ಶನಿವಾರ, ಜುಲೈ 2, 2022
22 °C

ಪಠ್ಯ ಪರಿಷ್ಕರಣ ಸಮಿತಿ ವಜಾಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸೇರಿದಂತೆ ಸಮಿತಿಯಲ್ಲಿನ ಬಹುತೇಕರು ಮೇಲ್ಜಾತಿಯ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಇತರ ಸಮುದಾಯಗಳಿಗೆ ಆದ್ಯತೆ ನೀಡದ ಹಾಗೂ ಮನುವಾದವನ್ನೇ ಪಠ್ಯದಲ್ಲಿ ತುಂಬಲು ಶಿಫಾರಸು ಮಾಡಿದ ಈ ಸಮಿತಿಯನ್ನು ತಕ್ಷಣ ವಜಾ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ಕಾರ್ಯಕರ್ತ ರೋಹಿತ್ ಚಕ್ರತೀರ್ಥ ಆರ್‌ಎಸ್‌ಎಸ್‌ ಕಾರ್ಯಕರ್ತ. ಅವರು ಶಿಕ್ಷಣ ತಜ್ಞರಲ್ಲ. ಹಾಗಾಗಿ ಪಠ್ಯಪುಸ್ತಕ ಪರಿಷ್ಕರಿಸುವ ಯಾವುದೇ ಅರ್ಹತೆ ಇಲ್ಲ. ಪರಿಷ್ಕರಣೆಗೊಂಡಿರುವ ಪಠ್ಯಗಳು ದಲಿತ, ದಮನಿತ, ಮಹಿಳಾ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿವೆ. ಮಾನವೀಯತೆ, ಶಾಂತಿ, ಪ್ರೀತಿ ಮತ್ತು ಮೈತ್ರಿ ಸಾರಿದ ಗೌತಮ ಬುದ್ಧರ ಹೊಸ ಧರ್ಮಗಳ ಉದಯ ಪಠ್ಯವನ್ನು ಕೈಬಿಟ್ಟಿದ್ದಾರೆ. ಅಲ್ಲದೇ, ಹಿರಿಯ ದಲಿತ ಸಾಹಿತಿ ಅರವಿಂದ ಮಾಲಗತ್ತಿ ಅವರ ಬುದ್ಧರ ಕುರಿತ ಪದ್ಯವನ್ನು ಕೈಬಿಡಲಾಗಿದೆ. ಇದೀಗ ದ್ವಿತೀಯ ಪಿಯು ಪಠ್ಯ ಪುಸ್ತಕ ಪರಿಷ್ಕರಣೆಯನ್ನೂ ಇದೇ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಲು ಸರ್ಕಾರ ಮುಂದಾಗಿದೆ. ಇದನ್ನು ಒಪ್ಪಲಾಗದು’ ಎಂದರು.

‘ನೂತನ ಪಠ್ಯಕ್ರಮದಲ್ಲಿ ಮಹಿಳೆಯನ್ನು ತುಚ್ಛವಾಗಿ ಬಿಂಬಿಸಲಾಗಿದೆ. ಸ್ವಾಮಿ ವಿವೇಕಾನಂದರ ಪಠ್ಯವನ್ನೂ ತಿರುಚಲಾಗಿದೆ. ಜಾತೀಯತೆಯ ಅಪಾಯಗಳ ಬಗ್ಗೆ ಅವರ ಬರೆದಿದ್ದ ಪಠ್ಯವನ್ನು ಕೈಬಿಟ್ಟು ಆ ಜಾಗಕ್ಕೆ ಸಂಸ್ಕೃತಿ ವ್ಯಸನ ಹೇರುವ, ಸಂಸ್ಕೃತಿ ಇಲ್ಲದವರ ಕಾಡು ಜನರು ಎಂಬ ಸಮಾಜ ವಿರೋಧಿ ಪಠ್ಯ ಸೇರಿಸಲಾಗಿದೆ’ ಎಂದು ಟೀಕಿಸಿದರು.

ಆರ್‌ಎಸ್‌ಎಸ್ ಸ್ಥಾಪಕ ಕೆ.ಬಿ.ಹೆಡಗೆವಾರ್ ಪಠ್ಯ ಸೇರಿಸುವ ಮೂಲಕ ಮಕ್ಕಳಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಹೀಗಾಗಿ, ಹೊಸ ಪಠ್ಯಕ್ರಮವನ್ನು ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ತರಬಾರದು. ಹಿಂದಿನ ಹಳೆ ಪಠ್ಯಕ್ರಮ ಮುಂದುವರಿಸಬೇಕು. ಪಿ.ಲಂಕೇಶ, ಸಾರಾ ಅಬೂಬಕರ್, ಎಲ್. ಬಸವರಾಜ, ಕೆ.ನೀಲಾ ಮತ್ತು ಬಿ.ಟಿ.ಲಲಿತಾ ನಾಯಕ್ ಅವರ ಪಠ್ಯವನ್ನು ಕೈಬಿಟ್ಟಿರುವ ಹಿಂದಿನ ದುರದ್ದೇಶವಾದರೂ ಏನು’ ಎಂದು ಪ್ರಶ್ನಿಸಿದರು.

ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ, ಅರ್ಜುನ ಗೊಬ್ಬುರ, ಜಿಲ್ಲಾ ಸಂಚಾಲಕ ಮಹಾದೇವ ಕೋಳಕೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು