ಸೋಮವಾರ, ಡಿಸೆಂಬರ್ 5, 2022
19 °C

₹200 ಕೋಟಿ ಬಡ್ಡಿರಹಿತ ಸಾಲ ವಿತರಣೆ; ತೇಲ್ಕೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ‘ಜಿಲ್ಲೆಯ ಸೇಡಂ ‍ಪಟ್ಟಣದಲ್ಲಿ ನಡೆಯುವ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದಲ್ಲಿ 5 ಸಾವಿರ ಮಹಿಳಾ ಸ್ವಸಹಾಯ ಸಂಘಗಳು ಹಾಗೂ 10 ಸಾವಿರ ರೈತರಿಗೆ ಬಡ್ಡಿ ರಹಿತವಾಗಿ ₹200 ಕೋಟಿ ಸಾಲ ವಿತರಿಸಲಾಗುವುದು’ ಎಂದು ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.

‘ರಾಜ್ಯ ಸಹಕಾರ ಮಹಾಮಂಡಳ, ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ರಾಜ್ಯ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ, ರಾಜ್ಯ ಸಹಕಾರ ಕೈಗಾರಿಕಾ ಮಹಾಮಂಡಳಿ, ಹಾಪ್‌ಕಾಮ್ಸ್, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಪ್ರಾಂತ್ಯದ ವಿವಿಧ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯಿಂದ ಈ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನ.14ರ ಬೆಳಿಗ್ಗೆ 11.15ಕ್ಕೆ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗಳಿಗೆ ಸಾಲದ ಪತ್ರ, ಆರೋಗ್ಯ ಕಾರ್ಡ್, ಕಾರ್ಮಿಕ ಕಾರ್ಡ್‌ ವಿತರಿಸಿ, ಯಶಸ್ವಿನಿ ಯೋಜನೆಗೆ ಮರುಚಾಲನೆ ನೀಡುವರು. ಸಹಕಾರ ಕ್ಷೇತ್ರದಲ್ಲಿ ದುಡಿದ ಸಾಧಕರಿಗೆ ‘ಸಹಕಾರ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು’ ಎಂದರು.

‘ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಬಳ್ಳಾರಿ ಮತ್ತು ಕಲಬುರಗಿ ಜಿಲ್ಲಾ ಹಾಲು ಒಕ್ಕೂಟ ಮಹಾಮಂಡಳದ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಸಹಕಾರ ಸಂಘಗಳು ಸಹ ಬೆಂಬಲ ವ್ಯಕ್ತಪಡಿಸಿವೆ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಮೇಲುಸ್ತುವಾರಿ ತಂಡ ರಚಿಸಲಾಗಿದೆ. ಪಕ್ಷದ ವತಿಯಿಂದ 1,000 ಕಾರ್ಯಕರ್ತರು ಸ್ವಯಂ ಸೇವಕರಾಗಿ ಶ್ರಮಿಸುವರು’ ಎಂದು ಅವರು ವಿವರಿಸಿದರು.

‘ಸಮಾರಂಭಕ್ಕೆ ಜನರನ್ನು ಕರೆತರಲು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ 500 ಬಸ್ ಮತ್ತು 2,000 ಇತರ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಗಣ್ಯರಿಗೆ  10 ಸಾವಿರ ವಿಐಪಿ ಕಾರ್ಡ್ ವಿತರಿಸಿ, ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. 500 ಬಾಣಸಿಗರು ಅಡುಗೆ ತಯಾರಿಸಲಿದ್ದು, ಬೆಳಿಗ್ಗೆ 9ರಿಂದ ಊಟ ಶುರವಾಗಲಿದೆ’ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಆರ್ ಸಜ್ಜನ್, ಸಿಇಒ ಶರಣಬಸಪ್ಪ ಎ.ಬೆಣ್ಣೂರ, ಸದಸ್ಯ ಗೌತಮ ಪಾಟೀಲ, ನಾಮನಿರ್ದೇಶಿತ ಸದಸ್ಯ ಕಲ್ಯಾಣರಾವ್ ಪಾಟೀಲ ಮಳಖೇಡ, ಶರಣಬಸಪ್ಪ ಅಷ್ಟಗಿ ಹಾಗೂ ಚಂದ್ರಶೇಖರ ತಳ್ಳಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.