರದಲ್ಲಿ ನಡೆದ ಕೆಲವೊಂದು ದುಷ್ಕೃತ್ಯಗಳಲ್ಲಿ ರೌಡಿಶೀಟರ್‌ಗಳೂ ಭಾಗಿಯಾಗು ತ್ತಿರುವುದು ಕಂಡುಬಂದಿದೆ. ಅವರ ಮೇಲಿನ ಆರೋಪಗಳು ಸಾಬೀತಾದರೆ ಗಡಿಪಾರು ಮಾಡಲಾಗುವುದು. ಪ್ರತಿಯೊಬ್ಬ ರೌಡಿ ವಾರಕ್ಕೊಮ್ಮೆ ಆಯಾ ಠಾಣೆಗೆ ತೆರಳಿ ಸಹಿ ಹಾಕಬೇಕು. ಯಾವುದೇ ಕಾರಣಕ್ಕೂ ನಗರ ಬಿಟ್ಟು ಹೊರಗೆ ಹೋಗುವಂತಿಲ್ಲ. ಹೋಗಬೇಕಾದ ಅನಿವಾರ್ಯ ಬಂದಾಗ ಪೊಲೀಸ್ ಅಧಿಕಾರಿಗಳ ಪರವಾನಗಿ ಪಡೆಯುವುದು ಕಡ್ಡಾಯ. ಈ ಕ್ರಮಗಳಲ್ಲಿ ಯಾವುದನ್ನಾದರೂ ನಿರ್ಲಕ್ಷ್ಯ ಮಾಡಿದರೆ ಅದನ್ನು ಅಶಿಸ್ತು ಎಂದು ಪರಿಗಣಿಸಿ ಬಂಧಿಸಬೇಕಾಗುತ್ತದೆ’ ಎಂದೂ ಅವರು ಖಡಕ್ ಎಚ್ಚರಿಕೆ ನೀಡಿದರು.
‘ಕುಖ್ಯಾತ (ನಟೋರಿಯಸ್) ಸ್ವಭಾವ ಹೊಂದಿದ ರೌಡಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಅವರ ಚಲನವಲನ ಗಮನಿಸಲು ತಲಾ ಒಬ್ಬ ಕಾನ್‌ಸ್ಟೆಬಲ್ ಕೂಡ ನಿಯೋಜಿಸಲಾಗಿದೆ. ಪೊಲೀಸರ ಕಣ್ಣು ತಪ್ಪಿಸಿ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ. ಗುಂಪು ಚಟುವಟಿಕೆಯಲ್ಲಿ ತೊಡಗುವುದು, ಕೊಲೆ, ಸುಲಿಗೆಯಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡುವುದು ಕಂಡುಬಂದರೂ ಕಂಬಿ ಎಣಿಸಬೇಕಾಗುತ್ತದೆ’ ಎಂದರು.
ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ ಮಾರ್ಗದರ್ಶನದಲ್ಲಿ ಈ ಪರೇಡ್ ನಡೆಯಿತು. ಅಪರಾಧ ವಿಭಾಗದ ಡಿಸಿಪಿ ಶ್ರೀಕಾಂತ ಕಟ್ಟಿಮನಿ, ದಕ್ಷಿಣ ಉಪ ವಿಭಾಗದ ಎಸಿಪಿ ಅಂಶುಕುಮಾರ, ಉತ್ತರ ಉಪ ವಿಭಾಗದ ಎಸಿಪಿ ದೀಪನ್, ಸಬ್‌ಅರ್ಬನ್ ಎಸಿಪಿ ಜೆ.ಎಚ್.ಇನಾಮದಾರ, ಇನ್‍ಸ್ಪೆಕ್ಟರ್‌ಗಳಾದ ಪಂಡಿತ ಸಗರ, ಅಸ್ಲಂ ಭಾಷಾ, ಚಂದ್ರಶೇಖರ ತಿಗಡಿ, ಶಾಂತಿನಾಥ, ಅರುಣಕುಮಾರ, ವಜೀರ್ ಅಹ್ಮದ್, ರಾಘವೇಂದ್ರ ಹಾಗೂ ಸಿಬ್ಬಂದಿ ಈ ವೇಳೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.